ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಪಡೆದ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರು 115ನೇ ಜಯಂತ್ಯುತ್ಸವ ಆಚರಣೆ ಜತೆಗೆ ಹಮ್ಮಿಕೊಂಡಿರುವ ಇನ್ನಿತರೆ ಕಾರ್ಯಕ್ರಮಗಳು ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿವೆ.
ತುಮಕೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಆಯೋಜನೆಯಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷ ಜನರನ್ನು ಸೇರಿಸುವ ಅಂದಾಜಿದೆ. ಜಯಂತ್ಯುತ್ಸವ ಕಾರ್ಯಕ್ರಮಗಳನ್ನು ಅಮಿತ್ ಷಾ ಉದ್ಘಾಟಿಸಲಿದ್ದಾರೆ. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿದ್ಧಗಂಗಾ ಶ್ರೀಗಳಿಗೆ ನುಡಿನಮನ ಸಲ್ಲಿಸಲಿದ್ದಾರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶ್ರೀ ಸಿದ್ಧಗಂಗಾ ಫಾರ್ಮಸಿ ಕಾಲೇಜು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೇಂದ್ರ ಸಚಿವರುಗಳಾದಭಗವಂತ ಖೂಬಾ, ಎ. ನಾರಾಯಣಸ್ವಾಮಿ, ರಾಜ್ಯ ಸರ್ಕಾರದ ಸಚಿವರುಗಳಾದ ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮದ ಮೂಲಕ ಬಿಜೆಪಿ ಅನೇಕ ಸಂದೇಶಗಳನ್ನು ನೀಡಲು ಮುಂದಾಗಿದೆ ಹಾಗೂ ಅನೇಕ ನಿರೀಕ್ಷೆಗಳನ್ನೂ ಹೊಂದಿದೆ. (ತುಮಕೂರು ಕಾರ್ಯಕ್ರಮದಿಂದ ಬಿಜೆಪಿ ನಿರೀಕ್ಷಿಸಿರುವ 7 ಲಾಭಗಳು ಕುರಿತು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ)
ಅಮಿತ್ ಷಾ ಭೇಟಿ ಬೆನ್ನಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬಿರುಸುಗೊಂಡಿದೆ. ಅಮಿತ್ ಷಾ ಅವರು ಸಿದ್ಧಗಂಗಾ ಮಠದ ಕಾರ್ಯಕ್ರಮದ ನಂತರ ಸಹಕಾರ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೊನೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋರ್ ಕಮಿಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಕಾರಣವನ್ನೇ ಮುಂದಾಗಿಸಿಕೊಂಡು ಬಿಜೆಪಿಯ ಒಂದು ಗುಂಪು ನಾಯಕತ್ವ ಬದಲಾವಣೆ ಚರ್ಚೆಗೆ ಮರುಚಾಲನೆ ನೀಡಿದೆ. ಮೊದಲಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ವಾದ.
ಕಟೀಲ್ ಅವರು ಮೃದು ಸ್ವಭಾವದವರಾಗಿದ್ದು, ಚುನಾವಣಾ ವರ್ಷದಲ್ಲಿ ಸಾಕಷ್ಟು ಆಕ್ರಮಣಕಾರಿ ಮನೋಭಾವ ಬೇಕಾಗುತ್ತದೆ. ಎದುರಾಳಿಗಳಿಂದ ಬರುವ ಸವಾಲುಗಳನ್ನು ಮೆಟ್ಟಿನಿಲ್ಲುವ ಜತೆಗೆ ಆಂತರಿಕವಾಗಿ ಎದುರಾಗುವ ಅಡೆತಡೆಗಳನ್ನೂ ಮೀರಬೇಕಾಗುತ್ತದೆ. ಇಂತಹ ಕಾರ್ಯಕ್ಕರ ನಳಿನ್ ಕುಮಾರ್ ಅವರು ಸಾಮರ್ಥ್ಯವಂತರಲ್ಲ, ಪ್ರಬಲ ನಾಯಕರೊಬ್ಬರನ್ನು ನೇಮಿಸುವುದು ಸೂಕ್ತ ಎಂಬ ವಾದವಿದೆ. ಆದರೆ ಬಿಜೆಪಿ ಹಿರಿಯ ನಾಯಕರೊಬ್ಬರ ಪ್ರಕಾರ, ಚುನಾವಣೆ ವೇಳೆ ಆಕ್ರಮಣಕಾರಿ ಮನೋಭಾವವೇ ಇರಬೇಕೆಂಬ ನಿಯಮವಿಲ್ಲ. ನಳಿನ್ ಕುಮಾರ್ ಕಟೀಲ್ ಅವರ ಅವಧಿಯಲ್ಲಿ ಸಂಘಟನಾತ್ಮಕವಾಗಿ ಸಾಕಷ್ಟು ಉತ್ತಮ ಕೆಲಸಗಳಾಗಿವೆ. ಗ್ರಾಂ ಸ್ವರಾಜ್ಯ ಸಮಾವೇಶಗಳ ಮೂಲಕ ಹಳ್ಳಿಹಳ್ಳಿಗಳಲ್ಲೂ ಸಂಘಟನೆ ಭದ್ರವಾಗಿದೆ. ಒಂದು ವೃತ್ತಿಪರ ರೀತಿಯಲ್ಲಿ ಸಂಘಟನೆ ನಡೆಯುತ್ತಿದೆ. ಚುನಾವಣಾ ವರ್ಷದಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸುವಷ್ಟು ಪರಿಸ್ಥಿತಿತಿ ದುರ್ಬಲವಾಗಿಲ್ಲ ಎಂದಿದ್ದಾರೆ.
