Site icon Vistara News

Power Point with HPK : ಗೌಳಿವಾಡ ಸೇರಿ 2 ಗ್ರಾಮಕ್ಕೆ ಕೂಡಲೇ ವಿದ್ಯುತ್‌: ವಿಸ್ತಾರ ನ್ಯೂಸ್‌ ವರದಿಗೆ ಜಾರ್ಜ್‌ ಸ್ಪಂದನೆ

KJ George in Power Point With HPK

ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೌಳಿವಾಡ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಇಲ್ಲದಿರುವುದರ ಬಗ್ಗೆ ವಿಸ್ತಾರ ನ್ಯೂಸ್‌ ವರದಿ (Vistara News Report) ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಕೂಡಲೇ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಲ್ಲಿ ಎರಡು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಅಲ್ಲಿಗೆ ಸೋಲಾರ್‌ ವಿದ್ಯುತ್‌ ಸಂಪರ್ಕ ಕೊಡಿಸುತ್ತೇವೆ. ಅಲ್ಲಿ ಕಂಬ ಹಾಕಲು ಅರಣ್ಯ ಪ್ರದೇಶ ಆಗಿರುವುದರಿಂದ ಸೋಲಾರ್‌ ಮೂಲಕ ವಿದ್ಯುತ್‌ ಕೊಡುವ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನ ಸರ್ವಜ್ಞ ನಗರ ಶಾಸಕ, ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಇಂಧನ ಸಚಿವ ಕೆ.ಜೆ. ಜಾರ್ಜ್, ಒಂದು ವೇಳೆ ಆ ಹಳ್ಳಿಗಳ ಜನರಿಗೆ ಸೋಲಾರ್‌ ವಿದ್ಯುತ್‌ ಸಾಧ್ಯವಿಲ್ಲದಿದ್ದರೆ ಇನ್ಯಾವುದಾದರೂ ಮಾರ್ಗದಲ್ಲಿಯಾದರೂ ವಿದ್ಯುತ್‌ ವ್ಯವಸ್ಥೆಯನ್ನು ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಇದು ಮಾತ್ರವಲ್ಲ ನಾನೇ ಖುದ್ದು ಆ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಹೋಗಿ ಪರಿಶೀಲನೆ ನಡೆಸುತ್ತೇನೆ. ಆದರೆ, ನಾನು ಭೇಟಿ ನೀಡುವುದರೊಳಗೆ ಅಲ್ಲಿನ ಜನರಿಗೆ ವಿದ್ಯುತ್‌ ಸಂಪರ್ಕ ಸಿಗುತ್ತದೆ ಎಂದು ಸ್ಪಷ್ಟಪಡಿಸಿದರು.

ಮೀಟರ್‌ ವೇಗವಾಗಿ ಓಡುತ್ತಿಲ್ಲ!

ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದ ಮೇಲೆ ಮನೆಯ ಮೀಟರ್‌ಗಳು ಹೆಚ್ಚು ವೇಗವಾಗಿ ಓಡುತ್ತಿವೆ ಎಂಬ ದೂರುಗಳು ಸತ್ಯಕ್ಕೆ ದೂರವಾಗಿದೆ. ಹಾಗಲ್ಲ ವೇಗವಾಗಿ ಮೀಟರ್‌ ಓಡುವುದಿಲ್ಲ. ಯಾರು ಎಷ್ಟು ಉಪಯೋಗ ಮಾಡುತ್ತಾರೋ ಅಷ್ಟನ್ನು ಮಾತ್ರವೇ ರೀಡಿಂಗ್‌ ಮಾಡಲಾಗುತ್ತದೆ ಎಂದು ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Power point with HPK : ಗ್ಯಾರಂಟಿಗಳಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ; ಕೆ.ಜೆ. ಜಾರ್ಜ್‌ ಪ್ರತಿಪಾದನೆ

ಖರೀದಿ ಹೊರೆಯನ್ನು ಜನರ ಮೇಲೆ ಹಾಕುತ್ತಿದ್ದೇವೆ

ಆದರೆ, ವಿದ್ಯುತ್‌ ಬಿಲ್‌ ಹೆಚ್ಚಿಗೆ ಬರುತ್ತಿರುವುದು ಹೌದು. ಇಂಧನ ಖರ್ಚು, ಖರೀದಿ ಖರ್ಚು ಹೆಚ್ಚಾಗಿದೆ. ಇಂತಹ ಹಣವನ್ನು ಆಗಾಗ ಗ್ರಾಹಕರಿಂದಲೇ ವಸೂಲಿ ಮಾಡಬೇಕು ಎಂದು ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಅಥಾರಿಟಿಯವರು ಹೇಳಿದ್ದಾರೆ. ಇನ್ನು ನಾವು ಬರುವ ಮೊದಲು ವಿದ್ಯುತ್‌ ಖರೀದಿಯಲ್ಲಿಯೂ ಹೆಚ್ಚಳವಾಗಿತ್ತು. ಹೀಗಾಗಿ ನಾವು ಬರುವುದರೊಳಗೇ ಕೆಇಆರ್‌ಸಿಯವರು ವಿದ್ಯುತ್‌ ದರ ಹೆಚ್ಚಳದ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡಿದ್ದರು. ಈ ಹಿಂದಿನ ಸರ್ಕಾರದಲ್ಲಿ ಕೊನೇ ವೇಳೆ ಎಲೆಕ್ಷನ್‌ ಇದ್ದಿದ್ದರಿಂದ ಮೂರು ತಿಂಗಳು ಬಿಲ್‌ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಆ ಎಲ್ಲವನ್ನೂ ಸೇರಿಸಿ ಈಗ ಮೂರು ತಿಂಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.

Exit mobile version