Site icon Vistara News

Karnataka CM : 4ನೇ ದಿನವೂ ಬಗೆಹರಿಯದ ಬಿಕ್ಕಟ್ಟು;‌ ಸಿಎಂ ಅಭ್ಯರ್ಥಿ ಘೋಷಣೆ ವಿಳಂಬಕ್ಕೆ 10 ಕಾರಣ

Fight for CM Post between DK Shivakumar and Siddaramaiah

ನವ ದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಭರ್ಜರಿ ಬಹುಮತವನ್ನು ಪಡೆದು ನಾಲ್ಕು ದಿನ ಕಳೆದರೂ ಮುಖ್ಯಮಂತ್ರಿ ಆಯ್ಕೆ (Karnataka CM) ಮಾಡಲಾಗದೆ ಕಾಂಗ್ರೆಸ್‌ ಹೈಕಮಾಂಡ್‌ (Congress High command) ಸಂಕಷ್ಟದಲ್ಲಿ ಸಿಲುಕಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನಡುವೆ ಸಿಎಂ ಗಾದಿಗಾಗಿನ ಫೈಟ್‌ ತೀವ್ರವಾಗಿದೆ. ಸಿದ್ದರಾಮಯ್ಯ ಅವರು 135 ಶಾಸಕರ ಪೈಕಿ ಬಹುತೇಕರ ಬೆಂಬಲದೊಂದಿಗೆ ಬೀಗುತ್ತಾ ತಮ್ಮ ಹಕ್ಕು ಮಂಡನೆ ಮಾಡುತ್ತಿದ್ದರೆ, ಡಿ.ಕೆ.ಶಿವಕುಮಾರ್‌ ಅವರು ಕಷ್ಟ ಕಾಲದಲ್ಲಿ ಪಕ್ಷವನ್ನು ಎತ್ತಿಹಿಡಿದ ಆಪದ್ಬಾಂಧವನ ರೋಲ್‌ಗಾಗಿ ಸಿಎಂ ಸ್ಥಾನವನ್ನು ಬಯಸುತ್ತಿದ್ದಾರೆ. ಇವರಿಬ್ಬರನ್ನು ಸಮಾಧಾನ ಮಾಡಿ ಒಪ್ಪಿಸುವ ಕೆಲಸದಲ್ಲಿ ಹಿರಿಯ ನಾಯಕರು ನಿರತರಾಗಿದ್ದಾರೆ.

ನಿಜವೆಂದರೆ, ಕಾಂಗ್ರೆಸ್‌ ಹೈಕಮಾಂಡ್‌ ಯಾರು ಮುಖ್ಯಮಂತ್ರಿ ಎನ್ನುವುದನ್ನು ಈಗಾಗಲೇ ತೀರ್ಮಾನಿಸಿದೆ. ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡುವ ವಿಚಾರದಲ್ಲಿ ಬಹುತೇಕ ತೀರ್ಮಾನಕ್ಕೆ ಬಂದಂತಿದೆ. ಆದರೆ, ಇದನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ವಿವರಿಸಿ ಒಪ್ಪಿಸುವ ಕೆಲಸದಲ್ಲಿ ಅದು ಇನ್ನೂ ಯಶಸ್ಸು ಕಂಡಿಲ್ಲ. ಡಿ.ಕೆ. ಶಿವಕುಮಾರ್‌ ಅವರು ಕೂಡಾ ಭಾವನಾತ್ಮಕ ತಂತ್ರಗಳ ಮೂಲಕ ಮುಖ್ಯಮಂತ್ರಿ ಗಾದಿಯನ್ನು ಪಡೆಯುವ ಪ್ರಯತ್ನದಲ್ಲಿದ್ದಾರೆ. ಇದಕ್ಕಾಗಿಯೇ ಅವರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮಧ್ಯ ಪ್ರವೇಶವನ್ನು ಬಯಸುತ್ತಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರು ದಿಲ್ಲಿಯಲ್ಲಿ ಇಲ್ಲದೆ ಇರುವುದರಿಂದ ಅವರಿಗೆ ಹಿನ್ನಡೆಯಾಗಿದೆ.

