ಬೆಂಗಳೂರು: ಬೆಂಗಳೂರಿನ ಸುತ್ತಮುತ್ತ ಉಳಿದಿರುವ ಏಕೈಕ ಹುಲ್ಲುಗಾವಲನ್ನು ಸಂರಕ್ಷಣೆ ಮಾಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ರಾಜ್ಯ ವನ್ಯಜೀವಿ ಮಂಡಳಿಯ 16ನೇ ಸಭೆ ಸಂಜೆ ನಡೆಯಲಿದೆ. ಸುಮಾರು ಐದು ಸಾವಿರ ಎಕರೆಯಷ್ಟಿರುವ ಹುಲ್ಲುಗಾವಲಿನಲ್ಲಿ ಅನೇಕ ಅಪರೂಪದ ವನ್ಯಜೀವಿ, ಪಕ್ಷಿ ಸಂಕುಲಗಳನ್ನು ಉಳಿಸುವ ಕುರಿತು ಬಿಜೆಪಿಯ ಶಾಸಕ, ಸಂಸದ, ಮಾಜಿ ಕಾರ್ಪೊರೇಟರ್‌ಗಳ ನಡುವೇ ಭಿನ್ನಾಭಿಪ್ರಾಯವಿದೆ.
ವನ್ಯಜೀವಿ ತಜ್ಞರ ಜತೆಗೆ ನಡೆಯುತ್ತಿರುವ ಬೃಹತ್ ಅಭಿಯಾನಕ್ಕೆ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಬೆಂಬಲ ಸೂಚಿಸಿರುವುದು, ಸಂಜೆ ನಾಲ್ಕು ಗಂಟೆಗೆ ನಡೆಯುವ ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬ ಕುತೂಹಲ ಮೂಡಿದೆ.
ಹೆಸರಘಟ್ಟ ಹುಲ್ಲುಗಾವಲನ್ನು ಉಳಿಸಬೇಕು, ಅದನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾಮಾನ್ಯ ಪ್ರದೇಶವಾಗಿ ಪರಿಗಣಿಸಿದರೆ ವನ್ಯಜೀವಿನಗಳ ಆವಾಸಸ್ಥಾನಕ್ಕೆ ಧಕ್ಕೆ ಉಂಟುಮಾಡಿದಂತೆ ಆಗುತ್ತದೆ. ದೂರಗಾಮಿಯಾಗಿ ಬೆಂಗಳೂರಿನ ಜನಜೀವನದ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನುವುದು ಪರಿಸರವಾದಿಗಳ ವಾದ. ಈ ಪ್ರದೇಶವನ್ನು `ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ 2021ರ ಜನವರಿ 1ರಂದು ನಡೆದ 15 ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ, ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವ ನಿರ್ಧಾರವನ್ನು ಕೈಬಿಡಲಾಗಿತ್ತು. ಇದು ಪರಿಸರವಾದಿಗಳ ವಿರೋಧಕ್ಕೆ ಕಾರಣವಾಗಿತ್ತು.
ಎಸ್.ಆರ್. ವಿಶ್ವನಾಥ್ ಪ್ರಬಲ ವಿರೋಧ
ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಪರಿಗಣಿಸುವುದಕ್ಕೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಈ ಹಿಂದಿನಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನನುಕೂಲವಾಗುತ್ತದೆ.
ಹೆಸರಘಟ್ಟ, ಶಿವಕೋಟೆ, ಹುರಳಿಚಿಕ್ಕನಹಳ್ಳಿ, ಅರಕೆರೆ ಮತ್ತು ಸೊಣ್ಣೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 45 ಕ್ಕೂ ಹೆಚ್ಚು ಗ್ರಾಮಗಳ ಜನತೆ ತಲೆತಲಾಂತರದಿಂದಲೂ ಈ ಪ್ರದೇಶದೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಈ ಪ್ರದೇಶವನ್ನು ಒತ್ತುವರಿದಾರರ ಕೈಗೆ ಸಿಗದಂತೆ ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹೆಸರಘಟ್ಟ ಹೋಬಳಿ ಕೇಂದ್ರವಾಗಿದ್ದು, ಇಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಇಲಾಖೆಗಳ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಜನರು, ರೈತರು ಹಾಗೂ ಸಾರ್ವಜನಿಕರು ಬಂದು ಹೋಗುತ್ತಾರೆ. ಅಲ್ಲದೇ, ಇಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್, ನೃತ್ಯಗ್ರಾಮ, ರಾಜ್ಯ ಮತ್ತು ಕೇಂದ್ರ ಕುಕ್ಕುಟ ಪಾಲನೆ ತರಬೇತಿ ಕೇಂದ್ರ, ಮೀನುಮರಿ ಸಂಶೋಧನಾ ಉತ್ಪಾದನಾ ಘಟಕ ಮತ್ತು ರಾಜ್ಯ ಹಾಗೂ ಕೇಂದ್ರ ವೀರ್ಯ ಸಂವರ್ಧನ ಕೇಂದ್ರವಿರುತ್ತದೆ.
