ಬೆಂಗಳೂರು: ಮಹಾಭಾರತದಲ್ಲಿ ಅಧರ್ಮ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಭಿಷ್ಮಾಚಾರ್ಯರು, ದ್ರೋಣಾಚಾರ್ಯರಂತೆ ನಾಡಿನ ಸ್ವಾಮೀಜಿಗಳು, ಮಠಾಧೀಶರು ವರ್ತಿಸಬಾರದು ಎಂದು KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಕರೆ ನೀಡಿರುವ ಪ್ರತಿಭಟನೆ ಭಾಗವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಭಾರತದಲ್ಲಿ, ಹಸ್ತಿನಾಪುರದ ರಾಜಸಭೆಯಲ್ಲಿ ದ್ರೌಪದಿಗೆ ವಸ್ತ್ರಾಪಹರಣ ಆಗುತ್ತಿರುವ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯರಂತಹ ಅತಿರಥರು ಉಪಸ್ಥಿತರಿದ್ದರು. ಅಲ್ಲಿ ಅಧರ್ಮ ನಡೆಯುತ್ತಿದ್ದರೂ ಅವರೆಲ್ಲರೂ ಮೌನವಾಗಿ ಕಣ್ಣುಮುಚ್ಚಿಕೊಂಡು ಕುಳಿತಿದ್ದರು. ಅದೇ ರೀತಿ ಇಂದು ದೇಶದಲ್ಲಿ ಅಶಾಂತಿ, ಗಲಭೆಗಳು, ಅಧರ್ಮ ಹೆಚ್ಚುತ್ತಿದ್ದು, ಇದನ್ನು ನೋಡಿಕೊಂಡು ಸ್ವಾಮೀಜಿಗಳು, ಮಠಾಧೀಶರು ಕೂರಬಾರದು. ಈ ದೇಶದಲ್ಲಿ ಧರ್ಮ, ನ್ಯಾಯ, ಶಾಂತಿಗಾಗಿ, ಎಲ್ಲರೂ ಒಂದಾಗಿ ಸಾಗಲು ನಿಮ್ಮ ಧ್ವನಿ ಎತ್ತಬೇಕು. ಪ್ರಜಾಪ್ರಭುತ್ವಕ್ಕೆ ಸಮಾನತೆಯೇ ಅಡಿಪಾಯವಾಗಿದ್ದು, ಸಮಾನತೆಗಾಗಿ ಬಡವರು, ಅಲ್ಪಸಂಖ್ಯಾತರ ಬಗ್ಗೆ ಧ್ವನಿ ಎತ್ತಬೇಕು ಎಂದರು.
ಹೆಚ್ಚಿನ ಓದಿಗಾಗಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಹಗಲು ದರೋಡೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ನಾವೆಲ್ಲರೂ ಇಂದು ಬೆಲೆ ಏರಿಕೆ ವಿರುದ್ಧ ಮಾತನಾಡುತ್ತಿದ್ದೇವೆ. ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಗೆದ್ದ ನಂತರ ಬಡವರ ಲೂಟಿಗೆ ಇಳಿದಿದೆ. ಪಂಚರಾಜ್ಯ ಚುನಾವಣೆ ನಂತರ ಪ್ರತಿ ನಿತ್ಯ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಆದಾಯ ಮಾತ್ರ ಪಾತಾಳಕ್ಕೆ ಹೋಗುತ್ತಿದೆ. ಮೋದಿ ಅವರು ಎಲ್ಲ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ನಾನು ಹೋದ ಕಡೆಯೆಲ್ಲಾ ಕೇಳುತ್ತಿದ್ದೇನೆ. ಎಲ್ಲರೂ ನಮ್ಮ ಆದಾಯ ಕುಸಿದಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಆದಾಯ ಹೆಚ್ಚಾಗಿದೆ ಎಂದು ಯಾರೂ ಹೇಳಿಲ್ಲ.
ತಮ್ಮ ಮೇಲೆ ಹಾಗೂ ಅನೇಕ ಕಾಂಗ್ರೆಸಿಗರ ಮೇಲೆ ನಡೆದ ಇ.ಡಿ., ಸಿಬಿಐ ಮುಂತಾದ ದಾಳಿಗಳ ಕುರಿತು ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಪ್ರಸ್ತಾಪಿಸಿದರು. ನಾವು ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲೆ ನಡೆಯುತ್ತಿದ್ದೇವೆ. ಆದರೂ ಬಿಜೆಪಿ ಸರ್ಕಾರ ಕೇವಲ ತೊಂದರೆ ಕೊಡುತ್ತಿದೆ. ದಿನಬೆಳಗಾದರೆ ನೋಟಿಸ್ ನೀಡುತ್ತಿದೆ. ಎಲ್ಲ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ನ್ಯಾಯ ನೀತಿ, ಸತ್ಯ, ಧರ್ಮದಲ್ಲಿ ನಾವು ಕೆಲಸ ಮಾಡುತ್ತಿದ್ದು, ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.