ಬೆಂಗಳೂರು: ತಮಗೆ ಇಷ್ಟವಾಗದ ರಾಜಕೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದು, ಸುದ್ದಿಗೋಷ್ಠಿ ಮಾಡುವುದು, ಪ್ರತಿಕೃತಿ ಮಾಡುವುದು ನಡೆಯುತ್ತದೆ. ಆದರೆ ಡಿಜಿಟಲ್ ಕಾಲದಲ್ಲಿ ಇಂತಹ ರಾಜಕಾರಣಿಗಳ ತಿಥಿ ಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಅಭ್ಯಾಸವನ್ನು ಕೆಲವರು ಮಾಡಿಕೊಂಡಿದ್ದಾರೆ. ಇದೀಗ ಆರು ವರ್ಷದ ನಂತರ ರಾಜ್ಯ ರಾಜಕೀಯದಲ್ಲಿ ಅಂತಹದ್ದೇ ಅಭ್ಯಾಸ ಮತ್ತೆ ಶುರುವಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬದಲಿಗೆ ಬಿಜೆಪಿ ಶಾಸಕ ಲೆಹರ್‌ಸಿಂಗ್‌ಸ ಇತೋಯಾ ಅವರಿಗೆ ಮತ ನೀಡಿದ್ದಾರೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಇದೀಗ ಶ್ರೀನಿವಾಸ್ ಅವರ ಹೆಸರಿನಲ್ಲಿ ತಿಥಿ ಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಾಲೆಳೆಯುತ್ತಿದ್ದಾರೆ. ಈ ರೀತಿ ಮಾಡುವುದು ತಪ್ಪು ಎಂದೂ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ | ಎಚ್ಡಿಕೆಗೆ ತಾಕತ್ತಿದ್ರೆ ಗುಬ್ಬಿಯಲ್ಲಿ ಗೆದ್ದು ತೋರಿಸಲಿ : ಶಾಸಕ ಎಸ್.ಆರ್.ಶ್ರೀನಿವಾಸ್ ಓಪನ್ ಚಾಲೆಂಜ್
ಚೆಲುವರಾಯಸ್ವಾಮಿ ಹಾಗೂ ಬಂಡಿಸಿದ್ದೇಗೌಡ
ಇದಕ್ಕೂ ಮುನ್ನವೂ ಕರ್ನಾಟಕದಲ್ಲಿ ತಿಥಿಕಾರ್ಡ್ ರಾಜಕೀಯ ನಡೆದಿತ್ತು. 2016ರಲ್ಲಿ ಇದೇ ನಾಲ್ಕು ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ ನಡೆದಿತ್ತು,. ಆಗ ಜೆಡಿಎಸ್ ವತಿಯಿಂದ ಮುಸ್ಲಿಂ ಅಭ್ಯರ್ಥಿ ಬಿ.ಎಂ. ಫಾರೂಖ್ ಅವರನ್ನು ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್‌ನಿಂದ ಕೆ.ಸಿ. ರಾಮಮೂರ್ತಿ ಅಭ್ಯರ್ಥಿಯಾಗಿದ್ದರು. ಜೆಡಿಎಸ್‌ನ ಎಂಟು ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ್ದರು. ಇದರಿಂದಾಗಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರು.
ಇದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಸಿಟ್ಟಾಗಿದ್ದರು. ಮುಖ್ಯವಾಗಿ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಹಾಗೂ ಶ್ರೀರಂಗಪಟ್ಟಣ ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರಿನಲ್ಲಿ ತಿಥಿಕಾರ್ಡ್ ರೂಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉತ್ತರಕ್ರಿಯಾದಿ ಭೂಶಾಂತಿ ನೆರವೇರಿಸಲಾಗುತ್ತದೆ ಎಂದು ಅದರಲ್ಲಿ ಬರೆದಿತ್ತು. ಅಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರನ್ನೂ ಸೋಲಿಸುತ್ತೇವೆ ಎಂದು ಪರೋಕ್ಷವಾಗಿ ಈ ಮೂಲಕ ಹೇಳಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಸೋಲು ಕಂಡಿದ್ದರು.
ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಂ ಅಭುರ್ಥಿ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿತ್ತು. ಅವರಿಗೇ ಎಲ್ಲ ಜೆಡಿಎಸ್ ಶಾಸಕರೂ ಹೆಚ್ಚುವರಿ ಮತಗಳನ್ನು ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದರು. ಅದಕ್ಕೆ ತಕ್ಕಂತೆ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್‌ಗೆ ಮತ ನೀಡಿದ್ದರು. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ್ದರು.
ಇದೀಗ ಎಸ್.ಆರ್. ಶ್ರೀನಿವಾಸ್ ವಿರುದ್ಧವೂ ತಿಥಿ ಕಾರ್ಡ್ ಆಕ್ರೋಶ ವ್ಯಕ್ತವಾಗುತ್ತಿದೆ. ಎಸ್.ಆರ್. ಶ್ರೀನಿವಾಸ್ ಅವರ ಕೈಲಾಸ ಸಮಾರಾಧನೆಯನ್ನು ಜೂನ್ 21ರಂದು ಅಂದರೆ ರಾಜ್ಯಸಭೆ ಚುನಾವಣೆ ನಡೆದು 11ನೇ ದಿನಕ್ಕೆ ಏರ್ಪಡಿಸಲಾಗಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋಲಾರ ಶಾಸಕ ಶ್ರೀನಿವಾಸ್ ಗೌಡ ವಿರುದ್ಧವೂ ಇಂತಹದ್ದೇ ಕಾರ್ಡ್ ಹರಿದಾಡುತ್ತಿದೆ ಎನ್ನಲಾಗಿದೆ. ಆದರೆ, ಬದುಕಿರುವವರ ಕುರಿತು ಈ ರೀತಿ ಕಾರ್ಡ್ ಮಾಡುವುದು ಅತ್ಯಂತ ಕೀಳು ಅಭಿರುಚಿ ಎಂಬ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | 2ರ ಜತೆಗೆ ಮತ್ತೊಂದು ಗೆದ್ದ ಬಿಜೆಪಿ: JDS ಕೈತಪ್ಪಿದ 2 ಶಾಸಕರು
ಸಿದ್ದರಾಮಯ್ಯ ವಿರುದ್ಧವೂ ಕಾರ್ಡ್
ತಿಥಿ ಕಾರ್ಡ್ ಮುದ್ರಣ 2017ರಲ್ಲೂ ನಡೆದಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಮದ್ದೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ವಿಸಿ ನಾಲೆಗೆ ನೀರು ಹರಿಸಿ ಜಿಲ್ಲೆಯ ಕೆರೆಕಟ್ಟೆ ತುಂಬಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ 24 ದಿನಗಳಿಂದ ಹೋರಾಟ ನಡೆಸುತ್ತಿತ್ತು. ಈ ಅಹೋರಾತ್ರಿ ಧರಣಿಗೆ ಸರ್ಕಾರ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ವಿಭಿನ್ನ ಪ್ರತಿಭಟನೆಯಿಂದ ಸೆಳೆಯುವ ತಂತ್ರಕ್ಕೆ ಮುಂದಾಗಿದ್ದರು. ಅಣಕು ಉತ್ತರ ಕ್ರಿಯಾದಿ ಭೂ ಶಾಂತಿ ಆಹ್ವಾನ ಪತ್ರಿಕೆ ಕಾರ್ಡ್‌ನಲ್ಲಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಭಾವಚಿತ್ರ ಸಹಿತ ಪ್ರಕಟಿಸಿದ್ದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | 2ರ ಜತೆಗೆ ಮತ್ತೊಂದು ಗೆದ್ದ ಬಿಜೆಪಿ: JDS ಕೈತಪ್ಪಿದ 2 ಶಾಸಕರು