ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಆಗುತ್ತಿರುವುದು ಕೇಂದ್ರ ಸರ್ಕಾರದ ಕಾರಣಕ್ಕೇ ಹೊರತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಾರಣಕ್ಕೆ ಅಲ್ಲ. ಇದು ಕೇಂದ್ರ ಸರ್ಕಾರದ ಹಗಲು ದರೋಡೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಆಯೋಜಿಸಿದ್ದ ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಧನ, ರಸಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮೋದಿ ಸರ್ಕಾರದ ವಿರುದ್ಧ ದೇಶದಾದ್ಯಂತ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮೋದಿ ಅವರು ಮುಖ್ಯಮಂತ್ರಿ ಹಾಗೂ ಮನಮೋಹನ್ ಸಿಂಗ ಅವರ ಪ್ರಧಾನಿಯಾಗಿದ್ದಾಗ, ಮೋದಿ ಅವರ ನಾಯಕತ್ವದಲ್ಲಿ ಅಲ್ಪ ಪ್ರಮಾಣದ ಬೆಲೆ ಏರಿಕೆ ಆದರೂ ಹೋರಾಟ ಮಾಡಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರವನ್ನು ಕಟು ಶಬ್ಧಗಳಿಂದ ಟೀಕೆ ಮಾಡಿದ್ದರು.
ಬಿಜೆಪಿ ಸರ್ಕಾರ ಎಂದರೆ ಸುಳ್ಳಿನ ಕಾರ್ಖಾನೆ. ಮೋದಿ ಅವರು ಪ್ರಧಾನಿಯಾದ ನಂತರ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಸ್ವತಂತ್ರ್ಯ ಭಾರತದಲ್ಲಿ ಅನೇಕ ಪ್ರಧಾನಿಗಳು ಬಂದು ಹೋಗಿದ್ದಾರೆ, ಅದರೆ ಮೋದಿಯವರಷ್ಟು ಸುಳ್ಳು ಹೇಳಿದ ಪ್ರಧಾನಿ ಮತ್ತೊಬ್ಬರಿಲ್ಲ.
ಮತ್ತಷ್ಟು ಓದಿಗಾಗಿ: ಕೊಲೆ ಕೇಸ್ ಹಿಂಪಡೆದಾಗ ಕರ್ತವ್ಯಪ್ರಜ್ಞೆ ಎಲ್ಲಿತ್ತು?: HDK, ಸಿದ್ದುಗೆ ಬೊಮ್ಮಾಯಿ ತಿರುಗೇಟು
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಡೀಸಲ್ ಮೇಲಿನ ಸುಂಕ 3.46 ರೂ. ಮಾತ್ರ. ಪೆಟ್ರೋಲ್ ಮೇಲೆ 9,20 ರೂ. ಅಬಕಾರಿ ಸುಂಕ ಇತ್ತು. ಇಂದು ಡೀಸೆಲ್ ಮೇಲೆ 31.84 ಹಾಗೂ ಪೆಟ್ರೋಲ್ ಮೇಲೆ 32.98 ರೂ. ಅಬಕಾರಿ ಸುಂಕ ವಿಧಿಸಲಾಗಿದೆ. ಇದು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಲೆ ಏರಿಕೆಯಲ್ಲ. ಕೇಂದ್ರ ಸರ್ಕಾರ ಮಾಡುತ್ತಿರುವ ವಸೂಲಿ. ಮೋದಿ ಅವರೇ ಇದು ಹಗಲು ದರೋಡೆಯಲ್ಲವೇ? ಎಂದು ಪ್ರಶ್ನಿಸಿದರು.
ಆದಾಯವಲ್ಲ, ಸಾಲ ದುಪ್ಪಟ್ಟಾಯಿತು
ಮೋದಿ ಅವರು 2022ಕ್ಕೆ ರೈತರ ಆದಾಯ ಡಬಲ್ ಮಾಡುತ್ತೇನೆ ಎಂದರು. ಇಂದು ರೈತರ ಆದಾಯವಲ್ಲ, ಸಾಲ ದುಪ್ಪಟ್ಟಾಗಿದೆ. ರೈತರು ಅವರೇ ಕೂಲಿ ಕಾರ್ಮಿಕರಾಗುವ ಸ್ಥಿತಿ ಬಂದಿದೆ. ಬಡತನ ಹೆಚ್ಚುತ್ತಿದೆ. ಮೋದಿ ಅವರೇ ಎಲ್ಲಿ ದುಪ್ಪಟ್ಟು ಆದಾಯ ಬಂದಿದೆ. ಡಿಎಪಿ ಗೊಬ್ಬರ 50 ಕೆ.ಜಿಗೆ 150 ರೂ. ಹೆಚ್ಚಿಸಿದ್ದೀರಿ. ರೈತರ ಆದಾಯ ದುಪ್ಪಟ್ಟು ಹೇಗೆ ಆಗುತ್ತದೆ? ಗೊಬ್ಬರ ಸಬ್ಸಿಡಿ ಇಳಿಸಿದ್ದೀರಿ. ಅನುದಾನ ಕಡಿಮೆ ಮಾಡಿ ರೈತರ ಮೇಲೆ ಚಪ್ಪಡಿ ಎಳೆಯುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.