ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆಗೆ 15 ಶಾಸಕರು ಗೈರಾದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಗರಂ ಆಗಿದ್ದಾರೆ. ಪಕ್ಷ ಕರೆದ ಸಭೆ, ಸಮಾರಂಭಗಳಿಗೆ ಬರುವುದಿಲ್ಲ. ಪಕ್ಷ ಇದ್ದರೇ ನೀವು ಶಾಸಕರು ಆಗುವುದು. ಶಾಸಕರು, ಎಂಎಲ್‌ಸಿ ಆದ ತಕ್ಷಣ ಮನೆಯಲ್ಲಿ ಇರುತ್ತೀರಿ, ಇನ್ನು ಮುಂದೆ ಪಕ್ಷದ ಕಾರ್ಯಚಟುವಟಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು, ಎಂಎಲ್‌ಸಿಗಳು ಪಕ್ಷದ ಕಾರ್ಯಕ್ರಮಗಳು, ಸಭೆ ಸಮಾರಂಭಗಳಿಗೆ ಗೈರಾಗುವಂತಿಲ್ಲ. ಒಂದು ವೇಳೆ ಗೈರಾದರೆ ನೋಟಿಸ್ ಕೊಡುತ್ತೇವೆ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.
ಶಾಸಕರಿಗೆ ಸಿದ್ದರಾಮಯ್ಯ ಪಾಠ
ಎರಡು ದಿನಗಳಿಂದ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ನೆರೆ ಬಗ್ಗೆ ನಿಲುವಳಿ ಸೂಚನೆ ನೀಡಿದ್ದೇವೆ. ಆದ್ಯತೆ ಮೇರೆಗೆ ಹಲವು ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು. ಶಾಸಕರು ಸದನಕ್ಕೆ ತಪ್ಪದೆ ಹಾಜರಾಗಬೇಕು, ಸರ್ಕಾರದ ವಿರುದ್ಧ ಅಗ್ರೆಸ್ಸಿವ್ ಆಗಿ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ.
ನಿಲುವಳಿ ಸೂಚನೆ ಮೂಲಕ ಆದ್ಯತೆ ಮೇರೆಗೆ ವಿಷಯಗಳನ್ನು ಪ್ರಸ್ತಾಪ ಮಾಡಲಾಗುವುದು. ನೆರೆ ಮುಗಿದ ಬಳಿಕ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಪರಿಹಾರ ತಾರತಮ್ಯ, ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರಗಳನ್ನು ಪ್ರಸ್ತಾಪ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಸರ್ಕಾರವನ್ನು ಅಟ್ಯಾಕ್ ಮಾಡಬೇಕು, ಆ ಮೂಲಕ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಬೇಕು. ನಮ್ಮ ಅವಧಿಯಲ್ಲಿ ಯಾವುದೇ ಹಗರಣ ಆಗಿಲ್ಲ. ಬಿಜೆಪಿಯವರು ಸುಮ್ಮನೆ ನಮ್ಮನ್ನ ಹೆದರಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಯಾರು ತಲೆಕೆಡಿಸಿಕೊಳ್ಳದೆ ಸರ್ಕಾರದ ವಿರುದ್ಧ ಟೀಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಭ್ರಷ್ಟಾಚಾರವನ್ನೇ ಬಹುದೊಡ್ಡ ಅಸ್ತ್ರವಾಗಿ ಬಳಸಲು ಕೈ ಪಡೆ ನಿರ್ಧಾರ
ಭ್ರಷ್ಟಾಚಾರದ ಸುದ್ದಿ ಜೀವಂತ ಇಡುವಂತೆ ಸಿಎಲ್‌ಪಿ ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಸದನದ ಒಳಗೂ, ಹೊರಗೂ ಸರ್ಕಾರದ ಭ್ರಷ್ಟಾಚಾರದ ವಿಚಾರ ಪ್ರಸ್ತಾಪ ಮಾಡಬೇಕು. ಅಧಿವೇಶನ ನಡೆಯುವಾಗ ಸದನದ ಒಳಗೆ 40% ಕಮಿಷನ್ ವಿಷಯಗಳ ಪ್ರಸ್ತಾಪ ಮಾಡಬೇಕು. ನಿಮ್ಮ ನಿಮ್ಮ ಕ್ಷೇತ್ರಗಳಲ್ಲೂ 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆ ಮಾಡಬೇಕು. ಲಂಚ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ. 40 ಪರ್ಸೆಂಟ್ ಕಮಿಷನ್ ಎಂದರೆ ಬಿಜೆಪಿ, ಭ್ರಷ್ಟ ಜನತಾ ಪಕ್ಷ ಎಂದು ಎಂಬ ಅಭಿಯಾನ ಶುರು ಮಾಡಲಾಗಿದೆ. ಈ ಅಭಿಯಾನ ನಿಮ್ಮ ಕ್ಷೇತ್ರಗಳಲ್ಲೂ ಪ್ರಾರಂಭ ಆಗಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ | ನಾವೂ ಕಪ್ಪು ಬಾವುಟ ತೋರಿಸಿ, ಮೊಟ್ಟೆ ಹೊಡೆದೇ ಬಂದಿದ್ದೀವಿ ಗೊತ್ತ?: ಸರ್ಕಾರಕ್ಕೆ ಸಿದ್ದರಾಮಯ್ಯ ಆವಾಜ್