ಚಿತ್ರದುರ್ಗ: ನಗರದ ಜಗನ್ನಾಥ್ ರೆಡ್ಡಿ ಕುಟುಂಬದ 5 ಅಸ್ಥಿ ಪಂಜರಗಳ (Skeletons Found) ಅಂತ್ಯ ಸಂಸ್ಕಾರವನ್ನು ಶನಿವಾರ ನೆರವೇರಿಸಲಾಯಿತು. ನಗರದ ಗೋಕಟ್ಟೆ ಬಳಿಯ ರುದ್ರ ಭೂಮಿಯಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ರೆಡ್ಡಿ ಸಂಪ್ರದಾಯದಂತೆ ಅಂತ್ಯ ಕ್ರಿಯೆ ನಡೆಯಿತು.
ಸುಡುವ ಬದಲು ಹೂಳಲು ಪೊಲೀಸರು ಸೂಚಿಸಿದ ಹಿನ್ನೆಲೆಯಲ್ಲಿ ಅಸ್ಥಿ ಪಂಜರಗಳನ್ನು ಹೂಳಲಾಗಿದೆ. ಜೆಸಿಬಿ ಮೂಲಕ ಗುಂಡಿ ತೆಗೆಸಿ ಅಂತ್ಯ ಸಂಸ್ಕಾರ ಮಾಡಿ, ಆಯಾ ಸಮಾಧಿಗಳ ಮೇಲೆ 5 ಬೋರ್ಡ್ ನೆಡಲಾಗಿದೆ.
ಏನಿದು ಪ್ರಕರಣ?
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಿರುವ ದೊಡ್ಡ ಸಿದ್ದವ್ವನ ಹಳ್ಳಿಯ ನಿವಾಸಿ ಜಗನ್ನಾಥ್ ರೆಡ್ಡಿ ಎಂಬವರ ಇಡೀ ಕುಟುಂಬದವರ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿತ್ತು. ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮ, ಮಕ್ಕಳಾದ ತ್ರಿವೇಣಿ, ನರೇಂದ್ರ ರೆಡ್ಡಿ, ಕೃಷ್ಣ ರೆಡ್ಡಿ ಅವರ ಮೃತದೇಹದ ಅಸ್ಥಿಪಂಜರಗಳು ಪತ್ತೆ ಆಗಿತ್ತು.
ಇದನ್ನೂ ಓದಿ | Mysterious Death: 41 ಕೋಟಿಯ ಬಂಗಲೆಯಲ್ಲಿ ದಂಪತಿ, ಮಗಳ ನಿಗೂಢ ಸಾವು
ಜಗನ್ನಾಥ್ ರೆಡ್ಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಾರಿ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಇನ್ನು ಮನೆಯಲ್ಲಿ ಸಿಕ್ಕ 2019ರ ಕ್ಯಾಲೆಂಡರ್ ಪ್ರಕಾರ ಜಗನ್ನಾಥ್ ರೆಡ್ಡಿ ಕುಟುಂಬದವರು ಮೃತಪಟ್ಟು 5 ವರ್ಷಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಅಸ್ತಿ ಪಂಜರಗಳನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಿಗೂಢ ಸಾವಿಗೆ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದರು.
ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪುನಃ ಬೆಂಗಳೂರು ಮತ್ತು ದಾವಣಗೆರೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | ಅಸ್ಥಿಪಂಜರ ಪತ್ತೆ ಕೇಸ್; 50 ಎಕರೆ ಜಮೀನಿಗಾಗಿ ಚಿತ್ರಹಿಂಸೆ ಕೊಟ್ಟರಾ! ಡೆತ್‌ನೋಟ್‌ನಲ್ಲಿ ಏನಿದೆ?
50 ಎಕರೆ ಜಮೀನಿಗಾಗಿ ಚಿತ್ರಹಿಂಸೆ ಕೊಟ್ಟರಾ! ಡೆತ್‌ನೋಟ್‌ನಲ್ಲಿ ಏನಿದೆ?
ಒಂದೇ ಕುಟುಂಬದ ಐವರ ನಿಗೂಢ ಸಾವಿನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪತ್ತೆಯಾಗಿರುವ ಅಸ್ಥಿಪಂಜರಗಳು ಪೊಲೀಸರ ನಿದ್ದೆಗೆಡಿಸಿದ್ದು, ಸದ್ಯ ಪಾಳು ಬಿದ್ದ ಮನೆಯಲ್ಲಿ ಡೆತ್‌ನೋಟ್‌ವೊಂದು ಸಿಕ್ಕಿದೆ.
ಜಗನ್ನಾಥ್ ರೆಡ್ಡಿ ಕುಟುಂಬಸ್ಥರ ಡೆತ್‌ನೋಟ್ ಸಿಕ್ಕಿದ್ದು, ಇಬ್ಬರು ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಜಮೀನು ವಿಚಾರಕ್ಕೆ ಚಿತ್ರಹಿಂಸೆ ಕೊಟ್ಟಿದಾರೆ ಎನ್ನಲಾಗಿದೆ. ಅವರಿಬ್ಬರ ಹಿಂಸೆ ತಾಳಲಾರದೇ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ದೊಡ್ದಸಿದ್ದವ್ವನ ಹಳ್ಳಿ ಮೂಲದ ಒಬ್ಬ ವ್ಯಕ್ತಿ ಹಾಗೂ ಚಿತ್ರದುರ್ಗ ಮೂಲದ ಮತ್ತೊಬ್ಬ ವ್ಯಕ್ತಿ ಜಮೀನು ವಿಚಾರಕ್ಕಾಗಿ ಚಿತ್ರಹಿಂಸೆ ಕೊಡುತ್ತಿದ್ದರು. ಸದ್ಯ ಜಮೀನು ವಿಚಾರವು ನ್ಯಾಯಾಲಯದಲ್ಲಿದೆ. ಡೆತ್‌ನೋಟ್‌ನಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿರುವುದರಿಂದ ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