ಬೆಳಗಾವಿ: ಕುಂದಾ ನಗರಿ ಬೆಳಗಾವಿ ಸೇರಿ ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೃಷಿ ಚುಟುವಟಿಕೆ ಬಿಡಿ, ಕುಡಿಯಲು ಕೂಡ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿ ಮಧ್ಯೆಯೂ ಬೆಳಗಾವಿ (Belagavi) ಜಿಲ್ಲೆ ಸವದತ್ತಿಯಲ್ಲಿರುವ ಯಲ್ಲಮ್ಮ ದೇವಿ (Savadatti Yallamma Devi Temple) ದೇವಾಲಯಕ್ಕೆ ಭರಪೂರ ಕಾಣಿಕೆ ಹರಿದುಬಂದಿದೆ. ದೇವಾಲಯದ ಹುಂಡಿ ಹಣವನ್ನು (Donation Box) ಎಣಿಕೆ ಮಾಡಲಾಗಿದ್ದು, ಒಂದೇ ವರ್ಷದಲ್ಲಿ 11 ಕೋಟಿ ರೂ. ಕಾಣಿಗೆ ಸಂಗ್ರಹವಾಗಿದೆ.
ಸವದತ್ತಿ ಯಲ್ಲಮ್ಮ ದೇವಿ ದೇವಾಲಯವು ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಹಾಗಾಗಿ, ಬರಗಾಲದ ಮಧ್ಯೆಯೂ ದೇವಾಲಯದ ಹುಂಡಿಯಲ್ಲಿ 2023-24ನೇ ಸಾಲಿನಲ್ಲಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನಗದು, ಚಿನ್ನ, ಬೆಳ್ಳಿಯ ಆಭರಣಗಳನ್ನು ಹುಂಡಿಗೆ ಹಾಕಿ ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.4 ಕೋಟಿ ರೂ. ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದ ಹುಂಡಿಯಲ್ಲಿ 2022–23ರಲ್ಲಿ 8.01 ಕೋಟಿ ರೂ. ನಗದು, 66.28 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 15.43 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಸೇರಿ ಒಟ್ಟು 8.83 ಕೋಟಿಯ ಕಾಣಿಕೆ ಸಂಗ್ರಹವಾಗಿತ್ತು. ಇನ್ನು 2023–24ರಲ್ಲಿ ತೀವ್ರ ಬರಗಾಲದ ಮಧ್ಯೆಯೂ 10.22 ಕೋಟಿ ರೂ. ನಗದು, 84.14 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 16.65 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಜತೆಗೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಕೂಡ ಪತ್ತೆಯಾಗಿವೆ.
ಇದನ್ನೂ ಓದಿ: Koppala News: ಅಂಜನಾದ್ರಿ ಆಂಜನೇಯ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ; 9.29 ಲಕ್ಷ ರೂ. ಸಂಗ್ರಹ
ಶಿವಮೊಗ್ಗ ಜಿಲ್ಲೆ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಕಳೆದ ಡಿಸೆಂಬರ್ ತಿಂಗಳಲ್ಲಿ ಕಾಣಿಕೆ ಹುಂಡಿ ಎಣಿಸಿದಾಗ 31,35,360 ರೂ. ಸಂಗ್ರಹವಾಗಿತ್ತು. ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 22,52,700 ರೂ. ಕಾಣಿಕೆ ಸಂಗ್ರಹವಾಗಿದೆ, ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