ಒಂದು ವೇಳೆ, ರಾಜ್ಯ ವನ್ಯಜೀವಿ ಮಂಡಳಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿದಲ್ಲಿ ಈ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದರಿಂದ ಸ್ಥಳೀಯ ಯುವ ಸಮುದಾಯಕ್ಕೆ ನಿರುದ್ಯೋಗದ ಭೀತಿ ಎದುರಾಗುತ್ತದೆ. ಅದೇ ರೀತಿ ಮೀನು ಕೃಷಿ ಸೇರಿದಂತೆ ಇನ್ನಿತರೆ ಕಸುಬುಗಳನ್ನು ಮಾಡುತ್ತಿರುವ ಸಾವಿರಾರು ಬಡ ಕುಟುಂಬಗಳು ಬೀದಿಪಾಲಾಗಬೇಕಾಗುತ್ತದೆ ಮತ್ತು ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವನೆಯನ್ನು ತಿರಸ್ಕರಿಸುವ ಸಭೆಯಲ್ಲಿ ವಿಶ್ವನಾಥ್ ಅವರ ಪುತ್ರ ಹಾಗೂ ವನ್ಯಜೀವಿ ಮಂಡಳಿಯ ಸದಸ್ಯ ಅಲೋಕ್ ವಿಶ್ವನಾಥ್ ಸಹ ಇದ್ದರು. ಮಂಡಳಿಯ ಸದಸ್ಯರಾದ ಸಿದ್ಧಾರ್ಥ್ ಗೋಯೆಂಕಾ ಅವರು ಮಂಡಳಿಯ ನಿರ್ಧಾರಕ್ಕೆ ತಮ್ಮ ಅಸಮ್ಮತಿಯನ್ನು ದಾಖಲಿಸಿದ್ದರು. ವಿಶ್ವನಾಥ್ ಅವರು ತಮ್ಮ ಪ್ರಭಾವವನ್ನು ಬಳಸಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಡ್ಡಿಯುಂಟುಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಸಂರಕ್ಷಿತ ಪ್ರದೇಶವೆಂದು ಘೋಷಿಸುವುದರ ವಿರುದ್ಧ ಪರಿಸರವಾದಿ ವಿಜಯ್ ನಿಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ | ಲಕ್ಷಾಂತರ ರೂಪಾಯಿ ಮೌಲ್ಯದ 8 ಹುಲಿ ಉಗುರು ವಶ; ಸೆನ್ (CEN) ಪೊಲೀಸರ ಭರ್ಜರಿ ಕಾರ್ಯಾಚರಣೆ
ಮಂಡಳಿ ನಿರ್ಧಾರವನ್ನು ರದ್ದುಪಡಿಸಿದ್ದ ಕೋರ್ಟ್
ಈಗಾಗಲೇ ಹುಲ್ಲುಗಾವಲು ಪ್ರದೇಶ ಒತ್ತುವರಿಯಾಗಿ ಸದ್ಯ 5,010 ಎಕರೆ ಮಾತ್ರ ಉಳಿದಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ನೆಲೆಸಿರುವ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಣಾ ಪ್ರದೇಶವಾಗಿ ಘೋಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ನಲ್ಲಿ ಕೋರಲಾಗಿತ್ತು. ವಾದವನ್ನು ಆಳಿಸಿದ್ದ ಅಂದಿನ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಹುಲ್ಲುಗಾವಲು ಪ್ರದೇಶವು ಅಪರೂಪದ 40 ಬಗೆಯ ವನ್ಯಜೀವಿ ಹಾಗೂ 133 ಬಗೆಯ ಪಕ್ಷಿ ಸಂಕುಲಗಳ ಆವಾಸ ಸ್ಥಾನವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಮತ್ತೊಮ್ಮೆ ಮಂಡಳಿಯು ಸೂಕ್ತ ಪ್ರಕ್ರಿಯೆಯ ಮೂಲಕ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿತ್ತು.