ಇನ್ನು ಎರಡನೆಯದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಕುರಿತ ಚರ್ಚೆ. ಬೊಮ್ಮಾಯಿ ಅವರು ಹೊರಗಿನಿಂದ ಬಂದವರು, ಪಕ್ಷದ ಹಳೆಯ ಕಾರ್ಯಕರ್ತರು ಅವರನ್ನು ಒಪ್ಪುವುದಿಲ್ಲವಾದ್ಧರಿಂದ ಬದಲಾವಣೆ ಮಾಡಬೇಕು ಎನ್ನುವುದು ಕೆಲ ಮೂಲ ಬಿಜೆಪಿಗರ ವಾದ. ಹಿಂದುತ್ವದ ಅಲೆ ಇದೀಗ ದೇಶಾದ್ಯಂತ ಬಲವಾಗಿದ್ದು, ಅದರ ಆಧಾರದಲ್ಲಿ ಚುನಾವಣೆ ಎದುರಿಸಬಲ್ಲ ಸಿ.ಟಿ. ರವಿ, ಬಿ.ಎಲ್. ಸಂತೋಷ್, ಸುನಿಲ್ ಕುಮಾರ್ ಅವರಂತಹವರನ್ನು ಮುಂದಿಟ್ಟುಕೊಂಡು ಹೋದರೆ ಒಳ್ಳೆಯದು ಎನ್ನುವುದು ಈ ಗುಂಪಿನ ವಾದ.
ಮತ್ತಷ್ಟು ಓದಿ: ಅಮಿತ್ ಶಾ ಭೇಟಿ ಬೆನ್ನಲ್ಲೇ ರಾಜ್ಯ ನಾಯಕರಲ್ಲಿ ಢವಢವ: ಏಪ್ರಿಲ್ 1ರಂದು ಚುನಾವಣಾ ರಣʻತಂತ್ರʼ
ಈ ವಿಚಾರವನ್ನು ಅರಿತಿರುವ ಮುಖ್ಯಮಂತ್ರಿ ಬೊಮ್ಮಾಯಿ, ಹಿಂದುತ್ವದ ಕುರಿತು ತುಸು ಹೆಚ್ಚು ಆಸಕ್ತಿಯನ್ನೇ ತೋರಿಸುತ್ತಿದ್ದಾರೆ. ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸುವ ಹೇಳಿಕೆ, ಮತಾಂತರ ನಿಷೇಧ ಕಾನೂನಿನ ಚರ್ಚೆಗೆ ಚಾಲನೆ, ಹಿಜಾಬ್ ವಿವಾದ ನಿರ್ವಹಣೆ, ಇದೀಗ ಹಲಾಲ್-ಜಟ್ಕಾ ವಿಚಾರದಲ್ಲೆಲ್ಲೂ ಹಿಂದುತ್ವ ಸಮೂಹಕ್ಕೆ ಧಕ್ಕೆಯಾಗುವ ಹೇಳಿಕೆಗಳನ್ನು ನೀಡಿಲ್ಲ. ತಾವು ಬಿಜೆಪಿಯ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿರುತ್ತೇನೆ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಜತೆಗೆ, ಕೇಂದ್ರ ನಾಯಕರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನೂ ಕೇಂದ್ರ ನಾಯಕರ ಗಮನಕ್ಕೆ ತರುತ್ತಿದ್ದಾರೆ. ಗುರುವಾರ ರಾತ್ರಿ ವಿಶೇಷ ವಿಮಾನದ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಷಾ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಜತೆಗೆ ಸ್ವತಃ ಬೊಮ್ಮಾಯಿ ಬರಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆಯೂ ಬಿಜೆಪಿಯ ಅಜೆಂಡಾದಲ್ಲಿಲ್ಲ, ಕೆಲವರು ಸುಮ್ಮನೆ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.