Site icon Vistara News

108 Ambulance : ನಾಳೆ 262 ಆಂಬ್ಯುಲೆನ್ಸ್‌ಗೆ ಸಿಎಂ ಚಾಲನೆ; 108 ಆಧುನೀಕರಣಕ್ಕೆ ಕ್ರಮ: ದಿನೇಶ್ ಗುಂಡೂರಾವ್‌

CM Siddaramaiah and Dinesh Gudurao

ಬೆಂಗಳೂರು: ಕಳೆದ ಆರು ತಿಂಗಳಲ್ಲಿ ತುರ್ತಾಗಿ ಜನ ಸಾಮಾನ್ಯರಿಗೆ ಆಗಬೇಕಾದ ಅನೇಕ ಯೋಜನೆಗಳನ್ನು ಮಾಡಿದ್ದೇವೆ. ನಾಳೆ ಬೆಳಗ್ಗೆ ನೂತನ 262 ಆಂಬ್ಯುಲೆನ್ಸ್‌ಗಳಿಗೆ (108 Ambulance) ಸಿಎಂ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್‌ ಗುಂಡೂರಾವ್‌, 108 ಆಂಬ್ಯುಲೆನ್ಸ್‌ ಸೇವೆಯಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಈ ವ್ಯವಸ್ಥೆಯನ್ನು ಇನ್ನೂ ಆಧುನೀಕರಣಗೊಳಿಸಿ ಜಾರಿಗೆ ತರಲು ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು 262 ಹೊಸ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡುತ್ತಿದ್ದಾರೆ. ಇದರಲ್ಲಿ 157 ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳು ಇದ್ದರೆ, 105 ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳಿವೆ ಎಂದು ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದರು.

219 ಡಯಾಲಿಸಿಸ್‌ ಕೇಂದ್ರಗಳಾಗಿ ಹೆಚ್ಚಳ

ಡಯಾಲಿಸಿಸ್ ವ್ಯವಸ್ಥೆ ಕೂಡ ಸರಿ ಇರಲಿಲ್ಲ. ಹಿಂದೆ ಕೊಟ್ಟ ಏಜೆನ್ಸಿಗಳ ನಿರ್ವಹಣೆ ಸರಿಯಾಗಿ ಆಗುತ್ತಿರಲಿಲ್ಲ. ಹಾಗಾಗಿ ಈಗ ನಾಲ್ಕು ಡಿವಿಷನ್‌ಗಳಲ್ಲಿ ಟೆಂಡರ್ ಕರೆಯಲಾಗಿದೆ. ಬೆಂಗಳೂರು ಡಿವಿಷನ್ -250, ಮೈಸೂರು ಡಿವಿಷನ್ – 225, ಬೆಳಗಾವಿ ಡಿವಿಷನ್ – 201, ಕಲಬುರಗಿ ಡಿವಿಷನ್ – 125 ಡಯಾಲಿಸಿಸ್‌ ಕೇಂದ್ರಗಳಿಗೆ ಟೆಂಡರ್‌ ಕರೆಯಲಾಗಿದೆ. ಈ ಹಿಂದೆ 173 ಡಯಾಲಿಸಿಸ್ ಕೇಂದ್ರಗಳು ಇದ್ದವು. ಈಗ ಅವುಗಳನ್ನು 219ಕ್ಕೆ ಹೆಚ್ಚಳ ಮಾಡಿಸಿದ್ದೇವೆ. ಅಲ್ಲದೆ, ರಾಜ್ಯಾದ್ಯಂತ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಅಳವಡಿಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

800 ಸಿಂಗಲ್ ಯೂಸ್ಡ್‌ ಯಂತ್ರಗಳ ಅಳವಡಿಕೆ

ಒಟ್ಟು 800 ಸಿಂಗಲ್ ಯೂಸ್ಡ್‌ ಯಂತ್ರಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಪಿಪಿಪಿ ಮಾಡೆಲ್‌ನಲ್ಲಿ ಈ ಯಂತ್ರಗಳ ಅಳವಡಿಕೆಯನ್ನು ಮಾಡಲಾಗುವುದು. ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ಏಕ ಬಳಕೆಯ ಡಯಾಲಿಸಿಸ್‌ ಯಂತ್ರಗಳು ಸೇವೆಗೆ ಲಭ್ಯವಾಗಲಿವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಮಗು ಸಾವಿನ ವರದಿಯನ್ನು ತರಿಸಿಕೊಳ್ಳುವೆ

ಹಾಸನ ಭಾಗದ ಮಗುವಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್‌ ಗುಂಡೂರಾವ್‌, ನಿಮ್ಹಾನ್ಸ್‌ನಲ್ಲಿ ಸಮಸ್ಯೆ ಇದೆ. ಅಲ್ಲಿ ಜನಜಂಗುಳಿ ಕೂಡ ಇದೆ. ಒತ್ತಡದ ನಡುವೆಯೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ. ಅವರ ಮೇಲಿನ ಒತ್ತಡವನ್ನು ನಾವು ಕಡಿಮೆ ಮಾಡಬೇಕು. ಈಗ ಮಗು ಮೃತಪಟ್ಟಿರುವ ಪ್ರಕರಣದ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಭ್ರೂಣ ಹತ್ಯೆ ಕೇಸ್‌ ನಮಗೆ ಅವಮಾನ

ರಾಜ್ಯದಲ್ಲಿ ಭ್ರೂಣ ಹತ್ಯೆ ವಿಚಾರವಾಗಿ ನಾನು ಇಂದು ಸಭೆ ನಡೆಸಿದ್ದೇನೆ. ಭ್ರೂಣ ಹತ್ಯೆಯನ್ನು ಒಪ್ಪುವಂಥದ್ದಲ್ಲ. ಇಷ್ಟು ದೊಡ್ಡದಾಗಿ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಇದು ನಮಗೆ ಅವಮಾನ ಮತ್ತು ಮುಖಭಂಗವಾಗುವಂತಹ ವಿಷಯ. ಇದರ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುವಂತೆ ಸೂಚಿಸಿದ್ದೇನೆ. ಸ್ಥಳೀಯ ಮಟ್ಟದಲ್ಲಿ ಪ್ರತಿ ತಿಂಗಳು ಒಂದು ಮೀಟಿಂಗ್ ಮಾಡಬೇಕು. ಪ್ರತಿ ಮೂರು ತಿಂಗಳಿಗೆ ಕಮಿಷನರ್ ಸಭೆ ಮಾಡಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಈಗ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸರು, ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಆದ ಘಟನೆ ಪರಿಶೀಲನೆ ನಡೆಸಲು ನಮ್ಮ ಅಧಿಕಾರಿಗಳು ಹೋಗಿದ್ದಾರೆ. ಮಂಡ್ಯ ಡಿಎಚ್ಒ ಸ್ಥಳಕ್ಕೆ ತಡವಾಗಿ ಹೋಗಿದ್ದರ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಭ್ರೂಣ ಹತ್ಯೆ ತಡೆಗೆ ಆ್ಯಕ್ಷನ್‌ ಪ್ಲ್ಯಾನ್

ಈ ಪ್ರಕರಣವು ಆರು ತಿಂಗಳಿಂದ ನಡೆಯುತ್ತಿದೆ ಎಂದು ಹೇಳುತ್ತಿದ್ದೀರಲ್ಲ? ಎಂದು ಪತ್ರಕರ್ತರಿಗೆ ಪ್ರಶ್ನೆ ಮಾಡಿದ ದಿನೇಶ್‌ ಗುಂಡೂರಾವ್‌, ಇದು ಇಪ್ಪುತ್ತು ವರ್ಷಗಳಿಂದ ನಡೆಯುತ್ತಿರಬಹುದು? ಮಹಿಳೆಯರ ಅನುಪಾತ ಜಾಸ್ತಿ ಆಗುತ್ತಿಲ್ಲ, ಬದಲಾಗಿ ಕಡಿಮೆಯೇ ಆಗುತ್ತಿದೆ. ಇದನ್ನು ಗಮನಿಸಿದರೆ ಭ್ರೂಣ ಹತ್ಯೆ ಜಾಸ್ತಿ ಆಗುತ್ತಿದೆ ಎಂದು ಅನ್ನಿಸುತ್ತಿದೆ. ಇದೊಂದು ಸಾಮಾಜಿಕ ಪಿಡುಗು, ಬರೀ ಮಂಡ್ಯದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಇದು ಸರಿಯಲ್ಲ. ಈ ಬಗ್ಗೆ ನಾವು ಜಾಗೃತಿ ಮೂಡಿಸಬೇಕು. ಇದನ್ನು ತಡೆಯಲು ನಾವು ಬೇರೆ ಬೇರೆ ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈ ಜಾಲವನ್ನು ಪೊಲೀಸರು ಭೇದಿಸಿದ್ದರಿಂದ ನಮ್ಮ ಕಣ್ಣು ತೆರದಂತಾಗಿದೆ. ಇದರ ಬಗ್ಗೆ ಒಂದು ಆ್ಯಕ್ಷನ್‌ ಪ್ಲಾನ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇದನ್ನೂ ಓದಿ: Congress Karnataka : ಮೊದಲ ಶಾಸಕರಿಗೆ ನಿಗಮ – ಮಂಡಳಿ ಸ್ಥಾನ ಇಲ್ಲವೆಂದ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ನಿಮೋನಿಯಾ ಆತಂಕ ಬೇಡ

ಉತ್ತರ ಚೀನಾದ ಮಕ್ಕಳಲ್ಲಿ ನಿಮೋನಿಯಾ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನಿಮೋನಿಯಾ ಬಗ್ಗೆ ಡಬ್ಲ್ಯೂಎಚ್‌ಒ ಗೈಡ್‌ಲೈನ್ಸ್‌ ಅನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೂಡ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ನಾವು ಪ್ರಾಥಮಿಕ ಹಂತದಲ್ಲಿಯೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಟೆಸ್ಟ್‌ಗಳನ್ನು ಹೆಚ್ಚಾಗಿ ಮಾಡಿ ಎಂದು ಹೇಳಿದ್ದೇನೆ. ಈಗ ಇದರಿಂದ ಆತಂಕ ಪಡಬೇಕಿಲ್ಲ. ನಮ್ಮ ರಾಜ್ಯದಲ್ಲಿ ಆ ರೀತಿಯ ಸೋಂಕು ಪತ್ತೆ ಆಗಿಲ್ಲ. ಕೆಮ್ಮು ಜ್ವರ ಬಂದಾಗ ಟೆಸ್ಟ್ ಮಾಡಿಸಿ ಎಂದು ಹೇಳಿದ್ದೇನೆ ಎಂಬುದಾಗಿ ತಿಳಿಸಿದರು.

Exit mobile version