Site icon Vistara News

ರಾಜ್ಯಸಭೆ ಚುನಾವಣೆ | ಬಿಜೆಪಿ ಅಭ್ಯರ್ಥಿ ಗೆದ್ದಾಯಿತು ಎಂದು HDK ಘೋಷಣೆ ಮಾಡಿದ್ದು ಏಕೆ?

basavaraj bommai voting

ಬೆಂಗಳೂರು: ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕು ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿಯಾಗಿ ಬಿಜೆಪಿಯ ಲೆಹರ್‌ಸಿಂಗ್‌ ಸಿರೋಯಾ ಗೆದ್ದಾಗಿದೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ರಾಜ್ಯಸಭೆ ಚುನಾವಣೆ ಮತದಾನ ಇನ್ನೂ ಆರಂಭವಾಗುವುದಕ್ಕೂ ಮುನ್ನವೇ ಕುಮಾರಸ್ವಾಮಿ ಈ ಘೋಷಣೆ ಮಾಡಲು ಕಾರಣವಿದೆ.

ಬೆಳಗ್ಗೆ 9 ಗಂಟೆಗೆ ವಿಧಾನಸೌಧದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಯಾವುದೇ ಕೆಲಸ ಮಾಡಲು ಕಾಲ, ಘಳಿಗೆ, ಮುಹೂರ್ತ ನೋಡುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಅಮೃತಹಸ್ತದಿಂದಲೇ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಆದರೆ ಮತದಾನ ಆರಂಭವಾಗುವುದಕ್ಕೂ ಮುನ್ನವೇ, ವಿಧಾನಸೌಧಕ್ಕೆ ಆಗಮಿಸಿದ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ | ಇಂದು ರಾಜ್ಯಸಭೆ ಮತದಾನ, ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯುವುದು ಹೀಗೆ

ಅದಾಗಲೇ ಕೋಲಾರ ಶಾಸಕ ಶ್ರೀನಿವಾಸ ಗೌಡ ಜೆಡಿಎಸ್‌ ವಿಪ್‌ ಉಲ್ಲಂಘಿಸಿ ಅಡ್ಡಮತದಾನ ಮಾಡುತ್ತಾರೆ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಶ್ರೀನಿವಾಸ್ ಗೌಡರನ್ನು ಬ್ರೈನ್ ವಾಶ್ ಮಾಡಿದ್ದಾರೆ. ಈ ಮೂಲಕ ರಮೇಶ್ ಕುಮಾರ್, ಸಿದ್ದರಾಮಯ್ಯ ಸೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಆದರೂ ನಾವು ಭರಸವೆ ಕಳೆದುಕೊಂಡಿಲ್ಲ. ಆತ್ಮಸಾಕ್ಷಿಯ ಮತ ನಮಗೂ ಬಾಣದ ರೀತಿಯಲ್ಲಿ ಬೀಳಬಹುದು ಎಂಬ ಭರಸವೆ ಇದೆ.

ನಾವು ಯಾರಿಗೂ ವೈಯಕ್ತಿಕವಾಗಿ ಮಾತನಾಡಿಲ್ಲ. ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತವೂ ಬೀಳದಂತೆ ನೋಡಿಕೊಳ್ಳಲು ಕಾಂಗ್ರೆಸ್‌ನವರು ಸಜ್ಜಾಗಿದ್ದಾರೆ. ಶನಿವಾರದ ನಂತರ ನಿಜವಾಗಿ ಬಿಜೆಪಿ ಟೀಂ ಯಾರು ಅಂತ ಗೊತ್ತಾಗುತ್ತದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯ ಚುನಾವಣಾ ಏಜೆಂಟ್‌ ಸಿ.ಟಿ. ರವಿ ಅವರು ಕಣ್ತಪ್ಪಿನಿಂದಾಗಿ ಸಿದ್ದರಾಮಯ್ಯ ಕೊಠಡಿಗೆ ಪ್ರವೇಶಿಸಿದ್ದಾರೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ಅಪ್ಪಿತಪ್ಪಿ ಯಾರಾದರೂ ಇನ್ನೊಬ್ಬರ ಕೊಠಡಿಗೆ ಹೋಗ್ತಾರ? ಹೀಗೆ ಹೇಳಿದರೆ ಯಾರಾದರೂ ನಂಬುತ್ತಾರ? ತಮ್ಮ ಅಭ್ಯರ್ಥಿ ಗೆಲ್ಲೋದಕ್ಕೆ ಸಹಾಯ ಮಾಡಿದ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಲು ಹೋಗಿರುತ್ತಾರೆ ಎಂದು ವಾಗ್ದಾಳಿ ಮುಂದುವರಿಸಿದರು.

ಬೇರೆಯವರು ತಾಳಿ ಕಟ್ಟಿರೋರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌?

ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್‌ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರ ಕುರಿತು ರಾಜ್ಯ ಜೆಡಿಎಸ್‌ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಎಂದಿನಂತೆ ಹಾಸ್ಯದ ಧಾಟಿಯಲ್ಲಿ ತಿವಿದಿದ್ದಾರೆ. ಬೇರೆಯವರು ತಾಳಿ ಕಟ್ಟಿರೋರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌? ಪಕ್ಕದ ಮನೆಯ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ? ಇದು ನೈತಿಕತೆಯಾ?

ಬಿಜೆಪಿಯನ್ನು ಸೋಲಿಸಬೇಕು ಎಂಬುದು ನಿಮ್ಮ ಉದ್ದೇಶವಾದರೆ ಮೊದಲ ಓಟನ್ನು ನಿಮಗೆ ಹಾಕಿಕೊಂಡು ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್‌ ಅಭ್ಯರ್ಥಿಗೆ ಹಾಕಿ. ನಾವು ಎರಡನೇ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್‌ಗೆ ನೀಡಲು ಸಿದ್ಧರಾಗಿದ್ದೇವೆ ಆದರೆ ಅವರು ತಯಾರಿಲ್ಲ. ಹಿಂದಿನ ಚರಿತ್ರೆ ನನಗೆ ಗೊತ್ತಿದೆ. ನಮ್ಮನ್ನು ಪೀಡಿಸದೆ ನಮ್ಮ ಪಾಡಿಗೆ ಬಿಟ್ಟುಬಿಡಿ. ನಾವು ಬಿಚ್ಚೋಕೆ ಶುರು ಮಾಡಿದರೆ ನಿಮಗೆ ಓಡಾಡೋಕೆ ಕಷ್ಟ ಆಗುತ್ತದೆ ಎಂದು ಇಬ್ರಾಹಿಂ ಎಚ್ಚರಿಕೆ ನೀಡಿದರು.

ಫಲಿತಾಂಶಕ್ಕೆ ಕಾಯಬೇಡಿ ಎಂದ ಬಿಎಸ್‌ವೈ

ಫಲಿತಾಂಶಕ್ಕಾಗಿ ಸಂಜೆವರೆಗೆ ಕಾಯಬೇಡಿ. ಲೆಹರ್‌ಸಿಂಗ್‌ ಸಿರೋಯಾ ಸೇರಿ ಬಿಜೆಪಿಯ ಮೂವರೂ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಮತದಾನದ ನಂತರ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ನಮ್ಮ ಅಭ್ಯರ್ಥಿಗಳು ನಿರೀಕ್ಷೆಯಂತೆ ಗೆಲ್ಲುತ್ತಾರೆ. ಯಾವುದೇ ಅಡ್ಡಿ ಆತಂಕಗಳು ಇಲ್ಲ ಎಂದರು.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್‌: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!

Exit mobile version