ಬೆಂಗಳೂರು: ಸರ್ಕಾರಿ ಸಾರಿಗೆಯಲ್ಲಿ ಚಾಲಕರು ಕುಡಿದು ವಾಹನ ಓಡಿಸುವ ಚಾಲಕರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ 347 ಬ್ರೆತ್ ಅನಲೈಸರ್ ಖರೀದಿಗೆ ನಿರ್ಧರಿಸಿದೆ. ಇದಕ್ಕಾಗಿ ೨.೯ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.
ಚಾಲಕರು ಕುಡಿದು ವಾಹನ ಚಲಾಯಿಸಿ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಭಾಗವಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕ್ರಿಯಾ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಸಾರಿಗೆ ಇಲಾಖೆಗೆ 347 ಬ್ರೆತ್ ಅನಲೈಸರ್ ಉಪಕರಣಗಳ ಖರೀದಿಗಾಗಿ ೨.೯ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2022ರ ಮೇ 16 ರಂದು ನಡೆದ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 16ನೇ ಸಭೆಯಲ್ಲಿ 2022-23ನೇ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕ್ರಿಯಾ ಯೋಜನೆಯನ್ನು ರೂಪಿಸಲು ಅನುಮೋದನೆಯನ್ನು ನೀಡಲಾಗಿದೆ.
ಇದನ್ನೂ ಓದಿ | ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ
೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಸಾರಿಗೆ ಕಲ್ಯಾಣ ಮತ್ತು ರಸ್ತೆ ಸುರಕ್ಷತೆ ಹಾಗೂ ಇತರ ಖರ್ಚುಗಳಿಗಾಗಿ 300 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಕ್ರಿಯಾಯೋಜನೆಯನ್ನು ಒಟ್ಟು ೨ ಕೋಟಿ ೯೫ ಲಕ್ಷದ ೫೯ ಸಾವಿರ ರೂಪಾಯಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಇದರಲ್ಲಿ ಯೋಜನೆಯ ಅನುಬಂಧ-1ರ ಕ್ರಮ ಸಂಖ್ಯೆ 16ರಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಸಾರಿಗೆ ಇಲಾಖೆಗೆ ಒಟ್ಟು 347 ಬ್ರೆತ್ ಅನಲೈಸರ್‌ಗಳನ್ನು 2.09 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಅನುಮೋದಿಸಲಾಗಿದೆ.
ವಿವಿಧ ಸಾರಿಗೆ ನಿಗಮಗಳ ಕೆಲ ಬಸ್ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸಾಧ್ಯತೆ ಇರುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ಪರೀಕ್ಷೆಗಾಗಿ ಬಸ್ ಘಟಕಗಳಲ್ಲಿ ಆಲ್ಕೋಹಾಲ್ ಬ್ರೆತ್ ಅನಲೈಸರ್‌ಗಳನ್ನು ಅಳವಡಿಸುವ ಸಂಬಂಧ ಅವುಗಳ ಖರೀದಿಗೆ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ | ರಾಜ್ಯದ ಕ್ರೀಡೆಯಾಗಿ ಬಾಸ್ಕೆಟ್‌ಬಾಲ್; ಎಲ್ಲ ಇಲಾಖೆಗೂ Sports Quota ವಿಸ್ತರಣೆ: ಸಿಎಂ ಬೊಮ್ಮಾಯಿ