ಹಾಸನ: ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಸಕಲೇಶಪುರ ತಾಲೂಕಿನಲ್ಲಿ ಆನೆಗಳ ಸಂಖ್ಯೆ ಮತ್ತು ಓಡಾಟ (Elephant menace) ಮಿತಿ ಮೀರಿದೆ. ಇಲ್ಲಿ ಈಗಾಗಲೇ ಹಲವು ಮಂದಿ ಆನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಆನೆಗಳನ್ನು ಹಿಡಿಯಲಾಗಿದೆ. ಆದರೂ ಉಪಟಳ ನಿಲ್ಲುತ್ತಿಲ್ಲ. ಈಗೀಗ ರೈತರು ತಾವೇ ಖೆಡ್ಡಾಗಳನ್ನು ತೋಡಿ ಆನೆಗಳನ್ನು ಬೀಳಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ರೀತಿ ತೋಡಿದ ಖೆಡ್ಡಾಕ್ಕೆ ಒಂದು ಪುಟ್ಟ ಮರಿಯಾನೆ ಬಿದ್ದು ಒದ್ದಾಡಿತ್ತು.
ಪರಿಸ್ಥಿತಿ ಇಷ್ಟೊಂದು ಭಯಾನಕವಾಗಿರುವಾಗಲೇ ಊರೂರಿನಲ್ಲಿ ಗಜ ಪಡೆಗಳ ಮೆರವಣಿಗೆಯೇ ನಡೆಯುತ್ತಿದೆ. ಊರೂರಿನಲ್ಲಿ ಎಷ್ಟೇಟ್ ನಿಂದ ಎಸ್ಟೇಟ್‌ಗೆ ಆನೆಗಳು ಪರೇಡ್ ಮಾಡುತ್ತಿವೆ.
ಪುಟ್ಟ ಪುಟ್ಟ ಮರಿಗಳ ಜೊತೆ ಕಾಡಾನೆಗಳು ರಸ್ತೆ ದಾಟೋ ವಿಡಿಯೋ ಒಂದು ವೈರಲ್ ಆಗಿದ್ದು ಒಂದೇ ಗುಂಪಿನಲ್ಲಿ 25 ಆನೆಗಳನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕಿರೆಹಳ್ಳೆ ಬಳಿ ಒಂದು ಕಡೆಯಿಂದ ಇನ್ನೊಂದು ಕಡೆಯ ಕಾಫಿ ತೋಟದತ್ತ ಓಡಿದ ಆನೆ ಹಿಂಡು ವಿಡಿಯೊದಲ್ಲಿ ದಾಖಲಾಗಿದೆ. ಗ್ರಾಮದ ಮಾಗಡಿ ಎಸ್ಟೇಟ್‌ನತ್ತ ಗಜಪಡೆ ತೆರಳಿದೆ.
ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ಆನೆಗಳು ನಮ್ಮ ತೋಟಗಳಲ್ಲಿ ಬೀಡುಬಿಟ್ಟರೆ ನಾವು ಕಾಫಿ ಬೀಜ ಸಂಗ್ರಹಿಸುವುದು ಹೇಗೆ, ನಮ್ಮ ಮನೆಗಳಲ್ಲೇ ಆದರೂ ಬದುಕುವುದು ಹೇಗೆ? ಆನೆಗಳು ನಾಡಿಗೆ ಬಂದಿವೆ ಸರಿ, ನಾವು ಎಲ್ಲಿಗೆ ಹೋಗೋಣ ಎಂದು ಅವರೆಲ್ಲ ಪ್ರಶ್ನಿಸಿದ್ದಾರೆ!
ಇದನ್ನೂ ಓದಿ | Elephant attack | ರೈತನ ಮೇಲೆ ದಾಳಿ ಮಾಡಿದ್ದ ಪುಂಡಾನೆ ಸೆರೆ; ನಿಟ್ಟುಸಿರು ಬಿಟ್ಟ ಗಡಿ ಜಿಲ್ಲೆ ಜನ