Site icon Vistara News

Free Electricity : ಸರ್ಕಾರಿ ಶಾಲೆಗೂ 200 ಯುನಿಟ್‌ ಉಚಿತ ವಿದ್ಯುತ್!

Madhu bangarappa and Free Electrycity

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ (Congress Guarantee) ಒಂದಾಗಿರುವ 200 ಯುನಿಟ್ ಉಚಿತ ವಿದ್ಯುತ್ (200 unit free Electricity) ಅನ್ನು ಸರ್ಕಾರಿ ಶಾಲೆಗಳಲ್ಲಿಯೂ ಜಾರಿಗೆ ತರುವ ಬಗ್ಗೆ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಬಗ್ಗೆ ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲೆಗಳಿಂದಲೂ ಉಚಿತ ವಿದ್ಯುತ್ ನೀಡಿ ಎಂದು ಮನವಿಗಳು ಬಂದಿವೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Internal Marks : ಪಿಯುಸಿಯಲ್ಲಿ ಇನ್ನು ಸೈನ್ಸ್‌ ಮಾತ್ರ ಅಲ್ಲ ಎಲ್ಲ ವಿಷಯಗಳಿಗೂ Internal Marks

ನಾನು ಅಧಿಕಾರ ವಹಿಸಿಕೊಂಡ ತಕ್ಷಣ ಶಿಕ್ಷಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇನೆ. ಸುಮಾರು 88 ಸಾವಿರ ಶಿಕ್ಷಕರು ವರ್ಗಾವಣೆ ಬಯಸಿದ್ದಾರೆ. ಆದಷ್ಟು ಬೇಗ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಿದ್ದೇವೆ. ನಾನು ಅಧಿಕಾರಕ್ಕೆ ಬಂದಾಗ 52 ಶಾಲೆಗಳಲ್ಲಿ ಶಿಕ್ಷಕರು ಇಲ್ಲ ಅನ್ನೋದು ಗಮನಕ್ಕೆ ಬಂತು. ಹೀಗಾಗಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ಅಲ್ಲದೆ, ಶಿಕ್ಷಕರ ನೇಮಕಾತಿ (Teachers Appointment) ವಿಚಾರವು ಕೋರ್ಟ್‌ನಲ್ಲಿ ಇದೆ. ಈ ಕಾರಣಕ್ಕೆ ಅಡ್ವೋಕೇಟ್‌ ಜನರಲ್‌ ಜತೆ ಚರ್ಚಿಸಿ ಶೀಘ್ರವೇ ಬಗೆಹರಿಸಲಾಗುವುದು ಎಂದು ಹೇಳಿದ ಮಧು ಬಂಗಾರಪ್ಪ, ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾವು ಏನೇ ನಿರ್ಧಾರ ಕೈಗೊಂಡರೂ ಮಕ್ಕಳ ಹಿತದೃಷ್ಟಿಯಿಂದ ಇರುತ್ತದೆ ಎಂದಷ್ಟೇ ಹೇಳಿದರು.

ಅನಧಿಕೃತ ಶಾಲೆ ಬಗ್ಗೆ ಕ್ರಮ

ಅನಧಿಕೃತ ಶಾಲೆಗಳ ವಿಚಾರವಾಗಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅನಧಿಕೃತ ಶಾಲೆಗಳಿಗೆ (Unauthorized School) ಸಮಯಾವಕಾಶ ನೀಡಲಾಗುತ್ತಿದೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ, ಅವುಗಳನ್ನು ಸರಿಪಡಿಸಿ ಅನುಮತಿ ನೀಡಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎನ್‌ಇಪಿ ಇಲ್ಲ, ರಾಜ್ಯ ಶಿಕ್ಷಣ ನೀತಿಯೇ ಜಾರಿ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ/NEP) ನಾವು ಮೊದಲಿನಿಂದಲೂ ವಿರೋಧ ಮಾಡುತ್ತಾ ಬಂದಿದ್ದೇವೆ. ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ/SEP) ಜಾರಿ ಮಾಡುತ್ತೇವೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರು ಅಧ್ಯಕ್ಷರಾಗಿದ್ದಾರೆ. ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೆ ಚಿಂತನೆ ನಡೆಸಲಾಗಿದ್ದು, ಮುಂದಿನ ವರ್ಷಕ್ಕೆ ಆಗುವ ಎಲ್ಲ ಬದಲಾವಣೆಗಳೂ ಈ ಕಮಿಟಿ ಮೂಲಕವೇ ಆಗಲಿದೆ. ಮಕ್ಕಳ ಹಿತದೃಷ್ಟಿಯಿಂದ ಈ ಬದಲಾವಣೆ ಆಗಲಿದೆ ಎಂದು ಹೇಳಿದರು.

ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ

ಚಕ್ರವರ್ತಿ ಸೂಲಿಬೆಲೆ (Chakravarthy sulibele) ಹಾಗೂ ವೀರ ಸಾವರ್ಕರ್ (Veer Savarkar) ಪಠ್ಯವನ್ನು (Text Book) ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ. ಪಠ್ಯದಲ್ಲಿ ಇನ್ನೂ ಬದಲಾವಣೆ ಮಾಡಬೇಕಿತ್ತು. ಅವುಗಳನ್ನು ಮುಂದಿನ ವರ್ಷದಲ್ಲಿ ಮಾಡುತ್ತೇವೆ. ಹಿಂದೆ ಇದ್ದ ಪಠ್ಯವನ್ನು ನಾವು ಸೇರಿಸಿದ್ದೇವೆಯೇ ಹೊರತು ಹೊಸದೇನನ್ನೂ ಸೇರಿಸಿಲ್ಲ. ಐಡಿಯಾಲಜಿ ಇರಬಾರದು ಎಂಬ ಕಾರಣಕ್ಕೆ ಪಠ್ಯವನ್ನು ಮರು ಪರಿಷ್ಕರಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆಯನ್ನು ನಾವು 100% ಬದಲಾವಣೆ ಮಾಡುತ್ತೇವೆ. ಹೊಸ ಪರಿಷ್ಕರಣೆ ಕಮಿಟಿ ಇನ್ನೂ ಫೈನಲ್ ಆಗಿಲ್ಲ. ಎಲ್ಲ ವಿಭಾಗಗಳ ಪರಿಣಿತರನ್ನು ಕಮಿಟಿಯಲ್ಲಿ (Textbook Committee) ಸೇರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Weather report : ಇನ್ನೊಂದು ವಾರ ಕಾಣೆಯಾಗುವ ಸೂರ್ಯ; ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ

ನನ್ನನ್ನು ಸಿಎಂ ಮತ್ತೆ ಶಾಲೆಗೆ ಸೇರಿಸಿದರು!

30 ವರ್ಷದ ಹಿಂದೆ ಶಾಲೆಗೆ ಹೋಗಿದ್ದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ನನ್ನ ಮತ್ತೆ ಶಾಲೆಗೆ ಸೇರಿಸಿದ್ದಾರೆ. ಮಕ್ಕಳಿಗೆ ವಾರಕ್ಕೆ ಒಂದೇ ಮೊಟ್ಟೆ ಕೊಡಲಾಗುತ್ತಿತ್ತು. ನಮ್ಮ ಸರ್ಕಾರ ಬಂದ ಮೇಲೆ ವಾರಕ್ಕೆ ಎರಡು ಮೊಟ್ಟೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲು 1 ರಿಂದ 8ನೇ ತರಗತಿವರೆಗೂ ಮಾತ್ರವೇ ಮೊಟ್ಟೆ ನೀಡಲಾಗುತ್ತಿತ್ತು. ಸಿಎಂ ಜತೆ ಚರ್ಚೆ ಮಾಡಿ 9 ಹಾಗೂ 10ನೇ ತರಗತಿಗೂ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಎಸ್‌ಡಿಎಂಸಿಗೆ (SDMC authority) ಮೊಟ್ಟೆ ನೀಡುವ ಜವಾಬ್ದಾರಿ ನೀಡಲಾಗಿದೆ. ಶೂ ನೀಡುವ ಅಧಿಕಾರವನ್ನೂ ಅವರಿಗೇ ನೀಡಲಾಗಿದೆ. 140 ಕೋಟಿ ಹೆಚ್ಚುವರಿ ಮೊಟ್ಟೆ ನೀಡುವುದರಿಂದ ಹೆಚ್ಚುವರಿ ಹೊರೆಯಾಗಲಿದೆ. ಚಿಕ್ಕಿಸ್ ಹಾಗೂ ಬಾಳೆಹಣ್ಣು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ಪ್ರತಿ ಮಗುವಿಗೆ 80 ರಿಂದ 84 ದಿನ ಮೊಟ್ಟೆ ನೀಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿಥಿಲಾವಸ್ಥೆ ಶಾಲೆ ಬಗ್ಗೆ ಕ್ರಮ

ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಮಳೆಗಾಲ ಶುರುವಾಗಿದ್ದು, ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆರ್ಥಿಕ ಸಹಾಯ ನೀಡುವ ಬಗ್ಗೆ ಸಿಎಂ‌ ಭರವಸೆ ನೀಡಿದ್ದಾರೆ. ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಕೊರತೆ ಇದ್ದು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಶೌಚಾಲಯ ನಿರ್ವಹಣೆಗೆ 150 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಸರ್ಕಾರಿ ಶಾಲೆಗಳ ನಿರ್ವಹಣೆಗೆ ಸಿಎಸ್‌ಆರ್ ಅನುದಾನ (CSR Fund) ನೀಡುವ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಜತೆ ಮಾತುಕತೆ ನಡೆಸಲಾಗಿದೆ. ಕಾರ್ಪೋರೇಟ್ ಕಂಪನಿಗಳ‌ (Corporate Company) ಜತೆ ಮಾತುಕತೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ: Pen Drive: ಹೊರಬರಲೇ ಇಲ್ಲ ಪೆನ್‌ಡ್ರೈವ್‌ ಸತ್ಯ: ಮತ್ತೆ ಹಿಟ್‌ ಆ್ಯಂಡ್‌ ರನ್‌ ಸುಳಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ!

ಮಕ್ಕಳ ಬ್ಯಾಗ್‌ ಹೊರೆ ಬಗ್ಗೆ ಸಿಗದ ಸ್ಪಷ್ಟನೆ

ಶಾಲಾ‌ ಮಕ್ಕಳ ಬ್ಯಾಗ್ (Children Bag) ಹೊರೆಯನ್ನು ಕಡಿಮೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಠ್ಯ ಪುಸ್ತಕದಲ್ಲಿ (Text Book) ದೊಡ್ಡ ಬದಲಾವಣೆಯನ್ನು ನಾವು ಮಾಡಿಲ್ಲ. 40 ಬದಲಾವಣೆ ಪೈಕಿ ನಾಲ್ಕೈದು ಬದಲಾವಣೆ ಮಾಡಿದ್ದೇವೆ. ಮುಂದಿನ ವರ್ಷ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿದರು.

Exit mobile version