Site icon Vistara News

Covid 19 Cases: ರಾಜ್ಯದಲ್ಲಿಂದು 104 ಮಂದಿಗೆ ಕೊರೊನಾ ಪಾಸಿಟಿವ್‌; 8 ಜನ ಡಿಸ್ಚಾರ್ಜ್

Covid 19 test

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 104 ಕೊರೊನಾ ಪಾಸಿಟಿವ್‌ ಪ್ರಕರಣಗಳು (Covid 19 Cases) ಪತ್ತೆಯಾಗಿವೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 271ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಗುಣಮುಖರಾಗಿ 8 ಮಂದಿ ಆಸ್ಪತ್ರೆಯಿಂದ ಶನಿವಾರ ಡಿಸ್ಚಾರ್ಜ್ ಆಗಿರುವುದು ಕಂಡುಬಂದಿದೆ.

ರಾಜ್ಯಾದ್ಯಂತ ಒಟ್ಟು 1,752 ಮಂದಿಗೆ ಕೋವಿಡ್‌ 19 ತಪಾಸಣೆ (RTPCR – 1,195 + RAT – 557) ನಡೆಸಲಾಗಿದ್ದು, ಈ ಪೈಕಿ 104 ಮಂದಿಗೆ ಸೋಂಕು (covid cases in karnataka) ದೃಢಪಟ್ಟಿದೆ. ಶನಿವಾರ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 85 ಪ್ರಕರಣಗಳು ಪತ್ತೆಯಾಗಿದ್ದು, ಚಾಮರಾಜನಗರ 2, ದಕ್ಷಿಣ ಕನ್ನಡ 1, ಮಂಡ್ಯ 1, ಮೈಸೂರು 7, ಶಿವಮೊಗ್ಗ 6, ತುಮಕೂರು 2 ಪ್ರಕರಣ ಪತ್ತೆಯಾಗಿವೆ.

ಒಟ್ಟು 271 ಸೋಂಕಿತರಲ್ಲಿ 258 ಮಂದಿ ಹೋಮ್ ಐಸೋಲೇಶನಲ್ಲಿ ಇದ್ದು, 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ಶನಿವಾರ ಕೊರೊನಾ ಪಾಸಿಟಿವಿಟಿ ದರ ಶೇ. 5.93 ಇದ್ದು, ಮರಣ ಪ್ರಮಾಣ ದರ ಶೂನ್ಯವಿದೆ.

ಇದನ್ನೂ ಓದಿ | Covid 19: ಕೊರೊನಾ ವೈರಸ್‌ ಇನ್ನು ನಮ್ಮ ಜೀವನದ ಭಾಗ, ಅದರೊಂದಿಗೇ ಜೀವಿಸಬೇಕು ಎಂದ ತಜ್ಞರು!

ಒಟ್ಟು ಸಕ್ರಿಯ ಪ್ರಕರಣಗಳು, ಎಲ್ಲೆಲ್ಲಿ ಎಷ್ಟು?

ಬೆಂಗಳೂರಿನಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣಗಳು 234, ಮೈಸೂರು 12, ಶಿವಮೊಗ್ಗ 6, ರಾಮನಗರ 3, ಬಳ್ಳಾರಿ 2, ಬೆಂಗಳೂರು ಗ್ರಾಮಾಂತರ 1, ಚಾಮರಾಜನಗರ 2, ಚಿಕ್ಕಮಗಳೂರು 4, ದಕ್ಷಿಣ ಕನ್ನಡ 3, ಮಂಡ್ಯ 2 ಹಾಗೂ ತುಮಕೂರಿನಲ್ಲಿ 2 ಕೇಸ್‌ಗಳು ಇವೆ.

ರಾಜ್ಯದಲ್ಲಿ ಶುಕ್ರವಾರ 78 ಕೊರೊನಾ ಪಾಸಿಟಿವ್‌ ಪ್ರಕರಣಗಳು (Covid 19 Cases) ಪತ್ತೆಯಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಒಬ್ಬರು ಮೃತಪಟ್ಟಿದ್ದರು. ಒಟ್ಟು 2366 ಮಂದಿಗೆ (1947 RTCPR+ 419 RAT) ಕೋವಿಡ್‌ ಟೆಸ್ಟ್‌ ಮಾಡಲಾಗಿತ್ತು, ಈ ಪೈಕಿ 78 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.

ಇದನ್ನೂ ಓದಿ | Covid Subvariant JN1: ಕೋವಿಡ್‌ ಉಲ್ಬಣ; ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

ಬೆಂಗಳೂರಿನಲ್ಲಿ ಹಲವು ಕಡೆ ಟೆಸ್ಟಿಂಗ್‌ ಆರಂಭ

ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಪಾಲಿಕೆ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟಿಂಗ್ ಆರಂಭವಾಗಿದೆ. ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಧರಿಸಿ ಆರೋಗ್ಯ ಸಿಬ್ಬಂದಿ ಫೀಲ್ಡ್‌ಗೆ ಇಳಿದಿದ್ದಾರೆ. ವಿಲ್ಸನ್ ಗಾರ್ಡನ್‌ನ ಹೊಂಬೇಗೌಡ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟೆಸ್ಟಿಂಗ್ ಶುರುವಾಗಿದ್ದು, ಜನರ ಮಾಹಿತಿ ದಾಖಲಿಸಿಕೊಂಡು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ನಿಜವೆಂದರೆ, ಕೋವಿಡ್‌ ಟೆಸ್ಟ್‌ಗೆ ಸಿಲಿಕಾನ್‌ ಸಿಟಿ ಮಂದಿಯೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಟೆಸ್ಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಕೊರೋನಾ ಆತಂಕ ಬೆನ್ನಲ್ಲೇ ಆರೋಗ್ಯ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version