ಬೆಂಗಳೂರು: ಕೆಜಿ ಹಳ್ಳಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 19 ಜನರ ವಿಚಾರಣೆ ನಡೆಸಿದ್ದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಇಂದು 14 ಜನರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ 19 ಕಡೆ ದಾಳಿ ಮಾಡಿ ತಲಾಷೆ ನಡೆಸಿದ್ದ ನಗರ ಪೊಲೀಸರು, 19 ಜನರನ್ನು ವಿಚಾರಿಸಿ 14 ಜನರನ್ನು ವಶಕ್ಕೆ ಪಡೆದಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 14 ಆರೋಪಿತರನ್ನು ವಶಕ್ಕೆ ಪಡೆಯಲಾಗಿತ್ತು. ರಾತ್ರಿ ಪೂರ್ತಿ ಆರೋಪಿತರ ನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಇಂದು 14 ಮಂದಿಯನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ.
ದಾಳಿಯ ವೇಳೆ ಮಹತ್ವದ ದಾಖಲೆ ಮತ್ತು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿರುವ ಪೊಲೀಸರು ಸದ್ಯ ಪುಲಿಕೇಶಿನಗರ ಪೊಲೀಸ್ ಠಾಣೆ ಹಾಗು ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಆರೋಪಿಗಳನ್ನಿಟ್ಟಿದ್ದಾರೆ. ವಶದಲ್ಲಿರುವ 14 ಜನ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಕೆ.ಜಿ ಹಳ್ಳಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ವಯ ನಿನ್ನೆ ಮಂಗಳೂರು, ಕಲಬುರಗಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು ಸೇರಿದಂತೆ ಹಲವೆಡೆ ಪೂರ್ವ ವಿಭಾಗದ ವಿಶೇಷ ತಂಡ ದಾಳಿ ನಡೆಸಿತ್ತು. 14 ಜನರನ್ನು ವಶಕ್ಕೆ ತೆಗೆದುಕೊಂಡು ನಗರಕ್ಕೆ ಕರೆತರಲಾಗಿತ್ತು. ಭಯೋತ್ಪಾದಕ ಚಟುವಟಿಕೆ, ವಿದೇಶದಿಂದ ಅಕ್ರಮ ಹಣ ಸಂಗ್ರಹ, ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಟ್ರೈನಿಂಗ್, ಮುಂದೆ ನಡೆಯುವ ಕುಕೃತ್ಯಗಳ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ : PFIಗೆ CCB ಶಾಕ್ | ಕೆ.ಜಿ. ಹಳ್ಳಿ ಕೇಸಿನಲ್ಲಿ ವಶಕ್ಕೆ ಪಡೆದ 19 ಪಿಎಫ್‌ಐ ನಾಯಕರು ಇವರು, 9 ಮಂದಿ ಮಂಗಳೂರಿನವರು!