ಸಂಸದ, ಮಾಜಿ ಕಾರ್ಪೊರೇಟರ್ ಬೆಂಬಲ
ಹೆಸರಘಟ್ಟ ಹುಲ್ಲುಗಾವಲು ಪ್ರದೇಶದ 5010 ಎಕರೆ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಮಾಜಿ ಕಾರ್ಪರೇಟರ್ ಜಿ. ಮಂಜುನಾಥ ರಾಜು ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಮಂಜುನಾಥ ರಾಜು, ಈ ಪ್ರದೇಶವನ್ನು ಸಂರಕ್ಷಿತ ಎಂದು ಘೋಷಿಸುವುದರಿಂದ ನಮ್ಮ ಜಲ ಭದ್ರತೆ, ವನ್ಯಜೀವಿ ರಕ್ಷಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಹ ಈ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಎಸ್.ಆರ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋರಾಟದ ಹೆಸರಿನಲ್ಲಿ ಈ ಕಾನೂನು ಬಾಹಿರ ನಿರ್ಣಯ ತೆಗೆದುಕೊಳ್ಳುವಂತೆ ಮಾಡಲು ಪ್ರಯತ್ನ ಮಾಡುತ್ತಿರುವವರಿಗೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪ್ರತಿನಿಧಿ. ಅವರಿಗೆ ಹೆಸರಘಟ್ಟ ಹುಲ್ಲುಗಾವಲು ಮತ್ತು ಅದಕ್ಕೆ ಹೊಂದಿಕೊಂಡಿರುವ 45 ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ಕುಟುಂಬಗಳ ನಾಡಿಮಿಡಿತದ ಬಗ್ಗೆ ಅರಿವಿಲ್ಲದಂತೆ ಕಾಣುತ್ತದೆ. ಮೊದಲು ಅವರು ಸ್ಥಳೀಯ ವಾಸ್ತವಾಂಶ ಅರಿತು ತಮ್ಮ ನಿರ್ಧಾರ ಪ್ರಕಟಿಸಬೇಕು. ಅದನ್ನು ಬಿಟ್ಟು ಯಾರೋ ಕೆಲವರು ಟ್ವೀಟ್ ಮಾಡಿದಾಕ್ಷಣ ಅದಕ್ಕೆ ಬೆಂಬಲ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಅನಿಲ್ ಕುಂಬ್ಳೆ ಬೆಂಬಲ
ಈಗಾಗಲೆ ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಆನ್‌ಲೈನ್‌ನಲ್ಲಿ ಬಹುದೊಡ್ಡ ಅಭಿಯಾನ ನಡೆಯುತ್ತಿದೆ. Jhatkaa.org ಯಲ್ಲಿ ನಡೆಯುತ್ತಿರುವ ಆಣ್‌ಲೈನ್ ಪಿಟಿಷನ್‌ಗೆ ಈಗಾಗಲೆ 66 ಸಾವಿರಕ್ಕೂ ಹೆಚ್ಚು ಜನರು ಸಹಿ ಮಾಡಿದ್ದು, ಹೆಸರಘಟ್ಟವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಈ ಕುರಿತು ಟ್ವೀಟ್ ಮಾಡಿದ್ದು, ಸರ್ಕಾರವು ಕೈಗೊಳ್ಳುವ ನಿರ್ಧಾರವು ಜಲಭದ್ರತೆ ಹಾಗೂ ಮುಂದಿನ ಪೀಳಿಗೆಯನ್ನು ಪ್ರಭಾವಿಸುತ್ತದೆ ಎಂದಿದ್ದಾರೆ.
ಸಿಎಂ ಸಭೆಯ ಮೇಲೆ ಎಲ್ಲರ ಕಣ್ಣು
ವನ್ಯಜೀವಿ ಮಂಡಳಿಯ ಹಿಂದಿನ ನಿರ್ಧಾರವನ್ನು ಹೈಕೋರ್ಟ್ ರದ್ದುಪಡಿಸಿದ ನಂತರ ಇದೀಗ 16ನೇ ಸಭೆ ಸಂಜೆ 4ಗಂಟೆಗೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಲಿದೆ. ಈ ಸಭೆಯ ಅಜೆಂಡಾದಲ್ಲಿ ಹೆಸರಘಟ್ಟ ಹುಲ್ಲುಗಾವಲಿನ ವಿಚಾರ ಇದೆ ಎಂದು ಮಂಡಳಿಯ ಸದಸ್ಯರೊಬ್ಬರು ಖಚಿತಪಡಿಸಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಎಲ್ಲ ಪ್ರಕ್ರಿಯೆಗಳನ್ನೂ ಪಾಲನೆ ಮಾಡಬೇಕು. ಇಲ್ಲವೆಂದರೆ ಮತ್ತೆ ನ್ಯಾಯಾಲಯ ಚಾಟಿ ಬೀಸುವ ಅಪಾಯ ಇದ್ದೇ ಇದೆ. ಹೀಗಾಗಿ ಸಿಎಂ ನೇತೃತ್ವದ ಸಭೆಯ ಮೇಲೆ ಪರಿಸರವಾದಿಗಳ, ವನ್ಯಜೀವಿ ಸಂರಕ್ಷಕರ ದೃಷ್ಟಿ ನೆಟ್ಟಿದೆ.
ಇದನ್ನೂ ಓದಿ | Viral Video | ಪಂಜರದಲ್ಲಿರುವ ಮನುಷ್ಯರನ್ನು ನೋಡಲು ಬಂದು ನಿಲ್ಲುವ ಕಾಡು ಪ್ರಾಣಿಗಳು !