Site icon Vistara News

PayCM ಪೋಸ್ಟರ್ ಅಭಿಯಾನ ವಿರುದ್ಧ ಸ್ವಾಮೀಜಿಗಳು ಗರಂ, ಸಿಎಂಗೆ ಅಗೌರವ ತೋರಿಸಬೇಡಿ ಎಂದ 25 ಶ್ರೀಗಳು

PayCM

ತುಮಕೂರು: ರಾಜ್ಯದಲ್ಲಿ ಜೋರಾಗಿ ಮಾಡುತ್ತಿರುವ ಪೇಸಿಎಂ ಪೋಸ್ಟರ್ ಅಭಿಯಾನ ವಿರೋಧಿಸಿ 25ಕ್ಕೂ ಹೆಚ್ಚು ಮಠಾಧೀಶರು ತುಮಕೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ತಿಪಟೂರಿನ ಷಡಕ್ಷರ ಮಠದ ರುದ್ರಮುನಿ ಸ್ವಾಮಿಜಿ ಮಾತನಾಡಿ, ಇಲ್ಲಿ ಎಲ್ಲಾ ಸಮಾಜದ ಮಠಾಧಿಪತಿಗಳು ಸೇರಿದ್ದೀವಿ, ಕೇವಲ ವೀರಶೈವ ಮಠಾಧಿಪತಿಗಳು ಮಾತ್ರ ಇಲ್ಲಿ ಇಲ್ಲ. ನಾವು ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವಾಗಿ ಸುದ್ದಿಗೋಷ್ಠಿ ಮಾಡುತ್ತಿಲ್ಲ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ, ಒಂದಲ್ಲಾ ಒಂದು ತಪ್ಪು ಮಾಡುತ್ತೇವೆ. ಇತ್ತೀಚಿನ ಬೆಳವಣಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆ ನೋವುಂಟು‌ ಮಾಡುವ ಪರಿಸ್ಥಿತಿಗೆ ಬಂದಿದೆ. ಸದ್ಯ ಭ್ರಷ್ಟಾಚಾರ ಅನ್ನೋದು ಇಡೀ ಜಗತ್ತಿನಲ್ಲಿ ಇದೆ. ಈ ಭ್ರಷ್ಟಾಚಾರವನ್ನು ಯಾವ ರೀತಿ ತೊಡೆದು ಹಾಕಬೇಕು ಅನ್ನೋದು ಪ್ರಶ್ನೆಯಾಗಿ ಉಳಿದಿದೆ ಎಂದರು.

ʻʻಪೋಸ್ಟರ್ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಇದು ಕರ್ನಾಟಕದ ಪರಂಪರೆ ಸಂಸ್ಕೃತಿ ಹಾಳು ಮಾಡುತ್ತಿದೆ. ಇದರಿಂದ ನಮ್ಮ ಕರ್ನಾಟಕದ ಮಾನ ಹರಾಜು ಆಗುತ್ತಿದೆ. ರಾಜಕೀಯ ಅರಾಜಕತೆ ಉಂಟುಮಾಡುವ ಕೆಲಸ ನಡೆಯುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ರೈತರ ಕುಟುಂಬ ಅನ್ನ ಇಲ್ಲದೇ ಬೀದಿಯಲ್ಲಿ ಸಾಯುತ್ತಿರುವಾಗ ಯಾರೂ ಅದನ್ನೂ ನೋಡುತ್ತಿಲ್ಲ, ಇಲ್ಲಿ ಜನರ ನಾಡಿಮಿಡಿತ ಅರಿತು ಕೆಲಸ ಮಾಡಬೇಕು. ಇದನ್ನು ಬಿಟ್ಟು ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡಿಕೊಳ್ಳಬಾರದುʼʼ ಎಂದು ಕಿವಿ ಮಾತು ಹೇಳಿದರು.

ಸಿಎಂ‌ ಬೊಮ್ಮಾಯಿ ವ್ಯಕ್ತಿತ್ವಕ್ಕೆ ಮಸಿ ಬಳೀಬೇಡಿ ಅಂದ್ರು
ʻಮುಖ್ಯಮಂತ್ರಿಗೆ ಹಾಗೂ ಆ ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವ ಇದೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ, ಹಾಳು ಮಾಡುವ ಕೆಲಸ ಮಾಡಬಾರದು. ಅದನ್ನು ನಿಲ್ಲಿಸಬೇಕು, ಇರುವ ಎರಡು ಮೂರು ಪಕ್ಷ, ಅದರಲ್ಲಿ ಈ ರೀತಿಯಾಗಿ ಮಾಡಲಾಗ್ತಿದೆ. ಮುಂದೆ ಬಹಳಷ್ಟು ಜನ ಸಿಎಂ ಆಗಬೇಕು ಎನ್ನುವ ಹಂಬಲ ಇಟ್ಟುಕೊಂಡಿದ್ದಾರೆ. ಅಂಥವರು ಈ ರೀತಿ ಕೆಸರೆರೆಚಾಟ ಮಾಡಿಕೊಳ್ಳಬಾರದುʼ ಎಂದು ಹೇಳಿದರು ಶ್ರೀಗಳು.

ʻʻಸಿಎಂ ಬೊಮ್ಮಾಯಿ‌ ಉತ್ತಮ ಆಡಳಿತ ಕೊಡುತ್ತಿದ್ದಾರೆ. ನಾನು ಬಹಳ ವರ್ಷದಿಂದ ನೋಡಿದ್ದೇನೆ. ಯಾರ ಬಳಿಯೂ ಕೈ ಒಡ್ಡದೇ ಆಸೆ ಆಕಾಂಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಕಮಿಷನ್ ವಿಚಾರದಲ್ಲಿ ಆರೋಪ ಇದ್ದರೆ, ಲೋಕಾಯುಕ್ತರಿಗೆ ದೂರು ನೀಡಲಿ, ಸಿಸಿಬಿಗೆ ಕೊಡಲಿ. ಅದನ್ನು ಬಿಟ್ಟು ವಿನಾಕಾರಣ ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡಬಾರದು, ಕತ್ತಲಲ್ಲಿ ಗುಂಡು ಹೊಡೆಯಬಾರದು. ಯಾವುದೇ ಸಮಾಜದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ತೊಂದರೆ ಕೊಟ್ಟರೆ ಆ ಸಮಾಜದ ಜನರಿಗೆ ನೋವು ಉಂಟಾಗುತ್ತದೆ. ಪೋಸ್ಟರ್ ಅಂಟಿಸುವುದರಿಂದ ಯಾವುದೇ ಸಾಧನೆ ಆಗೋದಿಲ್ಲ ಎಂದು ತುಮಕೂರಿನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ತಿಪಟೂರಿನ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಹೇಳಿದರು.

Exit mobile version