Site icon Vistara News

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

girl students fall ill

ರಾಯಚೂರು: ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ ಬಳಿಕ 14 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ (Raichur News) ಮಾನ್ವಿ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ ಪಲಾವ್ ಸೇವಿಸಿದ್ದ ವಿದ್ಯಾರ್ಥಿನಿಯರಿಗೆ ಸಂಜೆ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಹೀಗಾಗಿ ಅಸ್ವಸ್ಥಗೊಂಡ 14 ವಿದ್ಯಾರ್ಥಿಯರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದ ಒಬ್ಬಳು ವಿದ್ಯಾರ್ಥಿಯನ್ನು ರಾಯಚೂರಿನ ರಿಮ್ಸ್‌ಗೆ ರವಾನಿಸಲಾಗಿದೆ.

pdo new

ಘಟನೆ ನಡೆದ ಬಳಿಕ ಹಾಸ್ಟೆಲ್‌ಗೆ ಬಾರದ ವಾರ್ಡನ್ ಪಾರ್ವತಿ ವಿರುದ್ಧ ವಿದ್ಯಾರ್ಥಿನಿಯರು ಹಾಗೂ ಪಾಲಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

4 ಸಾವಿರ ಅಡಿ ಪ್ರಪಾತದಿಂದ ಯುವಕನ ಮೃತದೇಹ ಹೊರತಂದ ರಕ್ಷಣಾ ತಂಡ

ಚಿಕ್ಕಮಗಳೂರು: ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಯುವಕನ ಮೃತದೇಹವನ್ನು 4 ಸಾವಿರ ಅಡಿ ಪ್ರಪಾತದಿಂದ ರಕ್ಷಣಾ ತಂಡ ಹೊರತಂದಿದೆ. ಮೂಡಿಗೆರೆ ತಾಲೂಕಿನ ರಾಣಿಝರಿ ಪ್ರಪಾತದ ಬಳಿ ಅರಣ್ಯ, ಪೊಲೀಸ್, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಕಾರ್ಯಚರಣೆ ನಡೆಸಿ, ಯುವಕನ ಮೃತದೇಹವನ್ನು ಹೊರತಂದಿದೆ.

ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಭರತ್ ಮೃತದೇಹ ಸಿಕ್ಕಿದ್ದು, ಹಗ್ಗಗಳನ್ನ ಬಳಸಿ ಗುಡ್ಡಗಾಡಿನಿಂದ ಮೃತದೇಹವನ್ನು ಸಿಬ್ಬಂದಿ ಹೊರತಂದಿದ್ದಾರೆ. ದುರ್ಗದಹಳ್ಳಿ ರಾಣಿಝರಿ ಬಳಿ ಬೈಕ್, ಐಡಿ, ಮೊಬೈಲ್ ಬಿಟ್ಟು ಯುವಕ ಹೋಗಿದ್ದ. ಕಾಫಿನಾಡಿಗೆ ಬಂದು ನಾಪತ್ತೆಯಾಗಿದ್ದ ಭರತ್‌ ಪತ್ತೆಗಾಗಿ ಸುಮಾರು 25ಕ್ಕೂ ಹೆಚ್ಚು ಮಂದಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

ಮೂವರು ಅಂತಾರಾಜ್ಯ ಕಳ್ಳಿಯರ ಬಂಧನ

ಚಿತ್ರದುರ್ಗ: ಮೂವರು ಅಂತಾರಾಜ್ಯ ಸುಲಿಗೆಕೋರ ಮಹಿಳೆಯರನ್ನು ಬಂಧಿಸಿ, 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಒಡವೆ, 50 ಸಾವಿರ ರೂ. ನಗದನ್ನು ಚಿತ್ರದುರ್ಗ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹೇಶ್ವರಿ (26), ಸಂಜನಾ (25), ಅಕಿಲಾ (35) ಬಂಧಿತರು. ಬಂಧಿತ ಮಹಿಳೆಯರು ಬೆಳಗಾವಿ ಮೂಲದವರಾಗಿದ್ದು, ಬಸ್ ನಿಲ್ದಾಣ, ಮೆರವಣಿಗೆ, ಜಾತ್ರೆಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದರು. ಬಡಾವಣೆ ಠಾಣೆ CPI ನಹಿಂ ಅಹಮದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎಫ್‌ಐಆರ್‌ ದಾಖಲಾಗಿದೆ.

ನರೇಗಾದಲ್ಲಿ 150 ಕೋಟಿ ರೂ. ಭ್ರಷ್ಟಾಚಾರ; ನಾಲ್ವರು ಪಿಡಿಒಗಳ ಅಮಾನತು

pdo new

ರಾಯಚೂರು: ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಕಂಡುಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. 33 ಗ್ರಾಮ‌ ಪಂಚಾಯತಿಗಳಲ್ಲಿ 150 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ಸಂಬಂಧ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ದೂರು ನೀಡಿದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

ಜಾಲಹಳ್ಳಿ ಪಿಡಿಒ ಪತ್ತೆಪ್ಪ ರಾಠೋಡ, ಶಾವಂತಗೇರ ಪಿಡಿಒ ಗುರುಸ್ವಾಮಿ, ಕ್ಯಾದಿಗೇರ ಪಿಡಿಒ ಸಿ.ಬಿ.ಪಾಟೀಲ್, ಗಾಣದಾಳ ಪಿಡಿಒ ಮಲ್ಲಪ್ಪ ಅಮಾನತುಗೊಂಡವರು. ಇಲಾಖೆ ವಿಚಾರಣೆ ಕಾಯ್ದಿರಿಸಿ ನಾಲ್ವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ ಅಮಾನತು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version