ಬೆಂಗಳೂರು: ರಾಜ್ಯದಲ್ಲಿ ಆಂಬ್ಯುಲೆನ್ಸ್ (Ambulance Service) ಹಾಗೂ ಸರ್ಕಾರದ ನಡುವೆ ತಿಕ್ಕಾಟ ಆಗಾಗ ಆಗುತ್ತಲೇ ಇರುತ್ತವೆ. ನೂರೆಂಟು ಸಮಸ್ಯೆಗಳನ್ನು ಹೊತ್ತುಕೊಂಡಿರುವ ರಾಜ್ಯ ಸರ್ಕಾರಕ್ಕೆ ಈಗ “108 ಆಂಬ್ಯುಲೆನ್ಸ್” ತಲೆ ನೋವು ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಟೆಂಡರ್ ಅನ್ನು ಕರೆಯುವುದಾಗಿ ಘೋಷಿಸಿತ್ತು. ಆದರೆ, ಈ ನಡುವೆ ಆಂಬ್ಯುಲೆನ್ಸ್ ನೌಕರರಿಗೆ ನಾಲ್ಕು ತಿಂಗಳಿನಿಂದ ವೇತನ ಬಾರದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 8ರಂದು ಸಾಮೂಹಿಕ ಗೈರು ಹಾಜರಾಗುವ ಎಚ್ಚರಿಕೆಯನ್ನು ಆಂಬ್ಯುಲೆನ್ಸ್ ನೌಕರರ ಸಂಘ ನೀಡಿದೆ.
ಜಿವಿಕೆ ಕಂಪನಿಯವರು ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್‌ನ ನಾಲ್ಕು ತಿಂಗಳ ವೇತನವನ್ನು ಪಾವತಿ ಮಾಡಿಲ್ಲ. ಇದರಿಂದ ಆಂಬ್ಯುಲೆನ್ಸ್ ನೌಕರರ ಜೀವನ ನಿರ್ವಹಣೆ ಕಡು ಕಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿಯನ್ನು ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಇದರ ಜತೆಗೆ ಮೂರು ವರ್ಷಗಳ (2020, 2021, 2022ನೇ ಸಾಲು) ಅರಿಯರ್ಸ್ ಅನ್ನೂ ನೀಡಲಾಗಿಲ್ಲ. ಹೀಗಾಗಿ ಜುಲೈ 8ರೊಳಗೆ ವೇತನ ಕೈ ಸೇರದೆ ಇದ್ದರೆ ಸಾಮೂಹಿಕ ಗೈರಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ರಾಜ್ಯದಲ್ಲಿ ಸರ್ಕಾರ ಬದಲಾದರೂ 108 ಆಂಬ್ಯುಲೆನ್ಸ್ ನೌಕರರ ಪರದಾಟ ಮಾತ್ರ ತಪ್ಪಲಿಲ್ಲ ಎನ್ನುವ ಸ್ಥಿತಿ ಈಗ ನಿರ್ಮಾಣ ಆಗಿದೆ. ಹೊಸ ಟೆಂಡರ್ ಕರೆಯಲು ಕೂಡ ಆರೋಗ್ಯ ಇಲಾಖೆ ಮೀನಮೇಷ ಎಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 4 ತಿಂಗಳಿಂದ ಜಿವಿಕೆ ಕಂಪನಿಯವರು ವೇತನ ಕೊಡದೆ ಸತಾಯಿಸುತ್ತಿದ್ದರೂ ಸರ್ಕಾರ ಯಾಕೆ ಟೆಂಡರ್ ಕರೆಯುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಸವಾರರಿಗೆ ಮತ್ತೊಂದು ಶಾಕ್! ಜುಲೈ 1ರಿಂದ ಮಂಡ್ಯದಲ್ಲೂ ಟೋಲ್ ಬರೆ
ಕ್ರಮ ಕೈಗೊಳ್ಳುವರೇ ದಿನೇಶ್ ಗುಂಡೂರಾವ್?
2017ರಲ್ಲಿಯೇ ಟೆಂಡರ್ ಅನ್ನು ರದ್ದು ಮಾಡಲಾಗಿತ್ತು. ಆದರೆ, ಈವರೆಗೂ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಇದು ಯಾಕೆ ಎಂಬ ಪ್ರಶ್ನೆ ಮಾಡಿ ಮಾಡಿ ರಾಜ್ಯ ಆಂಬ್ಯುಲೆನ್ಸ್ ನೌಕರರ ಸಂಘವೂ ಸುಸ್ತಾಗಿದೆ. ಈಗ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ, ಜುಲೈ 8ರಂದು ಆಂಬ್ಯುಲೆನ್ಸ್ ಸೇವೆ ಇರುವುದಿಲ್ಲ. ಈಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ.