ಬೆಂಗಳೂರು: ಕಳೆದ ಎರಡು ವಾರದಿಂದ ರಾಜ್ಯಾದ್ಯಂತ ಚರ್ಚೆಯಲ್ಲಿದ್ದ ರಾಜ್ಯಸಭೆ ಚುನಾವಣೆ ಕೊನೆಗೂ ಮುಕ್ತಾಯ ಕಂಡಿದ್ದು, ಜೆಡಿಎಸ್-ಕಾಂಗ್ರೆಸ್ ನಡುವಿನ ಜಗಳದಲ್ಲಿ ಬಿಜೆಪಿ ಒಂದು ಹೆಚ್ಚುವರಿ ಸ್ಥಾನವನ್ನು ಗಳಿಸಿಕೊಂಡಿದೆ. ನಿರೀಕ್ಷೆಯಂತೆಯೇ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮೊದಲ ಪ್ರಾಶಸ್ತ್ಯದ ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಜೈರಾಮ್ ರಮೇಶ್ ಗೆಲುವೂ ಸಲೀಸಾಗಿದ್ದು, ನಾಲ್ಕನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್ ಸಿರೋಯಾ ಗೆಲುವಿನ ನಗೆ ಬೀರಿದ್ದಾರೆ.
ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡುತ್ತಾರೆ ಎಂಬ ಹಿನ್ನೆಲೆಯಲ್ಲಿ ಚುನಾವಣೆ ಸಾಕಷ್ಟು ನಿರೀಕ್ಷೆ ಕೆರಳಿಸಿತ್ತು. ಅದರಂತೆಯೇ ಇಬ್ಬರು ʼಶ್ರೀನಿವಾಸʼಗಳು ಅಡ್ಡಮತದಾನ ಮಾಡಿದರು. ಕೋಲಾರ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್‌ಗೆ ಮತ ನೀಡಿದರೆ, ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್‌ಗೆ ಮತ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೈರಾಮ್, ನಿರ್ಮಲಾ ಜಗ್ಗೇಶ್ ʼಮೊದಲ ಪ್ರಾಶಸ್ತ್ಯʼದ ಗೆಲುವು
ಸಂಜೆ 7.30: ರೇವಣ್ಣ ಅವರು ಚಲಾಯಿಸಿದ್ದ ಮತವನ್ನು ಕೇಂದ್ರ ಚುನಾವಣಾ ಆಯೋಗ ಸಿಂಧು ಎಂದು ಘೋಷಣೆ ಮಾಡಿದೆ. ಸಂಜೆ ಐದು ಗಂಟೆಗೆ ಆರಂಭವಾದ ಮತ ಎಣಿಕೆಯನ್ನು, ರೇವಣ್ಣ ಮತದ ಕುರಿತು ತೀರ್ಮಾನದ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಕೇಂದ್ರ ಚುನಾವಣೆ ಆಯೋಗದಿಂದ ಹಸಿರು ನಿಶಾನೆ ಬಂದಿದ್ದು, ಸದ್ಯದಲ್ಲೆ ಮತ ಎಣಿಕೆ ಪುನಾರಂಭ ಆಗಲಿದೆ.
ಸಂಜೆ 6.00: ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ತಮ್ಮ ಮತವನ್ನು ಬಹಿರಂಗಪಡಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆ ಮತ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಬೆಳಗ್ಗೆ ಎಲ್ಲರಿಗಿಂತಲೂ ಮೊದಲೇ ರೇವಣ್ಣ ಮತ ಚಲಾಯಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಪಕ್ಷಕ್ಕೆ ತಾವೇ ಏಜೆಂಟ್ ಆಗಿದ್ದರು. ತಾವು ಮತ ಚಲಾಯಿಸಿದ ನಂತರ ಯಾರಿಗೂ ತೋರಿಸುವ ಅವಶ್ಯಕತೆ ಇರಲಿಲ್ಲ. ಆದರೆ ಮತದಾನದ ನಂತರ ತಮ್ಮ ಮತವನ್ನು ಕಾಂಗ್ರೆಸ್‌ನ ಏಜೆಂಟ್ ಡಿ.ಕೆ. ಶಿವಕುಮಾರ್ ಅವರಿಗೆ ತೋರಿಸಿದ್ದರು ಎಂದು ಕಾಂಗ್ರೆಸ್ ದೂರು ನೀಡಿತ್ತು.
