Site icon Vistara News

Assembly Session : 5 ವಿಧೇಯಕ ಪಾಸ್;‌ ಬಿಲ್‌ ಹರಿದು ಸ್ಪೀಕರ್‌ ಮುಖಕ್ಕೆಸೆದ ಬಿಜೆಪಿ-ಜೆಡಿಎಸ್!

BJP and JDS tore the bill and threw it in the speaker face

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ (Assembly Session) ಬುಧವಾರ (ಜುಲೈ 19) ತೀವ್ರ ಗದ್ದಲ ಏರ್ಪಟ್ಟಿದೆ. ಐದು ತಿದ್ದುಪಡಿ ವಿಧೇಯಕಗಳನ್ನು ಸದನದಲ್ಲಿ ಅಂಗೀಕಾರ ಮಾಡಲಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಕೆಂಡಾಮಂಡಲವಾಗಿದೆ. ವಿಪಕ್ಷಗಳ ಗದ್ದಲದ ನಡುವೆಯೂ ಅಂಗೀಕಾರ ನಡೆಸಿ ಚರ್ಚೆಗೆ ಸ್ಪೀಕರ್‌ (Vidhanasbha Speaker) ಅವಕಾಶ ನೀಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ವಿಧೇಯಕ ಪ್ರತಿಯನ್ನು (Copy of the Bill) ಹರಿದು ವಿಧಾನಸಭಾಧ್ಯಕ್ಷರ ಮುಖದ ಮೇಲೆ ಎಸೆದಿದ್ದಾರೆ. ಇದೀಗ ಮತ್ತೊಂದು ಸುತ್ತಿನ ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಗಿದೆ.

ವಿಧಾನ ಸಭೆಯಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಐದು ವಿಧೇಯಕಗಳನ್ನು ಮಂಡಿಸಿದರು. ಕೂಡಲೇ ಐದು ತಿದ್ದುಪಡಿ ವಿಧೇಯಕಗಳಿಗೆ ಒಪ್ಪಿಗೆ ನೀಡಲಾಯಿತು. ವಿಪಕ್ಷಗಳ ಗದ್ದಲದ ನಡುವೆಯೂ ಅಂಗೀಕಾರ ದೊರೆಯಿತು.

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, ಹಾಲು ಉತ್ಪಾದಕರಿಗೆ, ನೌಕರರಿಗೆ ಸೇವಾ ಭದ್ರತೆ ಒದಗಿಸುವ ವಿಧೇಯಕ, ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಕರ್ನಾಟಕ ಸಿವಿಲ್ ಪ್ರಕ್ರಿಯೆ ಸಂಹಿತೆ 2023 ವಿಧೇಯಕ ಹಾಗೂ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ.

ವಿಧೇಯಕಗಳ ಪ್ರತಿ ಹರಿದು ಬಿಸಾಡಿದ ಪ್ರತಿಪಕ್ಷಗಳು!

ಇದರಿಂದ ಪ್ರತಿಪಕ್ಷಗಳು ತೀವ್ರ ಆಕ್ರೋಶಗೊಂಡಿದ್ದು, ಧರಣಿ ತೀವ್ರಗೊಳಿಸಿವೆ. ಅಲ್ಲದೆ, ಪ್ರತಿಪಕ್ಷಗಳ ಸದಸ್ಯರು ವಿಧೇಯಕಗಳ ಪ್ರತಿಗಳನ್ನು ಹರಿದು ಬಿಸಾಡಿದ್ದಾರೆ. ಸ್ಪೀಕರ್ ಪೀಠದತ್ತ ಹರಿದ ಹಾಳೆಗಳನ್ನು ಬಿಜೆಪಿ, ಜೆಡಿಎಸ್ ಸದಸ್ಯರು ಎಸೆದಿದ್ದಾರೆ. ಈ ವೇಳೆ ಊಟಕ್ಕೆ ಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ, ಊಟಕ್ಕೂ ಬಿಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಧರಣಿ ನಿರತ ಬಿಜೆಪಿ ಹಾಗೂ ಸದಸ್ಯರು, ಸ್ಪೀಕರ್ ಪೀಠದ ಬಳಿ ಜಮಾಯಿಸಿ ಹರಿದ ಹಾಳೆಯನ್ನು ಎಸೆದಿದ್ದಾರೆ.

ಸ್ಪೀಕರ್ ಪೀಠದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಕುಳಿತಿದ್ದರು. ಅವರ ಮುಖದ ಮೇಲೆಯೇ ಹರಿದ ಹಾಳೆಯನ್ನು ಬಿಜೆಪಿ, ಜೆಡಿಎಸ್‌ ಸದಸ್ಯರು ಎಸೆದಿದ್ದಾರೆ. ಈ ವೇಳೆ ಸ್ಪೀಕರ್ ರಕ್ಷಣೆಗೆ ಮಾರ್ಷಲ್‌ಗಳು ಬಂದಿದ್ದಾರೆ. ಬಿಜೆಪಿ-ಜೆಡಿಎಸ್‌ ಸದಸ್ಯರ ಗದ್ದಲ ಹೆಚ್ಚಾದ ಕಾರಣ ಕೊನೆಗೂ ಸದನವನ್ನು ಮುಂದೂಡಲಾಯಿತು.

ಕಾಂಗ್ರೆಸ್‌ ಆಕ್ಷೇಪ – ಸ್ಪೀಕರ್‌ ವಿರುದ್ಧ ನಿಲುವಳಿಗೆ ಮುಂದಾದ ಬಿಜೆಪಿ

ವಿಧೇಯಕದ ಪ್ರತಿಯನ್ನು ಸ್ಪೀಕರ್‌ ಮೇಲೆ ಎಸೆದ ಬಿಜೆಪಿ – ಜೆಡಿಎಸ್‌ ಸದಸ್ಯರ ವರ್ತನೆ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಲಿತ ಡೆಪ್ಯುಟಿ ಸ್ಪೀಕರ್‌ಗೆ ಬಿಜೆಪಿಯವರು ಅಪಮಾನ ಮಾಡಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೇ ವೇಳೆ ಸ್ಪೀಕರ್ ನಿರ್ಧಾರವನ್ನು ಖಂಡಿಸಿದ ಪ್ರತಿಪಕ್ಷಗಳು, ವಿಧಾನಸಭಾಧ್ಯಕ್ಷರ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ನಿರ್ಧಾರವನ್ನು ಮಾಡಿವೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್ ನೇತೃತ್ವದಲ್ಲಿ ವಿಧಾನಸೌಧ ಲಾಂಜ್‌ನಲ್ಲಿ ಮಾತುಕತೆ ನಡೆಸಲಾಯಿತು. ಅಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನ ಮಾಡಲಾಯಿತು.

ಚರ್ಚೆ ಇಲ್ಲದೆ ವಿಧೇಯಕ ಪಾಸ್‌

ಕೃಷಿಯೇತರ ಚಟುವಟಿಕೆಗೆ ರೈತ ತನ್ನ ಭೂಮಿ ಬಳಸಿಕೊಳ್ಳಲು ಸ್ವಯಂ ಘೋಷಣೆ ಅಧಿಕಾರ ಕೊಡುವ ಭೂ ಸುಧಾರಣೆ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ಕರ್ನಾಟಕ ಸಿವಿಲ್ ಪ್ರಕ್ರಿಯೆ ಸಂಹಿತೆ 2023 ವಿಧೇಯಕ, ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕಗಳು ಸೇರಿ ಐದು ವಿಧೇಯಕಗಳನ್ನು ಚರ್ಚೆ ಇಲ್ಲದೇ ಪಾಸ್ ಮಾಡಲಾಯಿತು. ಈ ವೇಳೆ ಊಟದ ಸಮಯ ಆಗಿದೆ ಬಿಡಿ ಎಂದು ಪ್ರತಿಪಕ್ಷ ಸದಸ್ಯರು ಸ್ಪೀಕರ್‌ಗೆ ಕೋರಿದ್ದಾರೆ. ಆದರೆ, ವಿಧಾನಸಭಾಧ್ಯಕ್ಷರು, ಊಟಕ್ಕೆ ಬಿಡಲ್ಲ ಚರ್ಚೆ ಮುಂದುವರಿಯಲಿ ಎಂದು ಹೇಳಿದರು. ಇದು ಗಲಾಟೆ ತೀವ್ರಗೊಳ್ಳಲು ಕಾರಣವಾಯಿತು.

ವಿಡಿಯೊ ಮಾಡಿಕೊಂಡ ಡಿ.ಕೆ. ಶಿವಕುಮಾರ್

ಸದನದಲ್ಲಿ ವಿಧೇಯಕ ಪತ್ರವನ್ನು ಹರಿದು ಹಾಕಿ ಸ್ಪೀಕರ್‌ ಕಡೆ ಎಸೆದಿದ್ದನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡರು.

ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕವೂ ಪಾಸ್‌

ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕವೂ ಪಾಸ್ ಆಗಿದೆ. ಶಾಸಕರಿಗೆ ನೀಡಿದ ನಿವೇಶನವನ್ನು ಅಕ್ರಮವಾಗಿ ನೋಂದಣಿ ಮಾಡಲಾಗಿದೆ. ಇದರಲ್ಲಿ ಸಬ್ ರಿಜಿಸ್ಟ್ರಾರ್‌ ಶಾಮಿಲಾಗಿದ್ದಾರೆ. ನಕಲಿ ನೋಂದಣಿ ರಾಜ್ಯದಲ್ಲಿ ಹೆಚ್ಚಾಗಿದೆ. ಬೇರೆಯವರ ಆಸ್ತಿಯನ್ನು ಇವರು ನಮ್ಮದೇ ಅಂತ ರಿಜಿಸ್ಟರ್ ಮಾಡಿದ್ದಾರೆ. ಶಾಸಕರಾದ ನರೇಂದ್ರ ಸ್ವಾಮಿ, ಅಭಯ್ ಪಾಟೀಲ್, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ ನೀಡಿದ್ದ ಸೈಟ್‌ಗಳನ್ನು ಅವರಿಗೆ ಗೊತ್ತಿಲ್ಲದೆ ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಇಂತಹ ನೊಂದಣಿ ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗೆ ನೀಡುವ ವಿಧೇಯಕ ಇದಾಗಿದೆ.

Exit mobile version