Site icon Vistara News

Anna Bhagya : 114 ಬರಪೀಡಿತ ತಾಲೂಕುಗಳಿಗೆ ಇನ್ಮುಂದೆ 10 ಕೆಜಿ ಅಕ್ಕಿ: ಕೆ.ಎಚ್. ಮುನಿಯಪ್ಪ

KH Muniyappa and Rice

ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ಹಲವು ಕಡೆ ಬರ ಆವರಿಸಿದೆ. ಈ ನಿಟ್ಟಿನಲ್ಲಿ ಬರಪೀಡಿತ ತಾಲೂಕುಗಳ (Drought hit taluk) ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ಹೀಗಾಗಿ ಸದ್ಯ 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದ್ದು, ಈ ಎಲ್ಲ ತಾಲೂಕುಗಳಿಗೆ ಅನ್ನ ಭಾಗ್ಯ ಯೋಜನೆ (Anna Bhagya Scheme) ಅಡಿ ಹಣದ ಬದಲು 10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರದಿಂದ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ (Food Minister KH Muniyappa) ಹೇಳಿದರು.

ಸೋಮವಾರ (ಸೆಪ್ಟೆಂಬರ್‌ 4) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಚ್.‌ ಮುನಿಯಪ್ಪ, ಈ ಬರಪೀಡಿತ ತಾಲೂಕುಗಳಿಗೆ 10 ಕೆಜಿ ಅಕ್ಕಿ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ಕೇಂದ್ರ ಸರ್ಕಾರ (Central Government) ನೀಡುವ 5 ಕೆಜಿ ಅಕ್ಕಿ ಜತೆಗೆ ರಾಜ್ಯದಿಂದ 5 ಕೆಜಿ ಅಕ್ಕಿಯನ್ನು ಸೇರಿಸಿ ಕೊಡಲಾಗುತ್ತದೆ. ಈ ವರೆಗೆ 5 ಕೆಜಿ ಅಕ್ಕಿಯ ಬದಲು ಹಣವನ್ನು ಖಾತೆಗೆ ಹಾಕಲಾಗುತ್ತಿತ್ತು. ಆದರೆ, ಬರ ಪೀಡಿತ ತಾಲೂಕುಗಳ ಪರಿಸ್ಥಿತಿ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಹಣದ ಬದಲು 10 ಕೆಜೆ ಅಕ್ಕಿಯನ್ನೇ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Cauvery water dispute : ಮೇಕೆದಾಟು ಪಾದಯಾತ್ರೆ ವೇಳೆ ಎಲ್ಲಿ ಹೋಗಿದ್ರಿ? ಕಾವೇರಿ ಹೋರಾಟಗಾರರ ಮೇಲೆ ಹರಿಹಾಯ್ದ ಡಿಕೆಶಿ

ಡಿಬಿಟಿ (ನೇರ ನಗದು ವರ್ಗಾವಣೆ) ವಿಚಾರದಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ಹೋಗಿದೆ. ಜುಲೈ ತಿಂಗಳಿನಲ್ಲಿ 97 ಲಕ್ಷ ಕಾರ್ಡ್‌ದಾರರಿಗೆ ಡಿಬಿಟಿ ಮಾಡಿದ್ದೇವೆ. 3.45 ಕೋಟಿ ಜನರಿಗೆ 566 ಕೋಟಿ ರೂಪಾಯಿ ಬೇಕಾಗುತ್ತದೆ. ಆಗಸ್ಟ್ ತಿಂಗಳಲ್ಲಿ 3.69 ಕೋಟಿ ಜನರಿಗೆ 606 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಬ್ಯಾಂಕ್ ಅಕೌಂಟ್ ಇಲ್ಲದವರು 21 ಲಕ್ಷ ಜನರಿದ್ದಾರೆ. 2 ಲಕ್ಷ ಜನರಿಗೆ ನಾವೇ ಬ್ಯಾಂಕ್ ಅಕೌಂಟ್ ಮಾಡಿದ್ದೇವೆ. 14 ಲಕ್ಷ ಜನರಿಗೆ ನಾವೇ ಅಕೌಂಟ್ ಮಾಡ್ತಾ ಇದ್ದೇವೆ. ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ಕೆ.ಎಚ್.‌ ಮುನಿಯಪ್ಪ ಹೇಳಿದರು.