ಸಂಜೆ ಐದು ಗಂಟೆಗೆ ಮತಪತ್ರಗಳ ಬಂಡಲ್‌ಗಳನ್ನು ಒಂದೆಡೆ ಇರಿಸಲು ಅಧಿಕಾರಿಗಳು ಆರಂಭಿಸಿದರು. ಅದಕ್ಕೂ ಮುನ್ನ ರೇವಣ್ಣ ಅವರ ಮತದ ಕುರಿತು ನಿರ್ಧಾರ ಕೈಗೊಳ್ಳುವ ಸಲುವಾಗಿ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಮದ್ಯಾಹ್ನ 3.30: (ಶ್ರೀನಿವಾಸ ಗೌಡ, ಕೋಲಾರ ಶಾಸಕ) ನಾನು ಕಾಂಗ್ರೆಸ್‌ಗೆ ಮತ ನೀಡಿದ್ದೇನೆ. ಏಕೆಂದರೆ ನಾನು ಆ ಪಕ್ಷವನ್ನು ಇಷ್ಟ ಪಡುತ್ತೇನೆ. ಈ ಹಿಂದೆಯೂ ಕಾಂಗ್ರೆಸ್‌ನಲ್ಲಿ ಸಚಿವನಾಗಿದ್ದೆ.
ಮದ್ಯಾಹ್ನ 3 ಗಂಟೆ: (ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಏಜೆಂಟ್) ನಾನು ಪಕ್ಷದ ಏಜೆಂಟ್ ಆಗಿದ್ದಿಕೊಂಡು ನಾನು ಕಣ್ಣಲ್ಲಿ ನೋಡಿದ್ದನ್ನು ಮಾತ್ರ ಹೇಳಬಹುದು. ಗೌಪ್ಯ ಮತದಾನದ ವಿಚಾರ ಮಾತನಾಡಲು ನನಗೆ ಹಕ್ಕಿಲ್ಲ. ನಾವು 69 ಜನರಿಗೆ ವಿಪ್ ನೀಡಿದ್ದೆವು, ಅವರೆಲ್ಲರೂ ಮತ ಹಾಕಿರುವುದನ್ನು ಕಣ್ಣಲ್ಲಿ ನೋಡಿದ್ದೇನೆ. ನಮ್ಮ ಶಾಸಕರ ಕೆಲಸ ಸಮಾಧಾನ ತಂದಿದೆ. 69 ಮತಗಳೂ ನಮಗೇ ಬಂದಿವೆ, ಜೆಡಿಎಸ್ ಮತಗಳು ನಮಗೆ ಬಂದಿದೆ ಎಂದು ಹೇಳಲು ನನಗೆ ಯಾವುದೇ ಮಾಹಿತಿ ಇಲ್ಲ. ಶ್ರೀನಿವಾಸಗೌಡರು ನಮಗೆ ಬೇಕಾದವು, ನಮ್ಮ ಜತೆ ಇದ್ದವರು. ನಿನ್ನೆ ನನ್ನ ಮನೆಗೂ ಬಂದು ಭೇಟಿ ಮಾಡಿ ಹೋಗಿದ್ದರು. ಮತದಾನದ ವಿಚಾರದಲ್ಲಿ ಅವರಿಗೇ ಬಿಟ್ಟಿದ್ದೇವೆ. ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಮದ್ಯಾಹ್ನ 2.45: (ಎಸ್.ಆರ್. ಶ್ರೀನಿವಾಸ್, ಗುಬ್ಬಿ ಶಾಸಕ) ಯಡಿಯೂರಪ್ಪ ಸರ್ಕಾರ ರಚನೆ ಆಗುವಾಗ ನನಗೆ ಮೂವತ್ತು ಕೋಟಿ ಕೊಡುತ್ತೇವೆ, ಸಚಿವರಾಗಿ ಬನ್ನಿ ಎಂದರು. ಆದರೆ ಪಕ್ಷೇತರನಾಗಿ ಗೆದ್ದರೂ ಇವರ ಮೇಲೆ ವಿಶೇಷ ಗೌರವ ಇದ್ದದ್ದರಿಂದ ಅವರ ಪಕ್ಷಕ್ಕೆ ಹೋಗಿದ್ದೆ. ನಾವು ಗುಬ್ಬಚ್ಚಿ ಇದ್ದಂಗೆ. ನಾವು ಬಡ ರೈತರ ಮಗ. ಅವರನ್ನು ಎದುರುಹಾಕಿಕೊಂಡು ಬದುಕೋಕೆ ಆಗುತ್ತ? ಕುಮಾರಸ್ವಾಮಿ ನನ್ನನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂದರೆ ನಂಬುವುದಕ್ಕೆ ಆಗುವುದಿಲ್ಲ. ಅವರ ಸೊಸೆಯ ಸೀಮಂತಕ್ಕೆ ಹೋದಾಗಲೂ ಮಾತನಾಡಿಸಲಿಲ್ಲ. ಇಂಥವರು ನನಗೆ ಮತ್ತೆ ಬಿ ಫಾರಂ ಕೊಡ್ತಾರೆ ಎಂದರೆ ನಂಬೋಕೆ ಆಗುತ್ತದ? ನಾನು ಮತದಾನದಲ್ಲಿ ಖಾಲಿ ಪತ್ರ ಹಾಕಿಲ್ಲ.
