ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾದ, ವಿವಾದ ಸೃಷ್ಟಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಗರಣ (PSI SCAM) ದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಎಲ್ಲ 52 ಕಳಂಕಿತ ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆಯ ಎಲ್ಲ ಪರೀಕ್ಷೆ ಮತ್ತು ನೇಮಕಾತಿಗಳಿಗೆ ಡಿಬಾರ್ ಮಾಡಲಾಗಿದೆ. ಪೊಲೀಸ್ ನೇಮಕಾತಿ ವಿಭಾಗವು ಮಂಗಳವಾರ ಈ ಆದೇಶವನ್ನು ಹೊರಡಿಸಿದೆ.
545 ಪಿಎಸ್‌ಐಗಳ ನೇಮಕಾತಿಗೆ ಸಂಬಂಧಿಸಿ ನಡೆದ ಲಿಖಿತ ಪರೀಕ್ಷೆಯಲ್ಲಿ 52 ಮಂದಿ ಅಕ್ರಮ ನಡೆಸಿದ್ದಾರೆ ಎಂದು ದೂರು ದಾಖಲಾಗಿತ್ತು. ಆರೋಪಿಗಳ ವಿರುದ್ಧ ಬೆಂಗಳೂರು ನಗರ, ಕಲಬುರಗಿ, ಹುಬ್ಬಳ್ಳಿ- ಧಾರವಾಡ ನಗರ, ತುಮಕೂರು ನಗರ ಠಾಣೆ ಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಇವರ ವಿರುದ್ಧ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಚಾರ್ಜ್‌ಶೀಟ್ ದಾಖಲಿಸಿದ್ದಾರೆ. ಹೀಗಾಗಿ ಇವರನ್ನು ಮುಂದೆ ಪೊಲೀಸ್ ಇಲಾಖೆ ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಪ್ರಕಟಿಸಿದ್ದಾರೆ.
ಅಭ್ಯರ್ಥಿಗಳು ಲಿಖಿತ ಪರೀಕ್ಷೆ-1ರಲ್ಲಿ ಬ್ಲೂಟೂತ್, ಇತರೆ ಎಲೆಕ್ಟ್ರಾನಿಕ್ ಸಾಧನ ಬಳಸಿ ಅಕ್ರಮ ಎಸಗಿದ್ದರು. ಇದು ಬೆಳಕಿಗೆ ಬರುತ್ತಿದ್ದಂತೆಯೇ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅವರು ನೀಡಿರುವ ಸಮಜಾಯಿಷಿಯಲ್ಲಿ ಸತ್ಯ ಇಲ್ಲದೆ ಇರುವುದು ಗಮನಕ್ಕೆ ಬಂದ ಬಳಿಕ ಪರೀಕ್ಷಾ ಕೊಠಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಕಲು ಮಾಡಿರುವುದನ್ನು ದುರ್ನಡತೆ ಎಂದು ನಿರ್ಧರಿಸಲಾಗಿದೆ ಎಂದು ನೇಮಕಾತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಡಿಬಾರ್ ಆದವರು ಯಾರೆಲ್ಲ?
ಎಸ್. ಜಾಗೃತ್, ಬಿ. ಗಜೇಂದ್ರ, ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ, ಎಚ್.ಯು. ರಘುವೀರ್, ಎಂ.ಸಿ. ಚೇತನ್ಕುಮಾರ್, ಬಿ.ಸಿ. ವೆಂಕಟೇಶ್ ಗೌಡ, ಎ.ಪಿ. ಮನೋಜ್, ಜಿ.ಆರ್. ಮಂಜುನಾಥ್, ಪಿ. ಸಿದ್ದಲಿಂಗಪ್ಪ, ಎಸ್.ಮಮತೇಶ್ ಗೌಡ, ಎಚ್. ಯಶವಂತ್ ಗೌಡ, ಸಿ.ಎಂ. ನಾರಾಯಣ, ಸಿ.ಎಸ್. ನಾಗೇಶ್ ಗೌಡ, ಆರ್. ಮಧು, ಸಿ. ಯಶವಂತ ದೀಪ್, ಸಿ.ಕೆ. ದಿಲೀಪ್ಕುಮಾರ್, ರಚನ ಹಣಮಂತ್, ಜಿ. ಶಿವರಾಜ್, ಸಿ. ಪ್ರವೀಣ್ಕುಮಾರ್, ಕೆ. ಸೂರ್ಯನಾರಾಯಣ, ಸಿ.ಎಂ. ನಾಗರಾಜ್, ಜಿ.ಸಿ. ರಾಘವೇಂದ್ರ, ಬೀರಪ್ಪ ಮೇತಿ, ಎಚ್. ಮೋಹನ್ಕುಮಾರ್, ಎನ್. ದಿಲೀಪ್ಕುಮಾರ್, ದರ್ಶನ್ಗೌಡ, ಲಕ್ಕಪ್ಪ ರಾವುತಪ್ಪ, ಎಚ್.ಬಿ. ಹರೀಶ್, ಜೆ. ಕುಶಾಲ್ ಕುಮಾರ್, ವೀರೇಶ್, ಎನ್. ಚೇತನ್, ಕೆ. ಪ್ರವೀಣ್ಕುಮಾರ್, ಅರುಣ್ಕುಮಾರ್, ವಿಶಾಲ್, ಎಚ್.ವಿ. ಸುನೀಲ್, ಎಚ್.ಎನ್. ದೇಸಾಯಿ, ಶ್ರೀಧರ್, ಶಾಂತಿಬಾಯಿ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ಸುಪ್ರೀಯ ಹುಂಡೆಕರ್, ಪ್ರಭು ಇಟ್ಟಗರ್, ವಿಜಯಕುಮಾರ್ ಪೂಜಾರಿ, ಇಸ್ಮಾಲ್ ಖಾದಿರ್, ಯಶವಂತ ಮಾನೆ, ಎಸ್. ಶರಣಪ್ಪ ಪಾಟೀಲ್, ಬಿ. ಜೋಗೂರ್, ಸೋಮನಾಥ್, ಶ್ರೀಮಂತ ಸತ್ತಾಪುರ್, ರವಿರಾಜ್, ಪೀರಪ್ಪ ಮತ್ತು ಶ್ರೀಶೈಲಾ.
