ಕೊಟ್ಟೂರು: ಸಾಹಿತಿ ಕುಂ. ವೀರಭದ್ರಪ್ಪ (Kum Veerabhadrappa) ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಪತ್ರ ಬಂದಿದ್ದು, ಇದು ಅವರಿಗೆ ಬಂದು ತಲುಪಿದ 16ನೇ ಪತ್ರವಾಗಿದೆ. ಆದರೆ, ಈ ಎಲ್ಲ ಪತ್ರಗಳನ್ನು ಗಂಭೀರವಾಗಿ ಪರಿಗಣಿಸದ ವೀರಭದ್ರಪ್ಪ ಅವರು, ನನಗೆ ಬಂದಿರುವ ಬೆದರಿಕೆ ಪತ್ರಗಳಲ್ಲಿ (Threat Letter) ಕಾಗುಣಿತ ದೋಷಗಳು ಬಹಳಷ್ಟು ಇವೆ ಎಂಬುದೇ ನೋವಿನ ಸಂಗತಿಯಾಗಿದೆ. ಮೊದಲು ಅದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ!
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಒಂದಂತೂ ಸ್ಪಷ್ಟವಾಗಿದೆ. ಬಂದ ಹದಿನಾರೂ ಪತ್ರಗಳ ಕೈಬರಹ ಒಂದೇ ರೀತಿಯಾಗಿವೆ. ಹಾಗಾಗಿ ಒಬ್ಬನೇ ಈ ಪತ್ರವನ್ನು ಬರೆದಿದ್ದಾನೆ. ಆದರೆ, ಈ ಎಲ್ಲ ಬೆದರಿಕೆ ಪತ್ರಗಳಲ್ಲಿ ಅನೇಕ ಕಾಗುಣಿತ ದೋಷಗಳಿವೆ. ನನಗೆ ಪತ್ರ ಬರೆಯುವಾತ ಸ್ಪಷ್ಟ ಹಾಗೂ ನಿಖರ ಕನ್ನಡ ಪದ ಬಳಕೆಯನ್ನು ಮಾಡುತ್ತಿಲ್ಲ. ಒಂದು ವೇಳೆ ಆತ ನನಗೆ ಸಿಕ್ಕರೆ ಖಂಡಿತವಾಗಿಯೂ ಕನ್ನಡ ವರ್ಣಮಾಲೆ, ಕಾಗುಣಿತದ ಪಾಠ ಮಾಡುತ್ತೇನೆ. ಇದರ ಜತೆಗೆ ಪತ್ರ ಬರೆಯುವ ವಿಧಾನವನ್ನು ಸಹ ಹೇಳಿಕೊಡಬೇಕೆಂದಿದ್ದೇನೆ ಎಂದು ಹೇಳಿದ್ದಾರೆ.
ನನಗಿವು ಪ್ರೇಮಪತ್ರಗಳು!
ಪತ್ರ ಬರೆಯುವಾತ ಹೀಗೆಯೇ ಕನಿಷ್ಠ ಇನ್ನು 100 ಪತ್ರಗಳನ್ನು ಬರೆದಿದ್ದೇ ಆದರೆ, ಎಲ್ಲವನ್ನೂ ಒಟ್ಟುಗೂಡಿಸಿ ಪ್ರೇಮಪತ್ರಗಳು ಎಂದು ಹೆಸರಿಟ್ಟು ಒಂದು ಪುಸ್ತಕವನ್ನಾಗಿ ಸಿದ್ಧಪಡಿಸಿ ಬಿಡುಗಡೆ ಮಾಡುತ್ತೇನೆ. ಆದರೆ, ಆತನಲ್ಲಿ ನನ್ನದೊಂದು ವಿನಂತಿ ಇದೆ. ಹೀಗೆ ತಿಂಗಳಿಗೋ, ಮೂರು ತಿಂಗಳಿಗೋ ಒಂದರಂತೆ ಪತ್ರ ಬರೆದರೆ, ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ದಯಮಾಡಿ ದಿನಕ್ಕೊಂದರಂತೆ ಆದರೂ ಪತ್ರ ಬರೆದು ಕೊಡಲಿ ಎಂದು ಮನವಿ ಕುಂ.ವೀರಭದ್ರಪ್ಪ ಮನವಿ ಮಾಡಿದ್ದಾರೆ.
ಬೆದರಿಕೆ ಪತ್ರದಲ್ಲಿ ಏನಿದೆ?
ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭವಾಗಿದೆ. ಹಿಂದು ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರವಾಗಿದೆ. ನಿಮ್ಮ ಕುಲ ವೀರಭದ್ರ, ನಿಮ್ಮಂತಹ ದುರ್ಜನ ದೇಶದ್ರೋಹಿಗಳಿಗೆ ಮತ್ತು ಮತಾಂಧ ಮುಸ್ಲಿಮರಿಗೆ, ಮತಾಂತರಿ ಕ್ರೈಸ್ತರಿಗೆ ಸಂಪ್ರಿಯಾ ಸರ್ಕಾರ ಇದಾಗಿದೆ.
ಇದನ್ನೂ ಓದಿ: Double murder: ಅವಳಿ ಮಕ್ಕಳನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿದ ತಂದೆ; ಕಾರಲ್ಲೇ ಶವ ಇಟ್ಟಿದ್ದ ಪಾಪಿ
ಉರಿಯಿರಿ ಮಕ್ಕಳಾ ಉರಿಯಿರೀ.., ಇಂದಲ್ಲ ನಾಳೆ ಅಧರ್ಮದಿಂದ ತುಂಬಿರುವ ನಿಮ್ಮಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ. ಕುಂ.ವೀರಭದ್ರದ್ರ ನಿನ್ನ ಅಂತ್ಯ ನಿಶ್ಚಿತ ಎಂದು ಪತ್ರದಲ್ಲಿ ಬರೆಯಲಾಗಿದೆ. ಕೊಟ್ಟೂರು ಪೊಲೀಸರು ಬೆದರಿಕೆ ಪತ್ರವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.