Site icon Vistara News

40 Percent | ಬಿಜೆಪಿ‌ ಸರ್ಕಾರದಿಂದ ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.40 ಲಕ್ಷ ಹುದ್ದೆಗಳು ಖಾಲಿ‌ ಇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೂ ಯಾವುದೇ ನೇಮಕಾತಿಗೆ ಅಧಿಸೂಚನೆ ಹೊರಡಿಸಿಲ್ಲ. ಯಾವ ಯಾವ ಪರೀಕ್ಷೆ ಫಲಿತಾಂಶ ಬಿಟ್ಟಿದ್ದಾರೋ ಆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಶೇ.40 (40 Percent) ಕಮಿಷನ್ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ‌ ಸರ್ಕಾರದಿಂದ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಪಾರದರ್ಶಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಅಭ್ಯರ್ಥಿಗಳ ಒಕ್ಕೂಟದಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅಭ್ಯರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಗರಣ ನಡೆದಿರುವುದರಿಂದ ಅಭ್ಯರ್ಥಿಗಳೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಎಸ್ಐ ಪರೀಕ್ಷೆಯನ್ನು ಕೆಲ ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಬರೆದಿದ್ದಾರೆ. ಆದರೆ ಹಗರಣ ಬೆಳಕಿಗೆ ಬಂದಿದ್ದರಿಂದ ನೇಮಕಾತಿ ರದ್ದಾಗಿದೆ. ಮತ್ತೆ ಪರೀಕ್ಷೆ ಬರೆಯಲು ಕೆಲ ಅಭ್ಯರ್ಥಿಗಳಿಗೆ ವಯೋಮಿತಿ ಮುಗಿಯುತ್ತಿದೆ. ಅಂತಹ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದ್ದು, ಸರ್ಕಾರ ಯಾರ ಪರ ಕೆಲಸ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಕುಟುಕಿದರು.

ಇದನ್ನೂ ಓದಿ | 40% ಭ್ರಷ್ಟಾಚಾರ ಆರೋಪ | ಕೆಂಪಣ್ಣ & 17 ಗುತ್ತಿಗೆದಾರರ ವಿರುದ್ಧ 2 ಮಾನನಷ್ಟ ಮೊಕದ್ದಮೆ

ಪ್ರಧಾನಿ ಮೋದಿ ಅವರು ಯಾವುದೇ ಭಾಷಣದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಮಾಡಿದ್ದೇವೆ ಎಂದು ಹೇಳುತ್ತಾರೆ. ಒಬ್ಬ ಬಿಜೆಪಿ ಶಾಸಕ, ಪಿಎಸ್‌ಐ ನೇಮಕಾತಿಗೆ 15 ಲಕ್ಷ ರೂ. ತೆಗೆದುಕೊಂಡಿದ್ದಾರೆ. ಬಿಜೆಪಿ‌ ಸರ್ಕಾರದಿಂದ ವಿಧಾನಸೌಧ ವ್ಯಾಪಾರ ಸೌಧವಾಗಿದ್ದು, ಈ ಬಿಜೆಪಿ ಭ್ರಷ್ಟ ಸರ್ಕಾರದ ವಿರುದ್ಧ ಸದನದಲ್ಲಿ ಅಭ್ಯರ್ಥಿಗಳ ಪರ ಹೋರಾಟ ಮಾಡುತ್ತೇವೆ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇವೆ. ಅಕ್ರಮ ನಡೆದಿದ್ದರೂ ಗೃಹ ಸಚಿವರು ಸದನದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಆರು ಬಾರಿ ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಬಿಜೆಪಿ ಸರ್ಕಾರ 40 ಪರ್ಸೆಂಟ್ ಹಣ ತೆಗೆದೊಕೊಂಡೇ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ನಡೆಸಲು ಘೋಷಿಸಿದ್ದಾರೆ ಎಂದು ಆಪಾದಿಸಿದರು.

ಲಂಚ ಕೊಡಲು ದುಡ್ಡಿಲ್ಲ, ಅಕ್ಕಿ ಗಂಟನ್ನು ಸಿಎಂ, ಸ್ಪೀಕರ್‌ಗೆ ತಲುಪಿಸಿ
ವರ್ಷಗಟ್ಟಲೇ ನಿರಂತರ ಅಧ್ಯಯನ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದೇವೆ. ಆದರೆ ನೇಮಕಾತಿಯಲ್ಲಿ ಅಕ್ರಮಗಳು ನಡೆಯುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ಬಳಿ ಲಂಚ ಕೊಡಲು ದುಡ್ಡಿಲ್ಲ, ಬದಲಿಗೆ ಅಕ್ಕಿ ಗಂಟು ಕೊಡುತ್ತಿದ್ದೇವೆ ಎಂದು ಕಣ್ಣೀರು ಹಾಕುತ್ತಾ ಉದ್ಯೋಗಾಕಾಂಕ್ಷಿಯೊಬ್ಬರು ಪ್ರಿಯಾಂಕ್ ಖರ್ಗೆ ಎದುರು ನೋವನ್ನು ಬಿಚ್ಚಿಟ್ಟಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಅಭ್ಯರ್ಥಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕಾಂಗ್ರೆಸ್‌ ನಿಯೋಗದಿಂದ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಶರತ್ ಬಚ್ಚೇಗೌಡ ತೆರಳಿ, ಉದ್ಯೋಗಾಕಾಂಕ್ಷಿಗಳ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಪೊಲೀಸ್‌, ಶಿಕ್ಷಕ ಸೇರಿ ವಿವಿಧ ಹುದ್ದೆಗಳ ಆಕಾಂಕ್ಷಿಗಳು ತಮ್ಮ ಸಮಸ್ಯೆಗಳನ್ನು ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಶರತ್ ಬಚ್ಚೇಗೌಡ ಅವರ ಗಮನಕ್ಕೆ ತಂದು, 2000 ಮನವಿ ಪತ್ರ ಹಾಗೂ ನೂರಾರು ಅಕ್ಕಿ ಗಂಟುಗಳನ್ನು ನೀಡಿದರು. ಇವುಗಳನ್ನು ಮುಖ್ಯಮಂತ್ರಿ ಹಾಗೂ ಸ್ಪೀಕರ್‌ ಅವರಿಗೆ ತಲುಪಿಸಿ ಎಂದು ಮನವಿ ಮಾಡಿ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ | Siddaramaiah : ಮತಾಂತರ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು? 

Exit mobile version