Site icon Vistara News

Murder Case: ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿಯನ್ನು ಕೊಂದು, ರೈಲಿಗೆ ತಲೆಕೊಟ್ಟ ಯುವಕ!

10th class student murdered for refusing love

ಹಾಸನ: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲಾ ಬಾಲಕಿಯನ್ನು ಕೊಂದು, ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 10ನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಕೊಲೆ (Murder Case) ಮಾಡಿರುವ ಯುವಕ, ಬಳಿಕ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟಿದ್ದಾನೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಬಾಲಕಿ, ಶರತ್‌ (23) ಕೊಲೆಮಾಡಿದ ಆರೋಪಿ. ವಿದ್ಯಾರ್ಥಿನಿ ಶಾಲೆ ಮುಗಿಸಿ ಹೋಗುವಾಗ ತೋಟದಲ್ಲಿ ಆಕೆಯನ್ನು ಅಡ್ಡಗಟ್ಟಿ ಯುವಕ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Naxalite Srimathi: ನಕ್ಸಲ್ ಹೋರಾಟಗಾರ್ತಿ ಶ್ರೀಮತಿ ಪೊಲೀಸ್‌ ಕಸ್ಟಡಿಗೆ

ಡಿವೈಡರ್‌ಗೆ ಬೈಕ್‌ ಡಿಕ್ಕಿ; ಜವರಾಯನ ಮನೆ ಸೇರಿದ ಸವಾರ

ದಾವಣಗೆರೆ: ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಶಿಕಾರಿಪುರ ರಸ್ತೆಯ ಗಡಿ ಚೌಡಮ್ಮನ ದೇವಾಲಯ ಬಳಿ ಅಪಘಾತ (Road Accident) ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಮಂಜುನಾಥ್ (21) ಮೃತ ದುರ್ದೈವಿ.

ಬೈಕ್‌ನಲ್ಲಿ ಅತಿ ವೇಗವಾಗಿ ಬಂದಿದ್ದ ಮಂಜುನಾಥ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ್ದ. ಬೈಕ್‌ನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಗಾಯಾಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹೊನ್ನಾಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌ಗೆ ಕಾರು ಡಿಕ್ಕಿ; ವಾಟರ್‌ ಮ್ಯಾನ್‌ ಸಾವು

ರಾಮನಗರ: ಕಾರು ಹಾಗೂ ಬೈಕ್ ಮುಖಾಮುಖಿ (Road Accident) ಡಿಕ್ಕಿಯಾಗಿ ಸ್ಥಳದಲ್ಲೇ ಸವಾರರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ನಂಜುಂಡಯ್ಯ (48) ಮೃತ ದುರ್ದೈವಿ.

ರಾಮನಗರದ ಮಾಗಡಿ ತಾಲೂಕಿನ ಬೈರನಹಳ್ಳಿಯಲ್ಲಿ ಘಟನೆ ನಡೆದಿದೆ. ನಂಜುಂಡಯ್ಯನವರು ಸೀಗೆಕುಪ್ಪೆ ಗ್ರಾಮ ಪಂಚಾಯತಿಯ ಸಾದಮಾರನಹಳ್ಳಿ ವಾಟರ್ ಮ್ಯಾನ್ ಆಗಿದ್ದರು. ಬೆಳಗಿನ ಜಾವ ಮಾಗಡಿಗೆ ಹೋಗಬೇಕಾದರೆ ಬೈಕ್‌ಗೆ ಕಾರು ಡಿಕ್ಕಿಯಾಗಿದೆ.

ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದು ಹಾರಿದ ನಂಜುಂಡಯ್ಯ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತದೇಹವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಾಗಡಿ ಗ್ರಾಮಾಂತರ ಪೊಲೀಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಜ್ಜು-ಗುಜ್ಜಾಗಿದ್ದ ಗಾಡಿಯನ್ನು ವಶಕ್ಕೆ ಪಡೆದಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: FSL Report: ‘ಪಾಕಿಸ್ತಾನ ಜಿಂದಾಬಾದ್’ ಕೇಸ್‌; FSL ವರದಿ ಬಹಿರಂಗಕ್ಕೆ ಬಿಜೆಪಿ ನಿಯೋಗ ಮನವಿ

ಯುವಕನ ಕಾಲಿನ ಮೇಲೆ ಬಸ್‌

ಬಸ್ ಹರಿದು ಯುವಕನೊರ್ವ ಗಂಭೀರ ಗಾಯಗೊಂಡಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಘಟನೆ ನಡೆದಿದೆ. ಬೈಕ್‌ಗೆ ಬಸ್ ತಗುಲಿ ಕೆಳಗೆ ಬಿದ್ದ ಯುವಕನ ಕಾಲಿನ ಮೇಲೆ ಬಸ್‌ ಹರಿದಿದೆ. ಇನ್ನೂ ಜನರು ಸೇರುತ್ತಿದ್ದಂತೆ ಘಟನಾ ಸ್ಥಳದಿಂದ ಚಾಲಕ ನಿರ್ವಾಹಕರಿಬ್ಬರು ಪರಾರಿ ಆಗಿದ್ದಾರೆ. ಕನಕದಾಸ ಸರ್ಕಲ್ ಬಳಿ ಅಪಘಾತ ನಡೆದಿದ್ದು, ಅಪಘಾತಕ್ಕೊಳಗಾದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾರಿಯಡಿಗೆ ಸಿಲುಕಿ ಬೈಕ್​ ಸವಾರನ ದೇಹ ಪುಡಿ ಪುಡಿ

ಕೋಲಾರ: ತರಕಾರಿ ಸಾಗಾಟದ ಲಾರಿ ಮತ್ತು ದ್ವಿಚಕ್ರ ವಾಹನ ನಡುವಿನ ಅಫಘಾತದಲ್ಲಿ ಬೈಕ್ ಸವಾರ ಲಾರಿಯಡಿಗೆ ಸಿಲುಕಿ (Accident News) ಅಪ್ಪಚ್ಚಿಯಾದ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಸ್ಟೇಡಿಯಂ ಬಳಿ ಘಟನೆ ನಡೆದಿದೆ. 23 ವರ್ಷದ ಮಣಿಕಂಠ ಮೃತಪಟ್ಟವರು. ಬೈಕ್ ಸವಾರ ಪಟ್ಟಣದ ಇಂದಿರಾ ನಗರಕ್ಕೆ ಹೋಗುವಾಗ ನಡೆದ ಅವಘಡ ಸಂಭವಿಸಿದೆ. ಮಾಲೂರು ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿದ್ದಾರೆ.

ಮತ್ತೊಂದ ಪ್ರಕರಣದಲ್ಲಿ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ (Accident News) ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮದರಂಕಪಲ್ಲಿ ಕ್ರಾಸ್ ನ ಬಳಿ ಸೋಮವಾರ ನಡೆದಿದೆ. ಜೀಡಿಮಾಕಲಹಳ್ಳಿ ಗ್ರಾಮದ ಶಂಕರ(40) ಮೃತಪಟ್ಟವರು.

ಅಪಘಾತದ ಬಳಿಕ ಶಂಕರ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version