ಬೆಂಗಳೂರು: ತುಮಕೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಆಯೋಜನೆಯಾಗಿರುವ ಬೃಹತ್ ಕಾರ್ಯಕ್ರಮವನ್ನು ಅಮಿತ್ ಷಾ ಉದ್ಘಾಟಿಸಲಿದ್ದಾರೆ. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಇದು ನಿಜವಾಗಿ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವವಾದರೂ, ಚುನಾವಣಾ ವರ್ಷದಲ್ಲಿ ಬಿಜೆಪಿ ಲೆಕ್ಕಾಚಾರ ಬೇರೆಯೇ ಇದೆ. ಈ ಕಾರ್ಯಕ್ರಮದ ಮೂಲಕ ಬಿಜೆಪಿ ಅನೇಕ ಗುರಿಗಳನ್ನು ಈಡೇರಿಸಿಕೊಳ್ಳಲು ಮುಂದಾಗಿದೆ. ಅವುಗಳು ಈ ಕೆಳಕಂಡಂತಿವೆ…
ಮತ್ತಷ್ಟು ಓದಿ: ಸಮುದಾಯ ಮತಕ್ಕೆ ಹಗ್ಗಜಗ್ಗಾಟ: ತುಮಕೂರಿನಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರ ಹರಸಾಹಸ
ಬಿಜೆಪಿ ಹೊಂದಿರುವ ನಿರೀಕ್ಷೆಗಳು
- ಚುನಾವಣೆಗೆ ಒಂದು ವರ್ಷವಿರುವಂತೆ ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ಮನವೊಲಿಸುವುದು
- ಸಮುದಾಯದ ಪ್ರಶ್ನಾತೀತ ನಾಯಕರೆನಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ ಎಂಬ ಸಂದೇಶ ನೀಡುವುದು
- ಈ ಹಿಂದೆ ನಾಯಕತ್ವ ಬದಲಾವಣೆ ನಂತರ ಲಿಂಗಾಯತ ಮತಗಳು ಒಡೆದು ಬಿಜೆಪಿ ಕಡೆಗೆ ಬಂದಂತೆ, ಈ ಬಾರಿ ಬೇರೆ ಕಡೆಗೆ ಹೋಗದಂತೆ ತಡೆಯುವುದು
- ಯಡಿಯೂರಪ್ಪ ಅವರು ತೆರೆಗೆ ಸರಿಯುವ ಸನ್ನಿವೇಶನವನ್ನು ಲಾಭವಾಗಿಸಿಕೊಂಡು ವೀರಶೈವ ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ ಎಂ.ಬಿ. ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿಸುವ ತಂತ್ರಕ್ಕೆ ಪ್ರತಿತಂತ್ರ ಹೂಡುವುದು
- ಯಡಿಯೂರಪ್ಪ ಅವರ ನಂತರದಲ್ಲಿ ಸಮುದಾಯದ ನೇತೃತ್ವವನ್ನು ವಹಿಸಲು ಬಿ.ವೈ. ವಿಜಯೇಂದ್ರ ಸಾಮರ್ಥ್ಯ ಹೊಂದಿದ್ದಾರೆ ಎಂದು ನಿರೂಪಿಸಲು ಅವರಿಗೇ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷತೆ ನೀಡಲಾಗಿದೆ
- ಕಾರ್ಯಕ್ರಮಕ್ಕೆ ಬಿಜೆಪಿಯ ನಂಬರ್ ಟು ಎಂದೇ ಪರಿಗಣಿತವಾದ ಅಮಿತ್ ಷಾ ಆಗಮಿಸುವ ಮೂಲಕ ಸಮುದಾಯದ ಜತೆಗೆ ರಾಷ್ಟ್ರೀಯ ಬಿಜೆಪಿ ಇದೆ ಎಂಬ ಸಂದೇಶ ನೀಡುವುದು
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ಧಗಂಗಾ ಶ್ರೀಗಳ ಕುರಿತು ನುಡಿನಮನ ಸಲ್ಲಿಸಲಿದ್ದು, ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ ಎಂಬ ಸಂದೇಶವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡುವುದು