ಚಿಕ್ಕಮಗಳೂರು/ಧಾರವಾಡ: ಚಿಕ್ಕಮಗಳೂರು ಮತ್ತು ಧಾರವಾಡದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ನಡೆದ ತಪಾಸಣೆ ವೇಳೆ ಬರೋಬ್ಬರಿ 47 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಚಿನ್ನದ ಮೌಲ್ಯ 28 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಣ, ವಸ್ತು ಮತ್ತು ಚಿನ್ನ ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಹೀಗಾಗಿ ಚೆಕ್ ಪೋಸ್ಟ್‌ಗಳಲ್ಲಿ ಭಾರಿ ಪ್ರಮಾಣದ ಹಣ ಮತ್ತು ಚಿನ್ನ ಪತ್ತೆಯಾಗುತ್ತಿದೆ.
ತರೀಕೆರೆ ಚೆಕ್‌ಪೋಸ್ಟ್‌ನಲ್ಲಿ 40 ಕೆ.ಜಿ ಗೋಲ್ಡ್ ಸೀಜ್
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 40 ಕೆ.ಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 23 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಚಿನ್ನಾಭರಣಗಳನ್ನು ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿತ್ತು.
ಚೆಕ್‌ಪೋಸ್ಟ್‌ನಲ್ಲಿ ಕಂಟೇನರ್ ತಡೆದು ತಪಾಸಣೆ ನಡೆಸಿದಾಗ ಈ ಪ್ರಮಾಣದ ಚಿನ್ನ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳು ಇರಲಿಲ್ಲ ಎನ್ನಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಚಿನ್ನಾಭರಣ ಇದೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಇದೇ ಚೆಕ್ ಪೋಸ್ಟ್ ನಲ್ಲಿ ಪದೇಪದೆ ಕೋಟ್ಯಾಂತರ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದು ಚುನಾವಣೆಗೆ ಹಂಚಲು ಕೊಂಡೊಯ್ಯುತ್ತಿದ್ದ ಚಿನ್ನವಲ್ಲ, ಬದಲಾಗಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವ ಚಿನ್ನಾಭರಣ ವ್ಯಾಪಾರಿಗಳು ಈ ಸಾಗಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ತೆರಿಗೆ ಇಲಾಖೆ ಅಧಿಕಾರಿಗಳಿಂದಲೂ ಪರಿಶೀಲನೆ ನಡೆಯುತ್ತಿದೆ.
ಧಾರವಾಡದಲ್ಲೂ ದಾಖಲೆ ಇಲ್ಲದ ಏಳು ಕೆಜಿ ಚಿನ್ನ ವಶಕ್ಕೆ
ಈ ನಡುವೆ ಧಾರವಾಡದಲ್ಲಿ ದಾಖಲೆ ಇಲ್ಲದ 7 ಕೆಜಿ 700ಗ್ರಾ ಚಿನ್ನ ಜಪ್ತಿ ಮಾಡಲಾಗಿದೆ. ಧಾರಾವಾಡ ತಾಲೂಕಿನ ತೇಗೂರು ಚೆಕ್ ಪೋಸ್ಟ್ ನಲ್ಲಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆ ಪತ್ತೆಯಾಗಿದೆ.
ಸೂಕ್ತ ದಾಖಲೆ ಇಲ್ಲದೇ ಯಾವುದೇ ಅನುಮತಿ ಇಲ್ಲದ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಚಿನ್ನ ಮತ್ತು ಅದನ್ನು ಸಾಗಿಸುತ್ತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಚಿನ್ನವನ್ನು ಬೆಳಗಾವಿಯಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು.
ಬಿವಿಸಿ ಎಂಬ ಲಾಜಿಸ್ಟಿಕ್ ವಾಹನದಲ್ಲಿ ಚಿನ್ನ ಕೊಂಡೊಯ್ಯಲಾಗುತ್ತಿದ್ದು, ಮಲಬಾರ್, ಜೋಯಾಲುಕಾಸ್, ಕಲ್ಯಾಣ ಜ್ಯುವೆಲರ್ಸ್‌ಗೆ ನೀಡಲು ಒಯ್ಯಲಾಗುತ್ತಿತ್ತು ಎನ್ನಲಾಗಿದೆ. ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆದಾಯ ಮತ್ತು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Akshaya Tritiya 2023 : ಹಾಲ್ ಮಾರ್ಕ್ ಇರುವ ಚಿನ್ನದ ನಾಣ್ಯ ಖರೀದಿ ಕಡ್ಡಾಯವೇ?