ಬೆಂಗಳೂರು: ರಾಜ್ಯದಲ್ಲಿ ೪೦% ಕಮಿಷನ್ (40% Commission) ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆಯೇ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾ ರೆಡ್ಡಿ ಅವರ ಮೇಲೆ ೧೫% ಕಮಿಷನ್‌ನ ನೇರ ಆರೋಪ ಮಾಡಲಾಗಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಅವರು ಸೋಮವಾರ ಈ ಗಂಭೀರ ಆರೋಪ ಮಾಡಿದ್ದಾರೆ. ಶನಿವಾರ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರ ಜತೆಗೆ ಪತ್ರಿಕಾಗೋಷ್ಠಿ ನಡೆಸಿದ ಮಂಜುನಾಥ್ ಅವರು, ಸೂರ್ಯಚಂದ್ರ ಎಷ್ಟು ಸತ್ಯವೋ, ಸಚಿವರು, ಶಾಸಕರ ಭ್ರಷ್ಟಾಚಾರ ಕೂಡ ಅಷ್ಟೇ ಸತ್ಯ ಎಂದರು. ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಇದ್ದರೂ ಅವರನ್ನು ಬಂಧಿಸಿಲ್ಲ. ಅದೇ ನಮ್ಮ ಅಧ್ಯಕ್ಷರಿಗೆ ೮೮ ವರ್ಷವಾಗಿದೆ. ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ʻʻನಮ್ಮ ಬಳಿ ೧೪ ಶಾಸಕರ ದಾಖಲೆ ಇದೆ. ೫ರಿಂದ ೬ ಸಚಿವರ ಬಗ್ಗೆ ಪೂರ್ಣ ವಿವರಗಳಿವೆ. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ವಿಚಾರವಾಗಿ ಆಡಿಯೊ ದಾಖಲೆ ಇದೆ. ಅವರ ಅವರ ಸಹಾಯಕರೇ ನನ್ನನ್ನು ಕರೆಸಿ ಮಾತನಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದನ್ನು ಪ್ರಶ್ನಿಸಿದ್ದಾರೆ. ನಾನು ೨೨೪ ಶಾಸಕರಿಗೂ ಭ್ರಷ್ಟಾಚಾರ ವಿಚಾರವಾಗಿ ಪತ್ರ ಬರೆದಿದ್ದೇನೆʼʼ ಎಂದು ಮಂಜುನಾಥ್ ಹೇಳಿದರು.
ಶಾಸಕ ತಿಪ್ಪಾರೆಡ್ಡಿ ಅವರು ನೀರಾವರಿ ಇಲಾಖೆ ಕಾಮಗಾರಿಗಳಿಗೆ 25 % ಕಮಿಷನ್, ಪಿಡಬ್ಲ್ಯುಡಿ ಕಾಮಗಾರಿಯಲ್ಲಿ ಶೇ. ೧೫ ಮತ್ತು ಕಟ್ಟಡ ಕಾಮಗಾರಿಗೆ ಶೇ. ೫ರಿಂದ ೧೦ ಕಮಿಷನ್ ಕೇಳುತ್ತಾರೆ. ನಾನು ಮಾಡಿರುವ ಲೇಔಟ್‌ಗೆ ಯುಜಿಡಿ ಕಾಮಗಾರಿಗೆ 4 ಲಕ್ಷ ರೂ. ಕೇಳಿದರು. ಇವರು ಕೊಡುತ್ತಿರುವ ಕಿರಿಕಿರಿಯಿಂದ ಬೇಸತ್ತ ನಾನು ಗುತ್ತಿಗೆದಾರರ ಕೆಲಸ ಬಿಟ್ಟು ಲೇಔಟ್ ಮಾಡಿದ್ದೆ. ಅಲ್ಲಿಯೂ ತೊಂದರೆ ಕೊಟ್ಟಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು.
೧ ಕೋಟಿ ರೂ.ಗೆ ೧೦ ಲಕ್ಷ ಕೊಟ್ಟಿದ್ದೇನೆ
ಯಾವುದೇ ಕಾಮಗಾರಿಯ ಲಂಚದ ಸ್ವಲ್ಪ ಮೊತ್ತವನ್ನು ನೇರವಾಗಿ ಶಾಸಕರಿಗೆ ಕೊಡಬೇಕು. ಸ್ವಲ್ಪ ಮೊತ್ತವನ್ನು ಎಂಜಿನಿಯರ್ ಮೂಲಕ ಕೊಡಬೇಕು. ನಾನು ೧ ಕೋಟಿ ರೂ.ಗಳಿಗೆ ೧೦ ಲಕ್ಷ ರೂ. ಕಟ್ಟಿದ್ದೇನೆ. ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಸಿಸ್ಟಮ್ ಕಾಮಗಾರಿಗೆ ಶೇ. ೧೦ರಷ್ಟು ಮೊತ್ತವನ್ನು ಕಟ್ಟಿದ್ದೇನೆ. ಎಂಜಿಪಿಎಸ್ ಕಾಮಗಾರಿಗೆ ೧೫ ಲಕ್ಷ ರೂ.ಗೆ ೪ ಲಕ್ಷ ರೂ. ಪಾವತಿಸಿದ್ದೇನೆ. ೮.೫ ಕೋಟಿ ರೂ. ವೆಚ್ಚದ ಚಿತ್ರದುರ್ಗದ ಆಸ್ಪತ್ರೆ ಕಾಮಗಾರಿಗೆ ನಾನು ೨೨ ಲಕ್ಷ ರೂ. ಕೊಡಬೇಕಾಗಿ ಬಂದು. ಈ ಎಲ್ಲ ಪೂರ್ಣ ಮೊತ್ತವನ್ನು ಮೊದಲೇ ನೀಡಿದ್ದೇನೆ. ಡಿಸೆಂಬರ್ ೨೭ರಂದು ನಾನು ಕೊನೆಯ ಬಾರಿಗೆ ಅವರಿಗೆ ಕಮಿಷನ್ ನೀಡಿದ್ದೆ ಎಂದು ಹೇಳಿದ ಮಂಜುನಾಥ್ ಅವರು, ನನಗೆ ವೈಯಕ್ತಿಕವಾಗಿ ಇನ್ನೂ ೬ ಕೋಟಿ ರೂ. ಕಾಮಗಾಗಿ ಬಿಲ್ ಬಾಕಿ ಇದೆ ಎಂದು ಹೇಳಿದರು.
ಯಾವ ಯಾವ ಕಾಮಗಾರಿಗೆ ಎಷ್ಟೆಷ್ಟು ಹಣ ಎಂದು ಲೆಕ್ಕ ನೀಡಿದ ಅವರು ಪಿಡಬ್ಲ್ಯುಡಿ ಕಚೇರಿಗೆ ೧೨.೫ ಲಕ್ಷ ರೂ., ಅಸ್ಪತ್ರೆ ಕಾಮಗಾರಿಗೆ ೧೨.೫ ಲಕ್ಷ ರೂ, ಎಂಜಿಪಿಎಸ್‌ಗೆ ೪ ಲಕ್ಷ ರೂ., ಲೇಔಟ್ ಅಪ್ರೂವಲ್‌ಗೆ ೧೮ ಲಕ್ಷ ರೂ. ನೀಡಿದ್ದಾಗಿ ಲೆಕ್ಕ ನೀಡಿದರು. ʻʻನಾವು ಸಾಲ ಸೋಲ ಮಾಡಿ ಕಾಮಗಾರಿ ಮಾಡೋದು. ಆಭರಣಗಳನ್ನು ಅಡವು ಇಟ್ಟು ಕೆಲಸ ಮಾಡಿದ್ದೇವೆ. ಇಷ್ಟೆಲ್ಲ ಕಷ್ಟಪಟ್ಟು ಕಾಮಗಾರಿ ಮಾಡುವ ನಾವು ಇವರಿಗೆ ಪರ್ಸೆಂಟೇಜ್ ಕೊಡಬೇಕಾʼʼ ಎಂದು ಪ್ರಶ್ನಿಸಿದರು.
