ಮಂಗಳೂರು: ನಗರದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಕಾಲೇಜಿನ 12 ವಿದ್ಯಾರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 900 ಗ್ರಾಂ ಗಾಂಜಾ, ಸ್ಮೋಕಿಂಗ್ ಪೈಪ್ಸ್, ರೋಲಿಂಗ್ ಪೇಪರ್, 11 ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ, 4,500 ರೂಪಾಯಿ ನಗದು ಸೇರಿ ಒಟ್ಟು 2,85,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ಮೂಲದ ಶಾನೂಫ್ ಅಬ್ದುಲ್ ಗಫೂರ್ (22), ಮೊಹಮ್ಮದ್ ರಸೀನ್ (22), ಗೋಕುಲ ಕೃಷ್ಣನ್ (22), ಶಾರೂನ್ ಆನಂದ (19), ಕೆ.ಪಿ. ಅನಂತು (18), ಅಮಲ್ (21), ಅಭಿಷೇಕ (21), ನಿದಾಲ್ (21), ಎಂ.ಟಿ.ಪಿ.ಶಾಹೀದ್ (22), ಫಹಾದ್ ಹಬೀಬ್ (22), ಮೊಹಮ್ಮದ್ ರಿಶಿನ್ (22), ರಿಜಿನ್ ರಿಯಾಜ್ (22) ಬಂಧಿತರು. ಆರೋಪಿಗಳ ಪೈಕಿ 8 ಮಂದಿ ವಿದ್ಯಾರ್ಥಿಗಳು ಯೇನೆಪೋಯ ಕಾಲೇಜಿನಲ್ಲಿ ವ್ಯಸಾಂಗ ಮಾಡುತ್ತಿದ್ದು, ಮೂವರು ವಿದ್ಯಾರ್ಥಿಗಳು ಇಂದಿರಾ ನರ್ಸಿಂಗ್ ಕಾಲೇಜಿನಲ್ಲಿ ವ್ಯಸಾಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ | ಜಾಲತಾಣದಲ್ಲಿ ಕೊಡವ ಜನಾಂಗ, ಮಹಿಳೆಯರನ್ನು ಅವಮಾನಿಸಿದವನ ವಿರುದ್ಧ FIR
ಮಾದಕ ವಸ್ತುಗಳನ್ನು ಹೊಂದಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ಬಿ.ರಾಜೇಂದ್ರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರ ತಂಡ ನಗರದ ವೆಲೆನ್ಸಿಯಾ ಸೂಟರ್‌ಪೇಟೆ 3ನೇ ಕ್ರಾಸ್‌ನ ವಸತಿಗೃಹವೊಂದರ ಮೇಲೆ ದಾಳಿ ನಡೆಸಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಹೊಂದಿದ್ದ ಕೇರಳ ಮೂಲದ ವಿದ್ಯಾರ್ಥಿಗಳನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿದ್ದಾರೆಯೇ ಎಂಬುದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ 11 ಮಂದಿ ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಆರೋಪಿಗಳ ಪೈಕಿ 9 ಮಂದಿ ವಿದ್ಯಾರ್ಥಿಗಳು ಯೇನೆಪೋಯ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದು, 3 ಮಂದಿ ವಿದ್ಯಾರ್ಥಿಗಳು ಇಂದಿರಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ನಂಬಿಕೆ ಇರುವ ಅನ್ಯಧರ್ಮೀಯರ ದೇವಸ್ಥಾನ ಪ್ರವೇಶವನ್ನು ತಡೆಯಲು ಆಗದು ಎಂದ ಮದ್ರಾಸ್ ಹೈಕೋರ್ಟ್