Site icon Vistara News

Child fell from Balcony : ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಗಾಯಗೊಂಡಿದ್ದ 3 ವರ್ಷದ ಮಗು ಸಾವು

rahul death

#image_title

ಬೆಂಗಳೂರು: ಕೆಂಗೇರಿ ಬಳಿಯ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಗಾಯಗೊಂಡಿದ್ದ ಮೂರು ವರ್ಷದ ಮಗು ರಾಹುಲ್‌ (Child fell from Balcony) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

ಶಿವಪ್ಪ ಮತ್ತು ಅಂಬಿಕಾ ದಂಪತಿಯ ಮಗುವಾದ ರಾಹುಲ್‌ ಮಾರ್ಚ್‌ 10ರಂದು ಮಧ್ಯಾಹ್ನದ ಹೊತ್ತು ಕೆಂಗೇರಿ ಬಳಿಯ ಜ್ಞಾನಭಾರತಿ ಎನ್​ಕ್ಲೇವ್​​​ನ ಕಾವೇರಿ ಬ್ಲಾಕ್​ನಲ್ಲಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ. ಬಿದ್ದ ಹೊಡೆತಕ್ಕೆ ಮಗುವಿಗೆ ಪ್ರಜ್ಞೆ ತಪ್ಪಿತ್ತು. ಕಿವಿಯ ಭಾಗಕ್ಕೆ ಹೆಚ್ಚು ಗಾಯವಾಗಿತ್ತು. ತಲೆಗೆ ಹೆಚ್ಚು ಹೊಡೆತ ಬಿದ್ದಿರಲಿಲ್ಲ. ಹೀಗಾಗಿ ಅಪಾಯವೇನೂ ಆಗಲಿಕ್ಕಿಲ್ಲ ಎನ್ನುವ ನಂಬಿಕೆ ಇತ್ತು.

ಬಾಲ್ಕನಿಯಿಂದ ಮಗು ಬಿದ್ದಿರುವುದು.

ಆದರೆ, ಕೆಂಗೇರಿ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಹುಲ್​ ಸೋಮವಾರ ಸಂಜೆ 4.30ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ. ಬಾಲಕ ರಾಹುಲ್​ ಮೃತಪಟ್ಟ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಂದು ಏನಾಗಿತ್ತು?

ಅವತ್ತಿನ ಭಯಾನಕ ಘಟನೆ ನಡೆದಿದ್ದು ಹೀಗೆ

ಶುಕ್ರವಾರ ಬೆಳಗ್ಗೆ ಸುಮಾರು 11:07 ಹೊತ್ತು ಶಿವಪ್ಪ ಮತ್ತು ಅಂಬಿಕಾ ದಂಪತಿ ಎರಡನೆ ಮಹಡಿಯ ಮನೆಯಲ್ಲಿದ್ದರು. ಮಗು ಹೊರಗಡೆ ಬಾಲ್ಕನಿಯಲ್ಲಿ ಆಟವಾಡುತ್ತಿದ್ದರೆ ಅಂಬಿಕಾ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಶಿವಪ್ಪ ಅವರು ಶೌಚಾಲಯಕ್ಕೆ ಹೋಗಿದ್ದರು. ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ರಾಹುಲ್‌ ಒಂದು ಕುರ್ಚಿ ಹಾಕಿಕೊಂಡು ಅದರ ಮೇಲೆ ಬೆಡ್‌ ಶೀಟ್‌ ಹಾಕಿದ್ದಾನೆ. ಆ ಬೆಡ್‌ ಶೀಟ್‌ ಮೇಲೆ ಹತ್ತಿದಾಗ ಕಾಲು ಜಾರಿ ಆಯತಪ್ಪಿ ಬಾಲ್ಕನಿಯ ಆಚೆಗೆ ಬಿದ್ದುಬಿಟ್ಟಿದ್ದ.

ಬಿದ್ದ ಸದ್ದು ಮತ್ತು ಮಗುವಿನ ಅಳು ಕೇಳಿ ಕೂಡಲೇ ಅಪಾರ್ಟ್‌ಮೆಂಟ್‌ನವರೆಲ್ಲ ಓಡಿ ಬಂದಿದ್ದರು. ಕೂಡಲೇ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ, ಕೊನೆಗೂ ರಾಹುಲ್‌ ಬದುಕುಳಿಯಲಿಲ್ಲ.

ಇದನ್ನೂ ಓದಿ : Child fell from Balcony : ಬಾಲ್ಕನಿಯಿಂದ ಕೆಳಗೆ ಬಿದ್ದ ಮಗುವಿನ ಆರೋಗ್ಯ ಹೇಗಿದೆ? ಹೆತ್ತವರು ಹೇಳೋದೇನು?

Exit mobile version