ಚಿಕ್ಕಮಗಳೂರು: ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಸ್ಥಳವನ್ನು ನಿರ್ಧರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಭಾನುವಾರ (ನ.೨೭) ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸ್ಥಳದ ಸಮಸ್ಯೆ ಇದ್ದು, ಅದನ್ನು ಬಗೆಹರಿಸಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಮಲೆನಾಡು ಭಾಗದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಮಸ್ಯೆ ಇದೆ. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ನಿವಾರಿಸಲು ಕಂದಾಯ ಇಲಾಖೆಯವರು ಶೀಘ್ರ ಪರಿಹಾರ ಕಂಡುಕೊಳ್ಳಲಿದ್ದಾರೆ. ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ತಗುಲಿದ್ದು, ಔಷಧಿ ಸಿಂಪಡನೆ ಮತ್ತು ರೋಗ ಹರಡದಂತೆ ಪರಿಹಾರ ಕಂಡುಕೊಳ್ಳಲು 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದೆ. ಈ ಭಾಗದ ಪ್ರವಾಹ ಬಂದು ಹಾಳಾಗಿರುವ ರಸ್ತೆಗಳ ದುರಸ್ತಿಗೆ 5.80 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 5 ಕೋಟಿ ರೂ. ಹೆಚ್ಚಿನ ಅನುದಾನವನ್ನು ಬಿಡುಗಡೆ ಶನಿವಾರವಷ್ಟೇ (ನ. ೨೬) ಬಿಡುಗಡೆ ಮಾಡಲಾಗಿದೆ ಎಂದರು.
ಮುಳ್ಳಯ್ಯನಗಿರಿ ಹಾಗೂ ದತ್ತ ಪೀಠದ ನಡುವೆ ರೋಪ್ ವೇ
ದತ್ತ ಪೀಠ ಈ ಭಾಗದ ಭಾವನೆಗಳ ದೇವಸ್ಥಾನ. ಈ ದೇವಸ್ಥಾನದಲ್ಲಿ ಮೂಲ ಪೂಜೆ ನಡೆಸುವ ಬಗ್ಗೆ ಶಾಸಕ ಸಿ.ಟಿ. ರವಿ ಅವರು ಸುದೀರ್ಘ ಹೋರಾಟ ನಡೆಸಿದ್ದಾರೆ. ಈಗಾಗಲೇ ಕಾನೂನಾತ್ಮಕ ಹೋರಾಟ ನಡೆದಿದ್ದು, ಸೂಕ್ತ ಪರಿಹಾರ ದೊರೆಯಲಿದೆ. ಮುಳ್ಳಯ್ಯನಗಿರಿ ಹಾಗೂ ದತ್ತ ಪೀಠದ ನಡುವೆ ರೋಪ್ ವೇ ನಿರ್ಮಿಸಲು ಆಯವ್ಯಯದಲ್ಲಿ ಅನುದಾನವನ್ನು ಮೀಸಲಿರಿಸಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಿದೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಆನೆ ದಾಳಿಯಿಂದ ಜೀವ ಹಾನಿಯಾದರೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಆನೆ ದಾಳಿಯನ್ನು ತಡೆಯಲು ಪ್ರತಿ ಜಿಲ್ಲೆಗೆ ಸ್ಕ್ವಾಡ್ ರಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