ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಜೆಎನ್ 1 ಪ್ರಕರಣಗಳು (COVID Subvariant JN1) ಪತ್ತೆಯಾಗಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಡಿ.25ರವರೆಗೆ ಕೋವಿಡ್-19 ಸಕ್ರಿಯ ಪ್ರಕರಣಗಳು (Corona Virus News) 436 ಇವೆ. ಆದರೆ, ಇದೀಗ ಮೈಸೂರು ಅಷ್ಟೇ ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಸ ಕೋವಿಡ್ ಉಪ ತಳಿ ಜೆ.ಎನ್.1 ಪತ್ತೆಯಾಗಿದ್ದು, 34 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಸೋಮವಾರ ಮಾಹಿತಿ ನೀಡಿದ್ದಾರೆ. ಜಿನೋಮಿಕ್ ಸೀಕ್ವೆನ್ಸ್ ವರದಿ ಪ್ರಕಾರ ರಾಜ್ಯದಲ್ಲಿ ಇಲ್ಲಿವರೆಗೂ 34 ಜೆ.ಎನ್.1 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 31 ಸಕ್ರಿಯ ಪ್ರಕರಣವಿದ್ದು, ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನ ದಕ್ಷಿಣ ವಲಯ, ಪಶ್ಚಿಮ ವಲಯ ಹಾಗೂ ರಾಮನಗರದಲ್ಲಿ ತಲಾ ಒಬ್ಬರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನಲ್ಲಿ 20 ಕೇಸ್, ಮೈಸೂರು 4, ಮಂಡ್ಯ 3, ರಾಮನಗರ 1, ಬೆಂಗಳೂರು ಗ್ರಾಮಾಂತರ -1, ಕೊಡಗು 1, ಚಾಮರಾಜನಗರ 1 ಪ್ರಕರಣ ಪತ್ತೆಯಾಗಿದೆ.
ಸೋಮವಾರ 125 ಕೋವಿಡ್ 19 ಪ್ರಕರಣ ಪತ್ತೆ
ರಾಜ್ಯದಲ್ಲಿ ಸೋಮವಾರ ಒಟ್ಟು 125 ಪ್ರಕರಣಗಳು ದಾಖಲಾಗಿವೆ. ಇದರಿಂದ COVID 19 ಸಕ್ರಿಯ ಪ್ರಕರಣಗಳ ಸಂಖ್ಯೆ 436ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಒಟ್ಟು ಮಂದಿಗೆ 3155 COVID 19 ತಪಾಸಣೆ (RTPCR – 2072 , RAT – 1083) ನಡೆಸಲಾಗಿದ್ದು, ಈ ಪೈಕಿ, 125 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ 30 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 360 ಸಕ್ರಿಯ ಕೊರೊನಾ ಪ್ರಕರಣಗಳು ಇವೆ. ಒಟ್ಟಾರೆಯಾಗಿ ಆಸ್ಪತ್ರೆಯಲ್ಲಿ 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 400 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ.
ನಾಳೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ 5 ಸಾವಿರ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ಇದರಿಂದ 300-400 ಜನ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ಸೋಂಕಿತರ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇನ್ನು ಜೆ.ಎನ್. 1 ಪತ್ತೆಗೆ 176 ಜನ ಗಂಟಲು ದ್ರವ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದ್ದು, ವರದಿ ಪ್ರಕಟ ಸಾಧ್ಯತೆ ಇದೆ.
ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಜೆಎನ್ 1 ಪತ್ತೆ
ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಅದರಲ್ಲೂ ಕೊರೊನಾ ವೈರಸ್‌ನ ಹೊಸ ಉಪ ತಳಿ ಜೆಎನ್.1 ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಡಿಸೆಂಬರ್ 24ರವರೆಗೂ ದೇಶಾದ್ಯಂತ ಒಟ್ಟು 63 ಜೆಎನ್.1 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಈ ಪೈಕಿ ಗೋವಾದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಹೃದಯ ಜೋಪಾನ, ಅಪಾಯ ಹೆಚ್ಚಿಸಿದೆ ಕೊರೊನಾ
ಗೋವಾದಲ್ಲಿ 34, ಮಹಾರಾಷ್ಟ್ರ 9, ಕರ್ನಾಟಕ 8, ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಹಾಗೂ ತೆಲಂಗಾಣ ರಾಜ್ಯದಲ್ಲಿ 2 ಜೆಎನ್.1 ಪ್ರಕರಣಗಳು ದೃಢಪಟ್ಟಿವೆ. ಇದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಹೊಸ ಮಾದರಿಯ ವೈರಸ್ ಸೋಖಂಕು ಪತ್ತೆಯಾದಂತಾಗಿದೆ. ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಈವರೆಗೆ ಜೆಎನ್.1 ಸೋಂಕು ಪತ್ತೆಯಾಗಿಲ್ಲ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುನ್ನೆಚ್ಚರಿಕ ಕ್ರಮ
ಚಾಮರಾಜನಗರ: ಕೇರಳದಲ್ಲಿ ದಿನ ಕಳೆದಂತೆ ಕೋವಿಡ್ ಪಾಸಿಟಿವ್ ಕೇಸ್‌ಗಳು ಗಣನೀಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಖುದ್ದು DHO ಹಾಗೂ ಆರೋಗ್ಯ ಇಲಾಖಾ ಅಧಿಕಾರಿಗಳ ಬಳಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ ಪಡೆದಿದ್ದಾರೆ.
ಕೇರಳದ ಶಬರಿಮಲೆಗೆ ಹೋಗಿ ಬರುವ ಭಕ್ತರ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ಹೊಸ ವರ್ಷ ಕ್ರಿಸ್ ಮಸ್ ವೇಳೆ ಜನ ಸಂದಣಿ ಇರುವ ಸ್ಥಳದಲ್ಲಿ ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರು ಮಾಸ್ಕ್ ಬಳಸುವುದು ಸೂಕ್ತ. ಹೀಗಾಗಿ ಪ್ರವಾಸಿ ತಾಣಗಳು, ದೇವಾಲಯಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಚಿಂತನೆ ನಡೆಸಲಾಗಿದೆ.
ಹೊಸ ವರ್ಷದ ವೇಳೆ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಹಿಮದ ಗೋಪಾಲಸ್ವಾಮಿ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಜಿಲ್ಲಾಡಳಿತದ ಚಿಂತನೆ ನಡೆಸಿದೆ.
ಇದನ್ನೂ ಓದಿ Hoskote News: ಹೊಸಕೋಟೆಯಲ್ಲಿ ದೇವಸ್ಥಾನ ಪ್ರಸಾದ ಸೇವಿಸಿ ಮಹಿಳೆ ಸಾವು, ನೂರಾರು ಮಂದಿ ಅಸ್ವಸ್ಥ
ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ನಿತ್ಯ ಕೋವಿಡ್ ಟೆಸ್ಟ್ ನಡೆಸುತ್ತಿದ್ದೇವೆ, ಆಕ್ಸಿಜನ್ ಪ್ಲಾಂಟ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು, ಈಗಾಗಲೇ ಮದ್ದೂರು ಚೆಕ್ ಪೋಸ್ಟ್ ಬಳಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಐಎಲ್ಐ ಹಾಗೂ ಸಾರಿ ಕೇಸ್‌ಗಳಿಗೆ ಇಂದಿನಿಂದ ಆರ್.ಟಿ.ಪಿ.ಸಿ.ಆರ್ ತಪಾಸಣೆ ಆರಂಭ ಮಾಡಲಾಗಿದ್ದು, 99 ಡಿಗ್ರಿ ಹಾಗೂ ಅದಕ್ಕಿಂತ ಹೆಚ್ಚು ಟೆಂಪರೇಚರ್ ಇರುವವರಿಗೆ ಸ್ಥಳದಲ್ಲೇ ಆರ್.ಟಿ.ಪಿ.ಸಿ.ಆರ್ ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