ಬೆಂಗಳೂರು: ಪ್ರೇಯಸಿಗಾಗಿ ಸರಗಳ್ಳತನ ಮಾಡುತ್ತಿದ್ದ ರಾಜಸ್ಥಾನ ಮೂಲದ ಉಮೇಶ್ ಖತಿಕ್ ಎಂಬಾತನನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದ ಆರೋಪಿ ಉಮೇಶ್ ಖತಿಕ್ ಕಳ್ಳತನ ಮಾಡಿ ವಾಪಸ್ ಹೋಗುತ್ತಿದ್ದ. ಬೆಂಗಳೂರಿಗೆ ಬಂದು ಮೊದಲು ಬೈಕ್ ಕದಿಯುತ್ತಿದ್ದ ಆರೋಪಿ ಉಮೇಶ್, ಬಳಿಕ ಅದೇ ಬೇಕ್‌ನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚೈನ್ ಸ್ನ್ಯಾಚ್ ಮಾಡುತ್ತಿದ್ದ.
ಬೆಂಗಳೂರಿನಲ್ಲಿ ಒಂದೇ ದಿನ ೩ ಕಡೆಗಳಲ್ಲಿ ಆರೋಪಿ ಸರಗಳ್ಳತನ ಮಾಡಿದ್ದ. ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದ ಉಮೇಶ್ ಚೆನ್ನಮ್ಮನಕೆರೆ ಅಚ್ಚುಕಟ್ಟು , ಪುಟ್ಟೇನಹಳ್ಳಿ, ಮಾರತಹಳ್ಳಿಯಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ. ಬಳಿಕ ಹೈದ್ರಾಬಾದ್‌ಗೆ ತೆರಳಿದ್ದ ಆರೋಪಿ ಅಲ್ಲಿಯೂ ಕೂಡ ಸರಗಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಉಮೇಶ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಉಮೇಶ್ ವಿರುದ್ಧ ರಾಜಸ್ಥಾನದಲ್ಲಿ 18, ಹೈದ್ರಾಬಾದ್‌ನಲ್ಲಿ 08 ಮತ್ತು ಬೆಂಗಳೂರಿನಲ್ಲಿ 07 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು, ರಾಜಸ್ಥಾನ ಮೂಲದ ಉಮೇಶ್ ಖತಿಕ್ ಅಪ್ರಾಪ್ತೆಯನ್ನು ಮದುವೆಯಾಗಿ ಪೋಕ್ಸೋ ಕೇಸ್ ಅಡಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದ ಬಳಿ ಉಮೇಶ್ ಮತ್ತೆ ಅದೇ ಯುವತಿಯನ್ನು ಮದುವೆಯಾಗಿದ್ದ. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಮಾಡುತ್ತಿದ್ದಾಗಿ ಆರೋಪಿ ಉಮೇಶ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.