ನವ ದೆಹಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ಆರಂಭವಾಗಿರುವ ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನಲ್ಲಿ 5G ಸೇವೆ(5G Service Launch)ಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್ ಬಟನ್ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು. ಏತನ್ಮಧ್ಯೆ, ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲೂ 5ಜಿ ಸೇವೆ ದೊರೆಯಲಿದೆ. ಈ ಮೊದಲು ಬೆಂಗಳೂರು ಆರಂಭದಲ್ಲಿ ಈ ಸೇವೆ ದೊರೆಯುವಿುದಿಲ್ಲ ಎಂದು ಹೇಳಲಾಗುತ್ತಿತ್ತು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಬೆಂಗಳೂರು ಸೇರಿದಂತೆ ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಗೆ ಸಿಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲ ಕಡೆ 5ಜಿ ಸೇವ ದೊರೆಯಲಿದೆ. ಸದ್ಯಕ್ಕೆ ಬೆಂಗಳೂರು, ಚಂಡೀಗಢ, ಅಹ್ಮದಾಬಾದ್, ಗಾಂಧಿನಗರ, ಗುರುಗ್ರಾಮ್, ಹೈದ್ರಾಬಾದ್, ಜಾಮನಗರ್, ಚೆನ್ನೈ, ದಿಲ್ಲಿ, ಕೋಲ್ಕೊತಾ, ಮುಂಬೈ, ಪುಣೆ ಮತ್ತು ಲಖನೌ ನಗರಗಲ್ಲಿ 5ಜಿ ಸೇವೆ ದೊರೆಯಲಿದೆ.
ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಕಂಪನಿಗಳು ಈ 5ಜಿ ಸೇವೆಯನ್ನು ಒದಗಿಸಲಿವೆ. ಈಗಾಗಲೇ ಈ ಬಗ್ಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈ ಕಂಪನಿಗಳು ಮಾಡಿಕೊಂಡಿವೆ.
ಹೊಸ ಯುಗ ಆರಂಭ- ಮೋದಿ
5ಜಿ ಸಂಪರ್ಕದೊಂದಿಗೆ, ದೇಶದಲ್ಲಿ ಆಧುನಿಕತೆಯ ಹೊಸ ಯುಗವೊಂದು ಆರಂಭವಾಗಲಿದೆ. ಯುವಜನತೆಗೆ ನೂತನ ಅವಕಾಶಗಳು ತೆರೆದುಕೊಳ್ಳಲಿವೆ. ಶಕ್ತಿದೇವತೆಯನ್ನು ಪೂಜಿಸುವ ನವರಾತ್ರಿಯ ಶುಭಪರ್ವದ ಸಂದರ್ಭದಲ್ಲಿ ಶಕ್ತಿಯ ಇನ್ನೊಂದು ಮಾಧ್ಯಮವೆನಿಸಿದ 5G ದೇಶದ ಜನತೆಗೆ ಅರ್ಪಿಸುವುದಕ್ಕೆ ನನಗೆ ಆನಂದವೆನಿಸುತ್ತದೆ. ಇದೊಂದು ಐತಿಹಾಸಿಕ ದಿನ, ಕ್ಷಣ. ಭಾರತದ ಇದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ಜಗತ್ತಿಗೇ ಮಾದರಿಯನ್ನು ಕಲ್ಪಿಸಲಿದೆ ಎಂದು ನರೇಂದ್ರ ಮೋದಿ ಅವರು 5ಜಿ ಸೇವೆಯನ್ನು ಉದ್ಘಾಟಿಸಿ ಹೇಳಿದರು.
ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್ ಒದಗಿಸಿದಂತೆ ವಿದ್ಯುತ್ ಅವಲಂಬಿಸಿ ಮಾಡಬಹುದಾದ ಕೆಲಸಗಳು ಹಾಗೂ ಉಪಕರಣಗಳ ಮಾರುಕಟ್ಟೆಯೂ ವರ್ಧಿಸಿತು. ಹಾಗೆಯೇ 5G ಅವಂಬಿಸಿಯೂ ಜೀವನಶೈಲಿಯಲ್ಲಿ ದೊಡ್ಡ ಮಾರ್ಪಾಡು ಆಗಲಿದೆ. 5G ಎಂದರೆ ಕೇವಲ ಮನರಂಜನೆಯ ಹೆಚ್ಚಳ ಮಾತ್ರ ಆಗುವುದಿಲ್ಲ. ಅದು ಬಡವರೂ ಸೇರಿದಂತೆ ಎಲ್ಲ ವಲಯದ ಜೀವನವನ್ನು ಸುಧಾರಿಸಲಿದೆ. ನಾವು ನೇರ ಪಾವತಿ ಕಾರ್ಯಕ್ರಮವನ್ನು ಆರಂಭಿಸಿದಾಗ ತುಂಬಾ ಮಂದಿ ಅದರ ಪರಿಣಾಮಕಾರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜಗತ್ತಿನ ಬೇರೆ ಬೇರೆ ಮುಂದುವರಿದ ದೇಶಗಳು ಕೂಡ ಇದನ್ನು ಒದಗಿಸುವಲ್ಲಿ ಸೋತಿದ್ದವು. ಆದರೆ ಭಾರತ ಅದನ್ನು ಒಂದೇ ಕ್ಲಿಕ್‌ನಲ್ಲಿ ಸಾಧಿಸಬಹುದು ಎಂಬುದನ್ನು ತೋರಿಸಿತು. 5G ವಿಷಯದಲ್ಲೂ ಹೀಗೇ ಆಗಲಿದೆ ಎಂದರು.
ಇಂದು ನಾವು ಆತ್ಮನಿರ್ಭರ ಭಾರತ, ಡಿಜಿಟಲ್ ಭಾರತ ಆಗಿದ್ದೇವೆ. ಸರ್ಕಾರ ಸರಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು ಎಂದು ತೋರಿಸಿದ್ದೇವೆ. ಇದೇ 2G ನಿಯತ್ತಿಗೂ 5G ನಿಯತ್ತಿಗೂ ಇರುವ ವ್ಯತ್ಯಾಸ ಎಂದು ಪ್ರಧಾನಿ ಯುಪಿಎ ಸರ್ಕಾರದ ʻ2G ಹಗರಣʼಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ | 5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್ ಕ್ರಾಂತಿ? ಏನಿದರ ಅನುಕೂಲ?