ನವ ದೆಹಲಿ: ಉದಯಪುರ ಚಿಂತನಾ ಶಿಬಿರದಲ್ಲಿ ನಿರ್ಧಾರ ಮಾಡಿದಂತೆ ಪಕ್ಷದ ಎಲ್ಲ ಸಂಘಟನಾ ಹಂತದಲ್ಲಿ ಯುವಕರಿಗೆ ಅವಕಾಶಗಳನ್ನು ಕಲ್ಪಿಸಲಾಗುವುದು. ಈಗಾಗಲೇ ನಿರ್ಧರಿಸಿದಂತೆ ಶೀಘ್ರವೇ 50 ವರ್ಷಕ್ಕಿಂತ ಕೆಳಗಿನವರಿಗೆ ಶೇ.50ರಷ್ಟು ಸ್ಥಾನಗಳನ್ನು ಪಕ್ಷದ ಎಲ್ಲ ಹಂತಗಳಲ್ಲೂ ಮೀಸಲು ಇಡಲಾಗುವುದು ಎಂದು ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವರು, ನಾನು ಒಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ಬೆಳೆದು ಬಂದಿದ್ದೇನೆ. ಕಾರ್ಮಿಕ ಮಗನೊಬ್ಬನನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಚುನಾವಣೆಯ ಮೂಲಕ ಕಾಂಗ್ರೆಸ್‌ನಲ್ಲಿ ಮಾತ್ರವೇ ಆಂತರಿಕ ಪ್ರಜಾಪ್ರಭುತ್ವವಿದೆ ಎಂಬುದು ಸಾಬೀತಾಗಿದೆ ಎಂದು ಖರ್ಗೆ ಅವರು ತಿಳಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆಯು ಐತಿಹಾಸಿಕವಾಗಿದೆ. ಕೆಳಮಟ್ಟದವರಿಗೂ ಪಕ್ಷದ ಸಂದೇಶಗಳನ್ನು ತೆಗೆದುಕೊಂಡು ಹೋಗಲು ಇದರಿಂದ ಸಾಧ್ಯವಾಗುತ್ತಿದೆ. ಕಾಂಗ್ರೆಸ್ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ. ಆಹಾರ ಭದ್ರತೆ ಕಾಯ್ದೆ, ಶಿಕ್ಷಣ ಹಕ್ಕು, ಮನ್ರೇಗಾದಂಥ ಜನೋಪಕಾರಿ ಕಾರ್ಯಗಳನ್ನು ಜಾರಿಗೆ ತಂದಿದೆ. ಇಷ್ಟಾಗಿಯೂ ಜನರು ನಮ್ಮಿಂದ ದೂರವಿದ್ದಾರೆ. ಅವರೆಲ್ಲರನ್ನು ನಮ್ಮೊಟ್ಟಿಗೆ ಕರೆ ತಂದು ಮುಂದೆ ಹೋಗೋಣ. ಹೋರಾಡೋಣ. ಗೆಲ್ಲೋಣ ಎಂದು ಖರ್ಗೆ ಅವರು ಹೇಳಿದರು.
ಖರ್ಗೆಗೆ ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು
ನೂತನ ಅಧ್ಯಕ್ಷ ಮಲ್ಲಿಕಾರ್ಜನು ಖರ್ಗೆ ಅವರಿಗೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಪಕ್ಷದ ಎಲ್ಲ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಶೀಘ್ರವೇ ಈ ಎಲ್ಲ ಪೋಸ್ಟ್‌ಗಳಿಗೆ ಹೊಸಬರನ್ನು ನೇಮಕ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ | Mallikarjun Kharge | ಮಲ್ಲಿಕಾರ್ಜುನ ಖರ್ಗೆ ನೆಲಮೂಲದ ನಾಯಕ, ಸೋನಿಯಾ ಗಾಂಧಿ ಬಣ್ಣನೆ