Site icon Vistara News

ಸಿದ್ಧಗಂಗೆಗೆ ಬಂದರೆ ಪೂರ್ವಜನ್ಮದ ಪುಣ್ಯಗಳೆಲ್ಲ ಜಾಗೃತವಾಗುತ್ತವೆ: ಕೇಂದ್ರ ಗೃಹಸಚಿವ ಅಮಿತ್‌ ಷಾ ಬಣ್ಣನೆ

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸಿದರೆ ಪೂರ್ವಜನ್ಮದ ಎಲ್ಲ ಪುಣ್ಯ ಕರ್ಮಗಳೂ ಜಾಗೃತವಾಗುತ್ತವೆ, ಆ ಮೂಲಕ ಉತ್ತಮ ಮಾನವನಾಗಲು ಸಹಕರಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಶುಕ್ರವಾರ ಬಣ್ಣಿಸಿದರು.

ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್‌ ಷಾ, ನಮ್ಮ ದೇಶದಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಕೆಲವನ್ನು ವೈಜ್ಞಾನಿಕವಾಗಿ ಪಂಚಾಂಗ, ಅಕ್ಷಾಂಶ ರೇಖಾಂಶ ನೋಡಿ ನಿಗದಿ ಮಾಡಿದ್ದರೆ ಅನೇಕ ಕ್ಷೇತ್ರಗಳು ದೇವರ ಲೀಲೆಗಳ ಕಾರಣಕ್ಕೆ ಪ್ರಸಿದ್ಧವಾಗಿವೆ. ಆದರೆ ಕೆಲವೇ ಕ್ಷೇತ್ರಗಳು ಅಲ್ಲಿನ ಸಾಧು ಸಂತರ ಕರ್ಮದ ಫಲವಾಗಿ ತೀರ್ಥಕ್ಷೇತ್ರವಾಗಿರುತ್ತವೆ. ಅಂತಹ ಒಂದು ವಿಶಿಷ್ಠ ಕ್ಷೇತ್ರ ಸಿದ್ಧಗಂಗಾ ಕ್ಷೇತ್ರ ಎಂದರು.

ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಸಿದ್ಧಗಂಗಾ ಎಂದು ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ ಮಾತನ್ನು ನೆನೆದ ಅಮಿತ್‌ ಷಾ, ಈ ಮಾತನ್ನು ಮತ್ತಷ್ಟು ವಿಸ್ತರಿಸಿದರು. ಗಂಗೆಯಲ್ಲಿ ಮಿಂದರೆ ಪೂರ್ವಜನ್ಮದ ಪಾಪಗಳೆಲ್ಲವೂ ತೊಳೆದುಹೋಗುತ್ತವೆ. ಅದೇ ರೀತಿ ಸಿದ್ಧಗಂಗೆಗೆ ಬಂದರೆ ಪೂರ್ವಜನ್ಮದ ಎಲ್ಲ ಪುಣ್ಯಕರ್ಮಗಳೂ ಜಾಗೃತವಾಗುತ್ತವೆ. ಅಂತಹ ಪುಣ್ಯ ಕ್ಷೇತ್ರ ಇದು.

ಹೆಚ್ಚಿನ ಓದಿಗೆ: ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಶ್ರೀಗಳ ಹೆಸರು: ಸಿಎಂ ಬೊಮ್ಮಾಯಿ ಘೋಷಣೆ

ತಮ್ಮ ಕರ್ಮದ ಮೂಲಕ ಬಸವಣ್ಣನ ವಚನಗಳನ್ನು ಅನುಷ್ಠಾನ ಮಾಡುವ ಕೆಲಸ ಶಿವಕುಮಾರ ಸ್ವಾಮೀಜಿ ಮಾಡಿದರು. ಶಿವಕುಮಾರ ಸ್ವಾಮೀಜಿಯವರು ನಡೆಸಿದ ಜೀವನವನ್ನು ನಾವೆಲ್ಲರೂ ಪ್ರೇರಣೆಯಾಗಿ ಸ್ವೀಕರಿಸಬೇಕು. ಇದೇ ಕಾರಣಕ್ಕೆ ಅವರನ್ನು ಆಧುನಿಕ ಬಸವಣ್ಣ ಎಂದು ಕರೆಯಲಾಗುತ್ತದೆ. 1930ರಿಂದ ಮಠವನ್ನು ಪಕ್ಷಪಾತ ರಹಿತವಾಗಿ ಮುನ್ನಡೆಸುತ್ತ ಬಂದಿದ್ದಾರೆ.

ಕೆಲವರು ವಚನಗಳ ಮೂಲಕ, ಮತ್ತೆ ಕೆಲವರು ಮಾತಿನ ಮೂಲಕ ತಮ್ಮ ಜೀವನದ ಸಂದೇಶ ನೀಡುತ್ತಾರೆ. ಆದರೆ ಶಿವಕುಮಾರ ಸ್ವಾಮೀಜಿಗಳು ಕರ್ಮದ ಮೂಲಕ ಸಂದೇಶ ನೀಡಿದರು. ಹತ್ತು ಸಾವಿರಕ್ಕೂ ಹೆಚ್ಚು ಎಲ್ಲ ನಂಬಿಕೆಗಳ ಮಕ್ಕಳಿಗೂ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿದರು ಎಂದರು.

ಕೇಮದ್ರದ ಮೋದಿ ಸರ್ಕಾರವೂ ಶಿವಕುಮಾರ ಸ್ವಾಮೀಜಿಯವರ ಮಾರ್ಗದಲ್ಲೇ ನಡೆಯುತ್ತಿದೆ ಎಂದು ಬಣ್ಣಿಸಿದ ಅಮಿತ್‌ ಷಾ, ಕರೊನಾ ಕಾಲದಲ್ಲಿ ಎರಡು ವರ್ಷ ಉಚಿತವಾಗಿ ಆಹಾರ ಧಾನ್ಯ ನೀಡಲಾಯಿತು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಮಕ್ಕಳು ತಮ್ಮ ಮಾತೃಭಾಷೆಯಲ್ಲೆ ಸಾಮಾನ್ಯ ಹಾಗೂ ತಾಂತ್ರಿಕ ಶಿಕ್ಷಣವನ್ನೂ ಪಡೆಯಲು ಅವಕಾಶ ನೀಡಲಾಗಿದೆ. ಮೂರು ಕೋಟಿ ಜನರಿಗೆ ತಮ್ಮದೇ ನೆಮ್ಮದಿಯ ನೆಲೆ ಕಂಡುಕೊಳ್ಳಲು ಸಹಾಯ ಮಾಡಲಾಗಿದೆ. ಈ ಮೂಲಕ ಅನ್ನ, ಅಕ್ಷರ ಹಾಗೂ ಆಶ್ರಯ ಕ್ಷೇತ್ರದಲ್ಲಿ ಕಾರ್ಯೋನ್ಮುಖವಾಗಿದೆ.

ಸಿದ್ಧಗಂಗಾ ಮಠವು ಶೀವಕುಮಾರ ಸ್ವಾಮೀಜಿಯವರ ನಂತರವೂ ಅದೇ ಪರಂಪರೆಯನ್ನು ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದರು.

https://twitter.com/AmitShah/status/1509803628306989062?s=20&t=CXbGELXXR-L4Nsm2leeNaQ
Exit mobile version