Site icon Vistara News

Dr. Manjappa: ನಾಲ್ಕು ತಲೆಮಾರಿಗೆ ಚಿಕಿತ್ಸೆ ನೀಡಿದ್ದ 2 ರೂಪಾಯಿ ವೈದ್ಯ ಖ್ಯಾತಿಯ ಡಾ. ಮಂಜಪ್ಪ ನಿಧನ

2 rupee doctor who treated four generations of people Dr. Manjappa passes away

ಸಾಗರ: ಇಲ್ಲಿನ ಜೋಸೆಫ್ ನಗರ ನಿವಾಸಿ, ಬಡವರ ವೈದ್ಯರೆಂದೇ ಪ್ರಖ್ಯಾತರಾಗಿದ್ದ ಡಾ. ಮಂಜಪ್ಪ (85) (Dr. Manjappa) ಭಾನುವಾರ ನಿಧನರಾಗಿದ್ದಾರೆ.

ಕಳೆದ ಆರು ದಶಕಗಳಿಂದ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮಂಜಪ್ಪ ಅವರು ಜೆ.ಸಿ. ರಸ್ತೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ರೋಗಿಗಳು ಇವರ ಕೈಗುಣವನ್ನು ಮೆಚ್ಚಿ ತಪಾಸಣೆಗೆ ಬರುತ್ತಿದ್ದರು. ವಿಶೇಷವೆಂದರೆ ಡಾ. ಮಂಜಪ್ಪ ಅವರು ಈ ಭಾಗದಲ್ಲಿ ಎರಡು ರೂಪಾಯಿ ವೈದ್ಯರು ಎಂದೇ ಪ್ರಖ್ಯಾತಿ ಪಡೆದಿದ್ದರು.

ತಪಾಸಣೆಗೆ ಬರುವ ರೋಗಿಗಳಿಗೆ ಇಂತಿಷ್ಟೇ ಹಣ ಕೊಡಿ ಎಂದು ಡಾ. ಮಂಜಪ್ಪ ಯಾವತ್ತೂ ಬೇಡಿಕೆ ಇಟ್ಟವರಲ್ಲ. ಸದಾ ಲವಲವಿಕೆಯಿಂದ ಇರುತ್ತಿದ್ದ ಡಾ. ಮಂಜಪ್ಪ ಅವರು ಫಲಾಪೇಕ್ಷೆ ಇಲ್ಲದೆ ವೈದ್ಯಕೀಯ ಸೇವೆ ಮಾಡುತ್ತಿರುವುದನ್ನು ಗೌರವಿಸಲು ಸಂಘಸಂಸ್ಥೆಗಳು ಮುಂದೆ ಬಂದಾಗ ಅದನ್ನು ಅವರು ನಯವಾಗಿ ನಿರಾಕರಿಸಿ, ತಮಗೆ ಸೇವೆಯಲ್ಲೇ ಸಂತೃಪ್ತಿ ಇದೆ ಎನ್ನುವ ಮಾತುಗಳನ್ನಾಡುತ್ತಾ ನಿರಂತರ ಸೇವೆ ಮಾಡಿಕೊಂಡು ಬಂದಿದ್ದರು.

ಇದಲ್ಲದೆ, ಮೂರ್ನಾಲ್ಕು ತಲೆಮಾರಿನವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಎಂಬ ಹೆಗ್ಗಳಿಕೆಯೂ ಇವರಿಗೆ ಇದೆ. ಕೆಲವೊಂದು ಸಂದರ್ಭದಲ್ಲಿ ಸೈಕಲ್‌ ಹೊಡೆದುಕೊಂಡೇ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡಿದ್ದೂ ಇದೆ. ಕೆಲವೊಮ್ಮೆ ರೋಗಿಗಳಿಂದ ದುಡ್ಡನ್ನೂ ಪಡೆಯದೆ ಇವರೇ ಔಷಧಿಗಳನ್ನು ನೀಡಿ ಕಳುಹಿಸಿರುವ ನಿದರ್ಶನಗಳೂ ಇವೆ.

ಇದನ್ನೂ ಓದಿ: ಮಗಳನ್ನು ಬಾವಿಗೆ ಎಸೆದು ಅಳಿಯ ಕೊಂದಿದ್ದಾನೆ; ಶಿಕ್ಷೆ ಕೊಡಿಸಿ ಎಂದು ಎಚ್.ಡಿ. ಕುಮಾರಸ್ವಾಮಿ ಪಾದ ಹಿಡಿದು ಕಣ್ಣೀರಿಟ್ಟ ಮಹಿಳೆ

ಅವರಿಗೆ ಒಬ್ಬರು ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಭಾನುವಾರ ಮಾರಿಕಾಂಬಾ ರುದ್ರಭೂಮಿಯಲ್ಲಿ ನಡೆಯಿತು. ಶಾಸಕ ಹಾಲಪ್ಪ ಹರತಾಳು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕ ಗಣ್ಯರು ಡಾ. ಮಂಜಪ್ಪ ಅವರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.

Exit mobile version