ಉಚಿತ ಯೋಜನೆಗಳಿಂದ ಆರ್ಥಿಕ ದಿವಾಳಿತನ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಚ್.‌ ಮುನಿಯಪ್ಪ, ಭಾರತ ದೇಶದಲ್ಲಿ ಬಡವರು ಇದ್ದಾರೆ. ಅವರಿಗೆ ಊಟ ಕೊಡಬೇಕು. ಅದಕ್ಕಾಗಿ ಆಹಾರ ಭದ್ರತೆ ಕಾಯ್ದೆಯನ್ನು ತರಲಾಗಿದೆ. ಕೆಲಸ ಕೊಡಲು ನರೇಗಾ ಯೋಜನೆ ಇದೆ. ಅಕ್ಕಿ ಕೊಡುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ತಂದಿದೆ. ಈಗಿನ ಕೇಂದ್ರ ಸರ್ಕಾರ ಈ ಯೋಜನೆ ಮುಂದುವರಿಸಿದೆ ಎಂದು ಹೇಳಿದರು.

ಸನಾತನ ಧರ್ಮವನ್ನು ಕೊರೊನಾ, ಡೆಂಗ್ಯೂ, ಮಲೇರಿಯಾಗೆ ಹೋಲಿಕೆ ಮಾಡಿದ್ದ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಭಾರತದ ವ್ಯವಸ್ಥೆ ಹೇಗಿದೆಯೋ ಆ ರೀತಿ ನಾವು ಹೋಗಬೇಕು. ಭಾರತ ಒಂದು ಧರ್ಮಕ್ಕೆ ಸೇರಿದ್ದಲ್ಲ. ಸಾವಿರಾರು ವರ್ಷಗಳಿಂದ ಎಲ್ಲ ಧರ್ಮದವರೂ ಇದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಎಲ್ಲ ಧರ್ಮದವರೂ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Tippu Controversy : ಟಿಪ್ಪು ವಿಷಯಕ್ಕೆ ಬಂದ್ರೆ ತಲೆ ತೆಗೀತೀನಿ; ಪ್ರಚೋದನಾತ್ಮಕ ಸ್ಟೇಟಸ್‌ ಹಾಕಿದ ಕಿಡಿಗೇಡಿ ಮುಸ್ಲಿಂ ಯುವಕ

ಸಿಎಂ ಸಿದ್ದರಾಮಯ್ಯ ಅವರಿಗೆ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಚ್.‌ ಮುನಿಯಪ್ಪ, ಇದರ ಬಗ್ಗೆ ರಾಯರೆಡ್ಡಿಯವರನ್ನೇ ನೀವು ಕೇಳಬೇಕು. ಎಲ್ಲೆಲ್ಲಿ ಯಾರು ಯಾರು ಪತ್ರ ಬರೆದಿದ್ದಾರೆ? ಯಾರಿಗೆ ಅನನುಕೂಲ ಆಗಿದೆ ಎಂದು ನೀವು ಅವರನ್ನೇ ಕೇಳಬೇಕು. ಶಾಸಕರು ಯಾರೇ ಇರಲಿ ಅವರ ಕೆಲಸವನ್ನು ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಸಣ್ಣಪುಟ್ಟ ಲೋಪದೋಷಗಳು ಇರುತ್ತವೆ. ಅವುಗಳನ್ನು ಸರಿ ಮಾಡಿಕೊಳ್ಳಬೇಕು. ರಾಯರೆಡ್ಡಿಯವರು ನಿರ್ದಿಷ್ಟವಾಗಿ ಹೇಳಿದರೆ ಅದನ್ನು ಸರಿ ಮಾಡೋಣ. ಸಿಎಂ ಸಿದ್ದರಾಮಯ್ಯ ಅವರು ಸರ್ಕಾರವನ್ನು ಸಮರ್ಪಕವಾಗಿ ನಡೆಸುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಹೇಳಿದರು.

ಲೇಟೆಸ್ಟ್ ‌ಸುದ್ದಿಗಳಿಗೆ (Latest Kannada News), ಕರ್ನಾಟಕದ (Karnataka News) ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version