ಹಾಗಂತ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಾಗಲೀ, ರಾಹುಲ್‌ ಗಾಂಧಿ ಅವರಾಗಲೀ ಅವಸರದಲ್ಲಿ ತೀರ್ಮಾನ ಮಾಡಿ ಗೊಂದಲ ಸೃಷ್ಟಿಸುವ ಉದ್ದೇಶವನ್ನು ಹೊಂದಿಲ್ಲ. ಇಬ್ಬರೂ ನಾಯಕರನ್ನು ಒಪ್ಪಿಸಿಯೇ ಸರ್ಕಾರ ರಚಿಸಬೇಕು ಎಂಬ ಉದ್ದೇಶವನ್ನು ಹೊಂದಿದಂತೆ ಕಾಣುತ್ತಿದೆ. ಇಬ್ಬರೂ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಿರುವಾಗ ಇಬ್ಬರಿಗೂ ಬೇಸರ ಆಗಬಾರದು ಎನ್ನುವುದು ವರಿಷ್ಠರ ನಿಲುವು. ಈ ಕಾರಣಕ್ಕಾಗಿಯೇ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ತಲಾ ಎರಡೆರಡು ಗಂಟೆಗಳ ಕಾಲ ಡಿ.ಕೆ ಶಿವಕುಮಾರ್‌ ಅವರ ಜತೆ ಮಾತುಕತೆ ನಡೆಸಿ ಮನವೊಲಿಕೆಗೆ ಪ್ರಯತ್ನ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೇ ಸಿಎಂ ಎಂದು ಸುದ್ದಿ ಮಾಡುತ್ತಿರುವ ಪಕ್ಷ ನಾಯಕರಿಬ್ಬರಿಗೆ ನೋಟಿಸ್‌ ನೀಡಿ ಎಚ್ಚರಿಕೆಯನ್ನು ನೀಡಲಾಗಿದೆ. ಜತೆಗೆ ಸಿಎಂ ಆಯ್ಕೆ ಆಗಿಲ್ಲ, ಊಹಾಪೋಹದ ಸುದ್ದಿ ಹರಡಬೇಡಿ ಎಂದು ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮನವಿ ಮಾಡಿದ್ದಾರೆ.

ಇದರ ನಡುವೆ, ಇನ್ನಷ್ಟು ಸುತ್ತಿನ ಮಾತುಕತೆಗಳ ಬಳಿಕವೇ ಕಾಂಗ್ರೆಸ್‌ನ ಕರ್ನಾಟಕದ ಮುಖ್ಯಮಂತ್ರಿಯ ಆಯ್ಕೆಯನ್ನು ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ಹಾಗಿದ್ದರೆ, ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಹೆಸರು ವಿಳಂಬಕ್ಕೆ ಕಾರಣವಾದ ಹತ್ತು ಪ್ರಮುಖ ಅಂಶಗಳನ್ನು ನೋಡೋಣ.

ಕಾರಣ 01: ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರೂ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವುದು.
ಕಾರಣ 02: ವರಿಷ್ಠರ ಯಾವುದೇ ಸಂಧಾನ ಸೂತ್ರಕ್ಕೂ ಉಭಯ ನಾಯಕರು ಜಗ್ಗದೆ ಇರುವುದು.
ಕಾರಣ 03: ಅಧಿಕಾರ ಹಂಚಿಕೆ ಸೂತ್ರವನ್ನು ಬಹಿರಂಗವಾಗಿ ಘೋಷಿಸಬೇಕು ಎಂದು ಡಿ.ಕೆ ಶಿವಕುಮಾರ್‌ ಪಟ್ಟು
ಕಾರಣ 04: ಮೊದಲ ಅವಧಿಯ ಸಿಎಂ ಹುದ್ದೆಯನ್ನು ತನಗೇ ನೀಡುವಂತೆ ಡಿಕೆ ಶಿವಕುಮಾರ್‌ ಒತ್ತಾಯ
ಕಾರಣ 05: 5 ವರ್ಷ ಅಧಿಕಾರವನ್ನು ತನಗೇ ನೀಡಬೇಕು ಎಂದು ಪಟ್ಟು ಹಿಡಿದಿರುವ ಸಿದ್ದರಾಮಯ್ಯ
ಕಾರಣ 06: ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರು ಸಂಧಾನ, ಸರಣಿ ಸಭೆ ನಡೆಸಿದರೂ ಸಿಗದ ಫಲ
ಕಾರಣ 07: ಯಾವುದೇ ಕಾರಣಕ್ಕೂ ಗೊಂದಲ ಏರ್ಪಡದಂತೆ ಮುನ್ನೆಚ್ಚರಿಕೆ ವಹಿಸುತ್ತಿರುವ ‘ಕೈ’ಕಮಾಂಡ್
ಕಾರಣ 08: ಇಬ್ಬರನ್ನೂ ಸಮಾಧಾನ ಪಡಿಸುವುದೇ ಹೈಕಮಾಂಡ್‌ನ ಮೂಲ ಧ್ಯೇಯ, ವೈಮನಸ್ಸು, ತಪ್ಪು ಕಲ್ಪನೆಗೆ ಅವಕಾಶವಿಲ್ಲದಂತೆ ಸಿಎಂ ಅಂತಿಮಗೊಳಿಸಲು ಕಸರತ್ತು
ಕಾರಣ 09: ಶಿಮ್ಲಾದಿಂದ ಸೋನಿಯಾ ಆಗಮನಕ್ಕಾಗಿ ಕಾಯುತ್ತಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ
ಕಾರಣ 10: ಮುಖ್ಯಮಂತ್ರಿ ಬಿಕ್ಕಟ್ಟು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಮುಂಜಾಗ್ರತೆ, ಹೀಗಾಗಿ ಗೊಂದಲ ನಿವಾರಣೆಗೆ ಶತಪ್ರಯತ್ನ

ಇದನ್ನೂ ಓದಿ : Karnataka CM: ರಾಹುಲ್‌, ಖರ್ಗೆ ಜತೆ 4 ಗಂಟೆ ಮಾತುಕತೆ; ಪಟ್ಟು ಸಡಿಲಿಸದ ಡಿ.ಕೆ ಶಿವಕುಮಾರ್‌

Exit mobile version