Site icon Vistara News

2A Reservation: ಲಿಂಗಾಯತರಿಗೆ ಮೀಸಲಾತಿ; ಸಿಎಂ ಭರವಸೆ ಮಧ್ಯೆ ನಾಳೆ ನಡೆಯಲಿದೆಯೇ ಉಗ್ರ ಹೋರಾಟ?

CM Siddaramaiah and Basava Jayamruthyunjaya Swamiji

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯದವರು (Lingayat Panchamasali Community) ರಾಜ್ಯದಲ್ಲಿ ಸುಮಾರು 1.30 ಕೋಟಿಯಷ್ಟು ಜನರಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಅನುಕೂಲವಾಗುವಂತೆ 2ಎ ಅಥವಾ 2ಡಿ ಪೈಕಿ ಯಾವುದಾದರೂ ಒಂದು ಪ್ರವರ್ಗದ ಅಡಿಯಲ್ಲಿ ಮೀಸಲಾತಿ (2A Reservation) ನೀಡಬೇಕು ಎಂಬ ಹಕ್ಕೊತ್ತಾಯವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಮಂಡಿಸಲಾಗಿದೆ. ಸಿಎಂ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮಂಗಳವಾರ (ಡಿ. 12) ಪಂಚಮಸಾಲಿ ಸಭೆ ನಡೆದಿದ್ದು, ಮೀಸಲಾತಿ ಸಂಬಂಧ ಸ್ಪಷ್ಟ ನಿರ್ಣಯವನ್ನು ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಶೀಘ್ರವಾಗಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಯಾವುದೇ ಸ್ಪಷ್ಟತೆಯನ್ನು ನೀಡದೇ ಇರುವ ಹಿನ್ನೆಲೆಯಲ್ಲಿ ಉಗ್ರ ಹೋರಾಟದ ಬಗ್ಗೆ ಬುಧವಾರ ನಿರ್ಧಾರವನ್ನು ಪ್ರಕಟ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jayamruthyunjaya Swamiji) ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿ ತೆರಳಿದ ಬಳಿಕ ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕರ ಸಭೆ ನಡೆದಿದೆ. ಅಲ್ಲಿ ನಾಳಿನ (ಬುಧವಾರ) ಹೋರಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿಎಂ ಈಗ ಶೀಘ್ರ ಈಡೇರಿಸುವ ಭರವಸೆಯನ್ನು ನೀಡಿದ್ದಾರಷ್ಟೇ. ಯಾವಾಗ, ಏನು ಎಂಬ ಬಗ್ಗೆ ಸ್ಪಷ್ಟತೆಯನ್ನು ಕೊಟ್ಟಿಲ್ಲ. ಹೀಗಾಗಿ ಬುಧವಾರ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಏನು ಮಾಡಬೇಕು? ಕೈಬಿಡಬೇಕೋ? ಸಿಎಂ ಸಿದ್ದರಾಮಯ್ಯ ಅವರ ಮುಂದಿನ ತೀರ್ಮಾನದವರೆಗೆ ಕಾಯಬೇಕೋ? ಇಲ್ಲವೇ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಉಗ್ರ ಹೋರಾಟವನ್ನು ಮಾಡಿ ಸಮುದಾಯದ ಶಕ್ತಿ ಪ್ರದರ್ಶನವನ್ನು ಮಾಡಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.

ಹೋರಾಟಕ್ಕಾಗಿ ನಾಯಕರ ಕಿತ್ತಾಟ

ಈ ಸಂಬಂಧ ಸ್ವಾಮೀಜಿ ಎದುರೇ ನಾಯಕರು ಕಿತ್ತಾಡಿಕೊಂಡಿದ್ದಾರೆ. ಧರಣಿ ಮಾಡಬೇಕಾ ಅಥವಾ ಸಿಎಂ ನೀಡುವ ಗಡುವಿನವರೆಗೂ ಕಾಯಬೇಕಾ? ಎಂಬ ಪ್ರಶ್ನೆಗೆ ಮೊದಲು ಒಬ್ಬೊಬ್ಬರದ್ದು ಒಂದೊಂದು ವಾದವಾಗಿತ್ತು. ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಿಜಯಾನಂದ ಕಾಶಪ್ಪನವರ್ ಮತ್ತು ಇತರೆ ಪದಾಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ರಾಜಕಾರಣ ಮಾಡೋದು ಬೇಡ ಎಂದು ಈ ವೇಳೆ ಕಾಶಪ್ಪನವರ್ ಗುಡುಗಿದರು. ಅಂತಿಮವಾಗಿ ಕಾಶಪ್ಪನವರ್ ಮತ್ತು ವಿನಯ್ ಕುಲಕರ್ಣಿ ತೀರ್ಮಾನಕ್ಕೆ ಬದ್ಧ ಎಂದ ಸದಸ್ಯರು ತಮ್ಮ ತೀರ್ಮಾನವನ್ನು ಪ್ರಕಟಿಸಿದರು.

ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕು

ಸಭೆ ಬಳಿಕ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಒಕ್ಕಲಿಗರಿಗೆ ಶೇ. 6, ಲಿಂಗಾಯತರಿಗೆ ಶೇ. 7ರಷ್ಟು ಮೀಸಲಾತಿ ಘೋಷಿಸಿತ್ತು. ಹೀಗಾಗಿ ಹಿಂದಿನ ಸರ್ಕಾರದ ಆದೇಶ ಪಾಲಿಸಿ ಅಂತ ಸಿಎಂಗೆ ಮನವಿ ಮಾಡಿದ್ದೇವೆ. ಇದರ ಬಗ್ಗೆ ವಿಚಾರ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸಚಿವ ಸಂಪುಟದ ನಿರ್ಧಾರವು ಇದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ನಾವು ಹೇಳಿದ್ದೇವೆ. ಆದರೆ, ಸಭೆಯಲ್ಲಿ ಈ ಬಗ್ಗೆ ಯಾವ ವಿಚಾರವೂ ಇತ್ಯರ್ಥ ಆಗಿಲ್ಲ. ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಹೋರಾಟ ನಡೆಯಲಿದೆ. ಕಾಂತರಾಜು ವರದಿಯಲ್ಲಿ ಸ್ಯಾಂಪಲ್ ಸಂಗ್ರಹಿಸಿ ಮಾಡಲಾಗಿದೆ. ಬಡ ಲಿಂಗಾಯತ ಜನ ಮೀಸಲಾತಿ ಸಿಗುತ್ತದೆ ಎಂದು ಗಾಣಿಗ, ಕುಂಬಾರ ಅಂತ ಬರೆಸಿಕೊಂಡರು. ಲಿಂಗಾಯತ ಗಾಣಿಗ ಅಂತ ಹಾಕಿಸಿಕೊಂಡಿಲ್ಲ. ಜಾತಿಗಣತಿಗೂ‌ ಮೊದಲು 2C & 2D ಮೀಸಲಾತಿ ಜಾರಿ ಮಾಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇಂದು ಅಖಿಲ ಭಾರತ ಪಂಚಮಸಾಲಿ ವತಿಯಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2a ಮೀಸಲಾತಿ ಕೊಡಬೇಕು ಅಂತ ಮನವಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಮನವಿ ಸ್ವೀಕಾರ ಮಾಡಿದ್ದಾರೆ. ಶೀಘ್ರ ತೀರ್ಮಾನ ಪ್ರಕಟಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಬುಧವಾರ ಚನ್ನಮ್ಮ ಸರ್ಕಲ್‌ನಲ್ಲಿ ಮಾಲಾರ್ಪಣೆ ಮಾಡಿ, ಮುಂದಿನ ನಮ್ಮ ನಿಲುವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಆ ಕಾಂಗ್ರೆಸ್‌ ನಾಯಕ ಟೀಮ್ ಕಟ್ಟಿಕೊಂಡು ನಿಮ್ಮ ಜತೆ ಬರ್ತಾನೆ: ಅಶೋಕ್‌, ವಿಜಯೇಂದ್ರಗೆ ಎಚ್‌ಡಿಕೆ ಪಿಸು ಮಾತು

ಹೋರಾಟದ ಬಗ್ಗೆ ನಾಳೆ ಅಂತಿಮ ನಿಲುವು: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬಳಿಕ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಾವೆಲ್ಲ ಸೇರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರ ನಿಲುವನ್ನು ನೋಡಿಕೊಂಡು, ನಾಳೆ ಚೆನ್ನಮ್ಮ ವೃತ್ತದಲ್ಲಿ ಹೋರಾಟವನ್ನು ನಿರ್ಧಾರ ಮಾಡುತ್ತೇವೆ. ನಮ್ಮ ನಿಲುವನ್ನು ಬೃಹತ್ ಪಂಚಮಸಾಲಿ ಸಭೆಯಲ್ಲಿ ತಿಳಿಸಲಿದ್ದೇವೆ. ಸಿಎಂ ಏನು ಚರ್ಚೆ ಮಾಡಿದ್ದಾರೆ? ಅದಕ್ಕೆ ಮತ್ತೊಂದು ಮೀಟಿಂಗ್ ಇದೆ? ನಮಗೆ ಈ ಸಭೆಯಿಂದ ತೆಗೆದುಕೊಂಡ ತೀರ್ಮಾನದ ಬಗ್ಗೆ ನಾಳೆ ಅಂತಿಮ ನಿಲುವನ್ನು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

Exit mobile version