Site icon Vistara News

ಅಪ್ರಾಪ್ತ ಬಾಲಕಿಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ವರ್ಷದ ಹಿಂದೆ ಮದುವೆಯಾಗಿದ್ದ ಧೂರ್ತನೇ ರೂವಾರಿ

assault

ಚಿತ್ರದುರ್ಗ: ಚಿತ್ರದುರ್ಗ ನಗರದ ನಿವಾಸಿಯಾಗಿರುವ ೧೭ ವರ್ಷದ ಬಾಲಕಿಯೊಬ್ಬಳ ಮೇಲೆ ನಾಲ್ವರು ಧೂರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್‌ ೭ರಂದು ಈ ಘಟನೆ ನಡೆದಿದೆ. ಆದರೆ, ಆರೋಪಿಗಳು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದರಿಂದ ಬಾಲಕಿ ಇದುವರೆಗೂ ಮೌನವಾಗಿದ್ದಳು. ಇದೀಗ ವಿಚಾರ ಹೇಗೋ ಮನೆಯವರಿಗೆ ತಿಳಿದು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಬಾಲ್ಯ ವಿವಾಹದ ಸುಳಿಯಲ್ಲಿ
ನಿಜವೆಂದರೆ, ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಆಗಲೇ ಮದುವೆಯಾಗಿದೆ. ವರ್ಷದ ಹಿಂದೆ ವ್ಯಕ್ತಿಯೊಬ್ಬ ಈಕೆ ಮತ್ತು ಮನೆಯವರಿಗೆ ಬೆದರಿಕೆ ಆಕೆ ಮದುವೆ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ, ಆ ಬಾಲಕಿ ಒಂದು ದಿನವೂ ಸುಖವಾಗಿ ನೆಮ್ಮದಿಯಿಂದ ಬಾಳ್ವೆ ನಡೆಸಿದಂತಿಲ್ಲ.

ಮದುವೆಯಾದ ಕೆಲವೇ ದಿನಗಳಲ್ಲಿ ಧೂರ್ತ ಗಂಡ ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಲು ಆರಂಭಿಸಿದ್ದ. ಪ್ರತಿ ದಿನವೂ ಹೊಡೆದು ಬಡಿದು ಹಿಂಸೆ ನೀಡುತ್ತಿದ್ದ. ಇದನ್ನೆಲ್ಲ ಬಾಲಕಿ ಅವುಡುಗಚ್ಚಿ ಸಹಿಸಿಕೊಂಡು ಕಣ್ಣೀರು ಹಾಕುತ್ತಿದ್ದಳು. ಆದರೆ, ಜೂನ್‌ ೭ರಂದು ಭಯಾನಕ ಕೃತ್ಯಕ್ಕೇ ಅವನು ಕೈ ಹಾಕಿದ್ದ.

ಪ್ರತಿದಿನ ಏನಾದರೊಂದು ಕಾರಣ ನೀಡಿ ಹಲ್ಲೆ ಮಾಡುತ್ತಿದ್ದ ಆತ ಶೀಲದ ವಿಚಾರದಲ್ಲಿ ನಿತ್ಯ ಮನಸು ನೋಯಿಸುತ್ತಿದ್ದ. ಕಳೆದ ಜೂನ್‌ ೭ರಂದು ಆಕೆಯನ್ನು ತಾವೇ ಸ್ವತಃ ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವನ ಮೂವರು ಧೂರ್ತ ಗೆಳೆಯರು ಇದ್ದರು. ಅವರ ಮುಂದೆ ತಾನೇ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಅವರಿಗೂ ಕುಮ್ಮಕ್ಕು ನೀಡಿ ಅತ್ಯಾಚಾರ ಮಾಡುವಂತೆ ಪ್ರೇರೇಪಿಸಿದ ಎನ್ನಲಾಗಿದೆ. ಜತೆಗೆ ಆಕೆಯ ಮೇಲೆ ಹಲ್ಲೆಯೂ ನಡೆದಿದೆ.

ನಾಲ್ವರು ಕಾಮುಕರ ಕೈಗೆ ಸಿಲುಕಿದ ಬಾಲಕಿ ತೀವ್ರ ನೋವುಂಡಿದ್ದರೂ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಯಾರಲ್ಲೂ ಹೇಳಿರಲಿಲ್ಲ. ಆದರೆ, ಹುಡುಗಿಯ ನಡವಳಿಕೆ ಕಂಡು ಮನೆಯವರು ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ. ಹೆಣ್ಣೊಬ್ಬಳ ರಕ್ಷಣೆಗೆ ನಿಲ್ಲಬೇಕಾದ ಗಂಡನೇ ಈ ರೀತಿಯಾಗಿ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿ ಶೋಷಿಸಿದ ವಿದ್ಯಮಾನ ಎಲ್ಲರ ಮನಸು ಕಲಕಿದೆ.

ಇದೀಗ ಮಹಿಳಾ ಠಾಣೆಯಲ್ಲಿ ನಾಲ್ವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಸದ್ಯವೇ ಬಂಧನ ನಡೆಯಲಿದೆ.

Exit mobile version