ತಿಪ್ಪಾರೆಡ್ಡಿ ಅವರ ಆಡಿಯೋದಲ್ಲಿ ಏನಿದೆ?
ಈ ನಡುವೆ ಪತ್ರಿಕಾಗೋಷ್ಠಿಯಲ್ಲಿ ತಿಪ್ಪಾರೆಡ್ಡಿ ಅವರು ಮಾತನಾಡಿದ್ದು ಎಂದು ಹೇಳಲಾದ ಒಂದು ಆಡಿಯೊವನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ತಿಪ್ಪಾರೆಡ್ಡಿ ಮತ್ತು ಮಂಜುನಾಥ್ ನಡುವೆ ಸಂಭಾಷಣೆ ಇದೆ. ಅದರಲ್ಲಿ ತಿಪ್ಪಾ ರೆಡ್ಡಿ ಅವರು, ʻʻನಾನು ನಿನ್ನ ಹತ್ರ ಮಾತಾಡೋದು ಸರಿಯಲ್ಲ. ನಿಮ್ಮಂತಹ ಹಲವರ ಹತ್ರ ಅಡ್ಜಸ್ಟ್ ಮಾಡಿ ಕೊಂಡಿದ್ದೇನೆ. ನಾನು ನಿಮ್ಮನ್ನು ಪ್ರಶ್ನೆ ಮಾಡೋದು ತಪ್ಪು ಅನ್ನಿಸುತ್ತೆ. ನಾನು ಎಂಜಿನಿಯರ್ ಹತ್ರ ಮಾತಾಡ್ತೀನಿ. ನಿನ್ನ ಹತ್ರ ಮಾತಾಡೋಕೆ ಆಗಲ್ಲ. ಹಳೆಯದ್ದು ನಾನೂ ಮಾತಾಡಲ್ಲ, ನೀನೂ ಮಾತಾಡಬೇಡʼʼ ಎಂದಿದ್ದಾರೆ.
ʻʻನೀನು ಸಣ್ಣ ಕಂಟ್ರಾಕ್ಟರ್ ಇರಬಹುದು, ದೊಡ್ಡ ಕಂಟ್ರಾಕ್ಟರ್ ಇರಬಹುದು. ನಾನು ನಿಂಗೆ ಕೆಲಸ ನಿಲ್ಸು ಅಂತ ಹೇಳಿಲ್ಲ. ನಾನು ಇಂಜಿನಿಯರ್ ಗೆ ಹೇಳಿದ್ದು. ನೀನು ನಂಗೆ ಡೈರೆಕ್ಷನ್ ಕೊಡಬೇಡ. ನೀನು ನನ್ನ ಪ್ರಶ್ನೆ ಮಾಡಬಾರದು. ನೀನು ನಂಗೆ ಹೇಳಬಾರದು. ಬೇಗ ಕ್ಲಿಯರ್ ಮಾಡಿಕೋ. ಕ್ಲಿಯರ್ ಆದ್ರೆ ಸ್ಮೂತ್ ಆಗಿ ಹೋಗುತ್ತದೆ.ʼʼ ಎಂದು ತಿಪ್ಪಾರೆಡ್ಡಿ ಹೇಳುತ್ತಾರೆ. ʻʻನಾವು ಕಮಿಶನ್ ಕೊಡೋದನ್ನು ತಡ ಮಾಡಿದಾಗ ಎಂಜಿನಿಯರ್ ಶಾಸಕರಿಗೆ ಹೇಳ್ತಾರೆ. ಅವರು ಬಿಲ್ ಹೋಲ್ಡ್ ಮಾಡಿದ್ದಾರೆʼʼ ಎಂದು ನೋವು ತೋಡಿಕೊಂಡರು.
ಆಡಿಯೊ ಬಗ್ಗೆ ಶಾಸಕ ತಿಪ್ಪಾರೆಡ್ಡಿ ಹೇಳೋದೇನು?
