ಬೆಂಗಳೂರು: ವಿಮಾನ ಹಾರುವಾಗ ಸಣ್ಣದೊಂದು ಹಕ್ಕಿ ಬಡಿದರೂ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗುತ್ತದೆ. ಅದರ ಕುರಿತು ಕೂಡ ತನಿಖೆ ನಡೆಸಲಾಗುತ್ತದೆ. ಅಂತಹದ್ದರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಎರಡು ಇಂಡಿಗೋ ವಿಮಾನಗಳು (IndiGo Flights) ಹಾರಾಟ ನಡೆಸುವಾಗ ದಿಢೀರನೆ ಡ್ರೋನ್ ಪತ್ತೆಯಾಗಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.
ಕಳೆದ ಮಂಗಳವಾರ (ಸೆಪ್ಟೆಂಬರ್ 26) ಘಟನೆ ನಡೆದಿದೆ. ಮೊದಲು ಇಂಡಿಗೋ ವಿಮಾನವೊಂದು ಹಾರಾಟ ಆರಂಭಿಸುತ್ತಲೇ ಅದರ ಸಮೀಪ ಡ್ರೋನ್ ಬಂದಿದೆ. ಕೂಡಲೇ ಗಮನಿಸಿದ ಪೈಲಟ್, ಈ ಕುರಿತು ಏರ್ ಟ್ರಾಫಿಕ್ ಕಂಟ್ರೋಲರ್‌ಗೆ (ATC) ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮತ್ತೊಂದು ವಿಮಾನ ಟೇಕ್ ಆಫ್ ಆಗಿದ್ದು, ಆಗಲೂ ಅದರ ಸಮೀಪ ಡ್ರೋನ್ ಬಂದಿದೆ. ಎರಡೂ ಸಂದರ್ಭಗಳಲ್ಲಿ ಪೈಲಟ್‌ಗಳು ಚಾಣಾಕ್ಷತನ ಪ್ರದರ್ಶಿಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ತನಿಖೆಗೆ ಆದೇಶ
ಇಂಡಿಗೋ ವಿಮಾನಗಳು ಹಾರಾಟ ನಡೆಸುವಾಗಲೇ ಎರಡು ಡ್ರೋನ್‌ಗಳು ಪತ್ತೆಯಾಗಿರುವ ಪ್ರಕರಣವನ್ನು ಕೂಡಲೇ ತನಿಖೆಗೆ ಆದೇಶಿಸಲಾಗಿದೆ. ಹಾಗೆಯೇ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಪದೇಪದೆ ವಿಮಾನಗಳು ಹಾರಾಟ ನಡೆಸುವಾಗ ಡ್ರೋನ್ ಕಾಣಿಸಿಕೊಂಡಿರುವ ಕಾರಣ ವಿಮಾನ ನಿಲ್ದಾಣದಲ್ಲಿ ಆತಂಕ ಮನೆಮಾಡಿತ್ತು ಎನ್ನಲಾಗಿದೆ.
ಇದನ್ನೂ ಓದಿ: ವಿಸ್ತಾರ Explainer| ಲೋಹದ ಹಕ್ಕಿಗಳ ದೋಷ, ತುರ್ತು ಭೂಸ್ಪರ್ಶ, ಪ್ರಯಾಣಿಕರ ಸುರಕ್ಷತೆ ಹೇಗೆ?
“ಇಂಡಿಗೋ ವಿಮಾನಗಳ ಬಳಿ ಪತ್ತೆಯಾದ ಡ್ರೋನ್ ಯಾವುದು, ಅದು ಎಂತಹ ಡಿವೈಸ್ ಆಗಿತ್ತು ಹಾಗೂ ಯಾವ ಕಡೆಯಿಂದ ಬಂದಿದೆ ಎಂಬುದರ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಕೆಲ ತಿಂಗಳ ಹಿಂದೆ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನವು ಟೇಕ್ ಆಫ್ ಆಗುವ ಮೊದಲೇ ಹಕ್ಕಿಯೊಂದು ಡಿಕ್ಕಿಯಾಗಿತ್ತು. ಇದಾದ ಬಳಿಕ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ಮಾಡಲಾಗಿತ್ತು.