ಹತ್ತು ಮಂದಿ ಕಾನ್ಸ್‌ಟೇಬಲ್‌ಗಳ ಕೆಲಸಕ್ಕೂ ಕುತ್ತು?
ಈಗ ಆರೋಪಿಗಳೆಂದು ಗುರುತಿಸಲ್ಪಟ್ಟು ಈಗ ಎಲ್ಲ ಪರೀಕ್ಷೆಗಳಿಂದ ಡಿಬಾರ್ ಅಗಿರುವ 52 ಮಂದಿಯಲ್ಲಿ ಈಗ ಕಾನ್‌ಸ್ಟೇಬಲ್‌ಗಳಾಗಿರುವ 52 ಮಂದಿ ಕೂಡಾ ಇದ್ದಾರೆ. ಈ ಹತ್ತು ಮಂದಿ 402 ಎಸ್‌ಐ ಹುದ್ದೆಗಳ ನೇಮಕಕ್ಕೂ ಅರ್ಜಿ ಸಲ್ಲಿಸಿದ್ದರು. ಈಗ ಅವರನ್ನು ಈ ಸ್ಪರ್ಧೆಯಿಂದಲೂ ಹೊರ ಹಾಕಲಾಗಿದೆ. ಅವರ ಹುದ್ದೆಗೂ ಕುತ್ತು ಬರುವ ಸಾಧ್ಯತೆ ಕಂಡುಬಂದಿದೆ.
ಉಳಿದವರಿಗೆ ಅದೃಷ್ಟ ಕುದುರುವುದೇ?
ಪಿಎಸ್‌ಐ ಪರೀಕ್ಷೆಯ ವೇಳೆ ಅಕ್ರಮದಲ್ಲಿ ಭಾಗಿಯಾದವರನ್ನು ಡಿಬಾರ್ ಮಾಡಿದ ಬಳಿಕ ಈಗ ಉಳಿದವರ ಕಥೆ ಏನು? ಅವರಲ್ಲಿ ಅರ್ಹತೆಯ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲಾಗುವುದೇ ಎಂಬ ಕುತೂಹಲ ಮೂಡಿದೆ.
ಪಿಎಸ್‌ಐ ಪರೀಕ್ಷೆಯನ್ನು ಮರಳಿ ನಡೆಸಿ ಎಂಬ ಬೇಡಿಕೆ ಒಂದು ಕಡೆ ಇದ್ದರೆ, ಈಗ ನಡೆದಿರುವ ಪರೀಕ್ಷೆಯ ಆಧಾರದಲ್ಲೇ ನೇಮಕಾತಿ ಪಟ್ಟಿ ಪ್ರಕಟಿಸಿ ಎಂಬ ಆಗ್ರಹವೂ ಜೋರಾಗಿದೆ. ಕಳಂಕಿತರನ್ನು ಬಿಟ್ಟು ಉಳಿದವರನ್ನು ನೇಮಕಾತಿಗೆ ಪರಿಗಣಿಸಿ ಅರ್ಹತಾ ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಕೋರಿ ಹೈಕೋರ್ಟ್‌ಗೆ ಮನವಿಯನ್ನೂ ಮಾಡಲಾಗಿತ್ತು. ಅದಕ್ಕೆ ಸಂಬಂಧಿ ಕೋರ್ಟ್ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು.
ಸರ್ಕಾರ ಅಧಿಕೃತ ಅಭಿಪ್ರಾಯವನ್ನು ಇನ್ನಷ್ಟೇ ಹೇಳಬೇಕಾಗಿದೆ. ಆದರೆ, ಕೋರ್ಟ್ ವಿಚಾರಣೆಯ ವೇಳೆ ತನ್ನ ಸ್ವಂತ ಅಭಿಪ್ರಾಯ ಹೇಳಿದ್ದ ಅಡ್ವೊಕೇಟ್ ಜನರಲ್ ಅವರು, ಇಂಥ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ನೀಡಬೇಕಾಗಿರುವುದರಿಂದ ಆ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ಕ್ಯಾನ್ಸಲ್ ಮಾಡುವುದು ಉತ್ತಮ ಎಂದಿದ್ದರು.
ಇದನ್ನೂ ಓದಿ: Senior Citizens: 65 ವರ್ಷ ದಾಟಿದವರಿಗೆ ಡೈರೆಕ್ಟ್ ದೇವರ ಸಾನ್ನಿಧ್ಯ!