ಮದ್ಯಾಹ್ನ 2.30: (ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ) ಮೂರು ವರ್ಷದಿಂದಲೂ ಅಸಮಾಧಾನ ಇದೆ. ಕಳೆದ ಚುನಾವಣೆಯಲ್ಲೂ ಜೆಡಿಎಸ್‌ಗೇ ನನ್ನ ಮತ ಎಂದು ಹೇಳಿದ್ದೆ, ಈಗಲೂ ನನ್ನ ಮತ ಜೆಡಿಎಸ್‌ಗೆ. ನನ್ನ ಕ್ಷೇತ್ರದ ಜನರು ಜೆಡಿಎಸ್‌ಗಾಗಿ ನನಗೆ ಮತ ನೀಡಿದ್ದಾರೆ. ಈ ಪಕ್ಷದಲ್ಲಿದ್ದು ಬೇರೆ ಪಕ್ಷಕ್ಕೆ ಮತ ಹಾಕಿದರೆ ಮತದಾರರಿಗೆ ಅವಮಾನ ಮಾಡಿದಂತಾಗುತ್ತದೆ. ಕ್ಷೇತ್ರದ ಜನರು ಕೊಟ್ಟ ಸೂಚನೆ ಪ್ರಕಾರ ಹಾಗೂ ಜೆಡಿಎಸ್ ಪರವಾಗಿ ಓಟ್ ಹಾಕಿದ್ದೇನೆ. ಮುಂದೆ ಏನಾಗುತ್ತದೆಯೋ ಅದು ಮುಂದೆ. ಇಂದಿನ ರಾಜಕಾರಣ ಹೇಗಿದೆ ಎನುವುದು ಬೇಸರ ತಂದಿದೆ. ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಬೇಕೆ ಬೇಡವೇ ಎಂದು ನೋಡುತ್ತಿದ್ದೇನೆ. ನಿಂತರೂ ನನ್ನ ತೀರ್ಮಾನ ಏನೂ ಇಲ್ಲ. ಜನರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ.
ಮದ್ಯಾಹ್ನ 2: (ಶರತ್ ಬಚ್ಚೇಗೌಡ, ಪಕ್ಷೇತರ ಶಾಸಕ) ನನ್ನ ಕುಟುಂಬ ಅನೇಕ ದಶಕಗಳಿಂದ ರಾಜಕಾರಣದಲ್ಲಿದೆ. ನನಗೆ ಗೌರವ ಸಿಕ್ಕ ಕಡೆಗೆ ಮತದಾನ ಮಾಡಿದ್ದೇನೆ. ನಾನು ಗುಪ್ತ ಮತದಾನ ಮಾಡಿದ್ದೇನೆ. ಯಾರಿಗೂ ತೋರಿಸುವ ಅಗತ್ಯ ನನಗಿಲ್ಲ. ತಾಲೂಕಿನ ಜನರಿಗೆ ಯಾವ ರೀತಿ ಘನತೆ ಗೌರವ ಸಿಗುತ್ತೋ ಅಲ್ಲಿಗೆ ಮತದಾನ ಮಾಡಿದ್ದೇನೆ.
ಮದ್ಯಾಹ್ನ 1.15: (ಡಿ.ಕೆ.ಸುರೇಶ್, ಸಂಸದ) ಸಿದ್ದರಾಮಯ್ಯ ಸೈದ್ದಾಂತಿಕವಾದ ಮಾತಗಳನ್ನು ಆಡುತ್ತಿದ್ದಾರೆ. ಯಾರಿಗೆ ಬೇಕಾದರೂ ಮತ ಕೇಳಬಹುದು. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಪತ್ರದ ಮೂಲಕ ಮತ ಕೇಳಿದ್ದಾರೆ ಅದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ. ಬಹಿರಂಗವಾಗಿಯೇ ಮತಯಾಚನೆ ಮಾಡಿದ್ದಾರೆ. ಜೆಡಿಎಸ್‌ಗೆ ಎಲ್ಲಾ ಸಂದರ್ಭದಲ್ಲು ಅವಕಾಶ ಮಾಡಿಕೊಟ್ಟಿದ್ದೇವೆ, ನಿಮ್ಮ ಮನೆ ಬಾಗಿಲಿಗೆ ಬಂದು ಅಧಿಕಾರ ಕೊಟ್ಟಿದ್ದೇವೆ. ನಿಮ್ಮಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅನುಕೂಲವಾಗಿಲ್ಲ. ಬಿಜೆಪಿ ವಿರುದ್ಧ ಸಮರ ಸಾರಲು ಜೆಡಿಎಸ್ ಕೈಜೋಡಿಸಬೇಕು.