ಲಂಚಾವತಾರ, ಕಮಿಷನ್ ಆರೋಪದ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು, ʻʻಕಂಟ್ರಾಕ್ಟರ್ ಮಂಜುನಾಥ್ ಯಾವುದೇ ಕಾಮಗಾರಿ ಮಾಡಿದರೂ ಆತ ಹೇಳಿದ್ದೇ ಫೈನಲ್ ಆಗಬೇಕು. ಅಧಿಕಾರಿಗಳಿಗೆ ನಾನು ಜಿಲ್ಲಾ ಅಧ್ಯಕ್ಷ ಅಂತ ಬೆದರಿಸ್ತಾನೆ. ಸಣ್ಣಪುಟ್ಟ ಕಂಟ್ರಾಕ್ಟರ್ ಗಳು ಕೆಲಸ ಕೇಳಿದಾಗ ತಾರತಮ್ಯ ಮಾಡ್ತಿದ್ದ. ಯಾರ ಬೆಂಬಲಿಗರು, ಯಾವ ಪಕ್ಷ ಅಂತ ಕೇಳ್ತಿದ್ದ. ಉಚ್ಚಂಗಿ ಯಲ್ಲಮ್ಮ ದೇಗುಲ ಕಾಮಗಾರಿ ಕಳಪೆಯಾಗಿದೆ. ಅದನ್ನು ಈಗ ಆರೋಪಿಸೋದು ಸರಿಯಲ್ಲ. ಎಲ್ಲಾ ಕಾಮಗಾರಿ ವೇಳೆ ಆತನದು ಸುಪ್ರೀಂ ರೀತಿ ವರ್ತನೆ. ನಾನು ಅಧ್ಯಕ್ಷ ಅಂತ ದೌರ್ಜನ್ಯ ಮಾಡ್ತಾನೆ. ಅಷ್ಟು ಕೊಟ್ಟಿದೇನೆ,ಇಷ್ಟು ಕೊಟ್ಟಿದೇನೆ ಅಂತ ಹೇಳಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ ಅಂತ ಗೊತ್ತಿಲ್ಲ. ಆತ ಕಾಮಗಾರಿ ಮಾಡುವ ವೇಳೆ ಯೂಜಿಡಿ ಪೈಪ್ ಲೈನ್ ಒಡೆದಿದ್ದ. ಅದನ್ನು ಕೇಳಿದ್ರೂ ತಪ್ಪಾ? ರಿಯಲ್ ಎಸ್ಟೇಟ್ ವ್ಯವಹಾರವನ್ನು ಜೊತೆಗೆ ಮಾಡಲು ಹೊರಟಿದ್ದ. ಅದನ್ನು ನಾ ವಿರೋಧಿಸಿದ್ದಕ್ಕೆ ಇದೆಲ್ಲ ಶುರುವಾಗಿದೆ. ಆತನ ಗುಣವೇ ಹೆದರಿಸಿ ಕೆಲಸ ಮಾಡೋದು. ಪಿಡಬ್ಲ್ಯೂಡಿ ಸಚಿವರ ಎದುರಲ್ಲೇ ಆತ ನನ್ನ ವಿರುದ್ಧ ಆರೋಪ ಮಾಡಿದ್ದ. ಆಗ ಸಚಿವ ಸಿ.ಸಿ.ಪಾಟೀಲ್ ಅವರು ಅವನ ಭಾಷಣ ನಿಲ್ಲಿಸಿದ್ದರು. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾರೆʼʼ ಎಂದು ಹೇಳಿದರು ತಿಪ್ಪಾರೆಡ್ಡಿ.
ನನಗೇನೂ ಗೊತ್ತಿಲ್ಲ ಎಂದ ಸಿಎಂ
ಈ ನಡುವೆ, ತಿಪ್ಪಾರೆಡ್ಡಿ ಅವರ ಆಡಿಯೊ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನನಗೇನೂ ಗೊತ್ತಿಲ್ಲಪ್ಪ ಎಂದರು. ನೋಡಿ ರಿಯಾಕ್ಟ್ ಮಾಡುವೆ ಎಂದು ಹೇಳಿದರು.
ಇದನ್ನೂ ಓದಿ | 40% Commission | ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಜ. 18ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ, 19ರಂದು ಕೋರ್ಟ್‌ಗೆ ದಾಖಲೆ