Site icon Vistara News

2nd PUC Result: ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ; ವೆಬ್‌ಸೈಟ್‌ನಲ್ಲಿ ಎಷ್ಟು ಗಂಟೆಗೆ ಲಭ್ಯ?

2nd PUC Result to be declared tomorrow Check out the website at 11 oclock

ಬೆಂಗಳೂರು: ಬುಧವಾರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1 ಫಲಿತಾಂಶವನ್ನು (2nd PUC Result) ಪ್ರಕಟ ಮಾಡಲಾಗುತ್ತಿದೆ. ಅಧಿಕೃತ ವೆಬ್ ಸೈಟ್ https://karresults.nic.in ಬೆಳಗ್ಗೆ 11:00 ಗಂಟೆಯ ನಂತರ ಫಲಿತಾಂಶ ಲಭ್ಯವಾಗಲಿದೆ.

ಬೆಳಗ್ಗೆ 10:00 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ.

ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿಗೆ 6,98,627 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದಾರೆ. ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. 2023-24ನೇ ಸಾಲಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕ್ರಮದಲ್ಲಿ 80+20 ಮಾದರಿಯಂತೆ (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಂಕಗಳನ್ನು ನೀಡಲಾಗಿರುತ್ತದೆ.

ಮಾ.25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗಿತ್ತು. ಈಗ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಅಂಕಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ.

ನಿಮ್ಮ ಫಲಿತಾಂಶವನ್ನು ನೋಡುವುದು ಹೇಗೆ?

ದ್ವಿತೀಯ PUC ಫಲಿತಾಂಶಗಳು karresults.nic.in ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು:

ಭೌತಶಾಸ್ತ್ರ ಪರೀಕ್ಷೆಗೆ ಗ್ರೇಸ್‌ ಮಾರ್ಕ್ಸ್‌ ಇದೆಯಾ?: ಮಂಡಳಿ ಹೇಳಿದ್ದೇನು?

ಮಾರ್ಚ್‌ 7ರಂದು ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಪರೀಕ್ಷೆ ನಡೆದಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆ (Model Question Paper) ಇರುತ್ತದೆ. ಅದೇ ಮಾದರಿಯಲ್ಲಿ ಪ್ರಶ್ನೆಗಳು ಬರುತ್ತವೆ. ಆದರೆ, ಭೌತ ಶಾಸ್ತ್ರ ಪತ್ರಿಕೆಯ ಬಹು ಆಯ್ಕೆ ಪ್ರಶ್ನೆಗಳ ವಿಭಾಗದಲ್ಲಿ ಸುಮಾರು 15 ಪ್ರಶ್ನೆಗಳು ನಿಗದಿತ ನಮೂನೆಯಲ್ಲಿ ಇರಲಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದರು.

ಮಾತ್ರವಲ್ಲ, change.org ಎಂಬ ವೆಬ್‌ ಸೈಟ್‌ ಮೂಲಕ ದೂರು ದಾಖಲಿಸಿ ಇದಕ್ಕೆ ಗ್ರೇಸ್‌ ಮಾರ್ಕ್ಸ್‌ ಕೊಡಬೇಕು ಎಂದು ಆಗ್ರಹಿಸಿದ್ದರು. ಇಲ್ಲಿ ಬಂದಿರುವ ಪ್ರಶ್ನೆಗಳು ಪಠ್ಯದ ಕೊನೆಯ ಭಾಗದಲ್ಲಿರುವ HOTS (Higher Order Thinking Skills) ವಿಭಾಗಕ್ಕೆ ಸೇರಿದವು ಆಗಿದ್ದು, ಇದನ್ನು ಯಾವುದೇ ಶಿಕ್ಷಕರು ಬೋಧನೆ ಮಾಡುವುದಿಲ್ಲ ಮತ್ತು ವಿದ್ಯಾರ್ಥಿಗಳು ಅದನ್ನು ಕಲಿಯಬೇಕು ಎಂದು ಸಲಹೆ ಕೂಡಾ ನೀಡುವುದಿಲ್ಲ. ಹೀಗಾಗಿ ಇದು ಔಟ್‌ ಆಫ್‌ ಸಿಲೆಬಸ್‌ ಎಂದೇ ಪರಿಗಣಿತವಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಭಿಮತವಾಗಿತ್ತು.

ವಿಶೇಷವೆಂದರೆ, ಕಾಲೇಜುಗಳಲ್ಲಿ ಈ ವಿಭಾಗದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲವಾದರೂ JEE/NEET ಪರೀಕ್ಷೆಗೆ ಕೋಚಿಂಗ್‌ ಪಡೆದ ವಿದ್ಯಾರ್ಥಿಗಳು ಈ HOT ವಿಭಾಗದ ಪ್ರಶ್ನೆಗಳನ್ನೂ ಕಲಿತಿರುತ್ತಾರೆ. ಅಂದರೆ ಪ್ರಶ್ನೆ ಪತ್ರಿಕೆಯ ಈ ಪ್ರಶ್ನೆಗಳು ಸಾಮಾನ್ಯ ವಿದ್ಯಾರ್ಥಿಗಳು ಅಪರಿಚಿತವಾಗಿವೆ. ಕೋಚಿಂಗ್‌ಗೆ ಹೋಗುವವರಿಗೆ‌ ಸುಲಭವಾಗಿರುತ್ತದೆ. ಇದರಿಂದ ಬ್ರೂಪ್ರಿಂಟ್‌ ಪ್ರಶ್ನೆಪತ್ರಿಕೆಯಿಂದ ಹೊರತಾಗಿ ಕೇಳಿರುವ ಪ್ರಶ್ನೆಗಳಿಗೆ ಗ್ರೇಸ್‌ ಮಾರ್ಕ್ಸ್‌ ಕೊಡಬೇಕು ಎನ್ನುವುದು ವಿದ್ಯಾರ್ಥಿಗಳ ವಾದವಾಗಿತ್ತು.

ಇದರ ನಡುವೆಯೇ ಇನ್ನೊಂದು ವಾದ ಹುಟ್ಟಿಕೊಂಡಿತ್ತು. ಇದು ಪಠ್ಯ ಪುಸ್ತಕದಲ್ಲೇ ಇರುವ ವಿಷಯವನ್ನು ಆಧರಿಸಿದ್ದು. ವಿದ್ಯಾರ್ಥಿಗಳು ಕೇವಲ ಪ್ರಶ್ನೆ ಉತ್ತರಗಳನ್ನು ಮಾತ್ರವಲ್ಲ, ಉಳಿದ ಭಾಗಗಳ ಮೇಲೂ ಗಮನ ಇಡಬೇಕು. ಹಾಗೆ ಮಾಡಿದ್ದರೆ ಈ ಪ್ರಶ್ನೆಗಳಿಗೆ ಉತ್ತರ ಬರೆಯಬಹುದಿತ್ತು ಎಂಬ ವಾದವನ್ನು ಮಂಡಿಸಲಾಗಿತ್ತು.

ಗ್ರೇಸ್‌ ಮಾರ್ಕ್ಸ್‌ ಕೊಡಲಾಗುತ್ತದೆ ಎಂಬ ಪ್ರಕಟಣೆಯ ಸುತ್ತೋಲೆ!

ಈ ನಡುವೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಭೌತ ಶಾಸ್ತ್ರ ಪರೀಕ್ಷೆಯಲ್ಲಿ ಪಠ್ಯೇತರ ವಿಭಾಗದಿಂದ ಬಂದಿರುವ ಪ್ರಶ್ನೆಗಳಿಗೆ ಪ್ರತಿಯಾಗಿ ಗ್ರೇಸ್‌ ಮಾರ್ಕ್‌ ನೀಡಲು ಸಮ್ಮತಿಸಿದೆ ಎಂಬ ಸುತ್ತೋಲೆಯೊಂದು ಹರಿದಾಡಲು ಆರಂಭವಾಯಿತು. ಯಾರು ಯಾರು ಈ ಪ್ರಶ್ನೆಗಳಿಗೆ ಉತ್ತರ ಬರೆಯಲು ಪ್ರಯತ್ನ ಮಾಡಿದ್ದಾರೋ ಅವರಿಗೆ ಮಾರ್ಕ್ಸ್‌ ದೊರೆಯಲಿದೆ. ಯಾರು ಅದನ್ನು ಪ್ರಯತ್ನಪಟ್ಟಿಲ್ಲವೋ ಅವರಿಗೆ ಅಂಕಗಳನ್ನು ಕೊಡಲಾಗುವುದಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ, ಈ ಸುತ್ತೋಲೆಯ ಸತ್ಯಾಸತ್ಯತೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಇದೀಗ ಮಂಡಳಿಯು ಅದಕ್ಕೆ ಸ್ಪಷ್ಟೀಕರಣವನ್ನು ಮಂಡಳಿ ನೀಡಿದೆ.

ಇದನ್ನೂ ಓದಿ: COMEDK UGET-2024: ಕಾಮೆಡ್ ಕೆ ಪರೀಕ್ಷೆಗೆ ನೋಂದಣಿ ಅವಧಿ ವಿಸ್ತರಣೆ, ರಿಜಿಸ್ಟ್ರೇಷನ್‌ ಮಾಡುವುದು ಹೇಗೆ?

ಗ್ರೇಸ್‌ ಅಂಕ ನೀಡಲು ತೀರ್ಮಾನಿಸಿಲ್ಲ ಎಂದ ಮಂಡಳಿ

ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (Karnataka School Examination and Assessment Board -KSEAB) ಗ್ರೇಸ್‌ ಮಾರ್ಕ್ಸ್‌ ನೀಡಿಕೆಗೆ ಸಂಬಂಧಿಸಿ ಸ್ಪಷ್ಟೀಕರಣವನ್ನು ನೀಡಿತ್ತು. ಮಾರ್ಚ್‌ 7ರಂದು ನಡೆದ ಭೌತಶಾಸ್ತ್ರ ಪರೀಕ್ಷೆಯಲ್ಲಿ ಗ್ರೇಸ್‌ ಮಾರ್ಕ್ಸ್‌ ನೀಡಲಾಗುತ್ತದೆ ಎಂಬ ಸುತ್ತೋಲೆಯನ್ನು ನಾವು ಹೊರಡಿಸಿಲ್ಲ. ಇದೊಂದು ನಕಲಿ ಸುತ್ತೋಲೆ ಎಂದು ಪಿಯುಸಿ ಪರೀಕ್ಷೆಗಳ ಉಸ್ತುವಾರಿ ನಿರ್ದೇಶಕರಾಗಿರುವ ಗೋಪಾಲಕೃಷ್ಣ ಎಚ್‌.ಎನ್‌. ತಿಳಿಸಿದ್ದರು.

ಮಾರ್ಚ್‌ 1೦ರಂದು ಹೊರಬಿದ್ದ ಸುತ್ತೋಲೆ ನಕಲಿ. ಅದನ್ನು ಮಂಡಳಿಯಿಂದ ಬಿಡುಗಡೆ ಮಾಡಲಾಗಿಲ್ಲ. ನಾವು ಗ್ರೇಸ್‌ ಮಾರ್ಕ್ಸ್‌ ನೀಡುವುದಕ್ಕೆ ಸಂಬಂಧಿಸಿ ಇನ್ನೂ ಯಾವುದೇ ತೀರ್ಮಾನ ಮಾಡಲಾಗಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿರುವ ಎಲ್ಲ ಪ್ರಶ್ನೆಗಳು NCERT ಪಠ್ಯ ಪುಸ್ತಕದೊಳಗೆ ಇರುವಂಥವು ಎಂದು ಗೋಪಾಲಕೃಷ್ಣ ಎಚ್‌.ಎನ್‌. ಸ್ಪಷ್ಟಪಡಿಸಿದ್ದರು.

Exit mobile version