Site icon Vistara News

Gadag News: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನಿಸಿದ 6 ಮಂದಿ ಬಂಧನ

Gadag Shahara police Station

ಗದಗ: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಕಬಳಿಕೆಗೆ ಯತ್ನ ಪ್ರಕರಣದ 8 ಆರೋಪಿಗಳಲ್ಲಿ 6 ಮಂದಿಯನ್ನು ಗದಗ (Gadag News) ಶಹರ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಕಿಂಗ್ ಪಿನ್‌ಗಳಿಗಾಗಿ ಶೋಧ ನಡೆಸಲಾಗುತ್ತಿದೆ. ವ್ಯಕ್ತಿಯೊಬ್ಬರ 20 ಎಕರೆ 34 ಗುಂಟೆ ಆಸ್ತಿ ಕಬಳಿಕೆಗೆ ಯತ್ನಿಸಿದ ಆರೋಪದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ.

ಈ ಬಗ್ಗೆ ಗದಗ ಎಸ್‌ಪಿ ಬಿ.ಎಸ್.ನೇಮಗೌಡ ಪ್ರತಿಕ್ರಿಯಿಸಿ, ಶ್ರೀಧರದಾಸ್ ದೇವಿದಾಸ್ ಸಾಹುಕಾರ ಎಂಬುವವರ 20 ಎಕರೆ 34 ಗುಂಟೆ ಆಸ್ತಿ ಕಬಳಿಕೆಗೆ ಆರೋಪಿಗಳಿಗೆ ಯತ್ನಿಸಿದ್ದಾರೆ. ಗದಗ ಹೊಸ ಡಿಸಿ ಕಚೇರಿ ಹಿಂಭಾಗದಲ್ಲಿರುವ ಭೂಮಿಯನ್ನು ನಕಲಿ ಆಧಾರ್ ಕಾರ್ಡ್‌ ಸೃಷ್ಟಿಸಿ ತಮ್ಮದೇ ಜಮೀನು ಎನ್ನುವಂತೆ ಆರೋಪಿಗಳು ಯತ್ನಿಸಿದ್ದರು. ಗದಗ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು. ಸದ್ಯ ಆಸ್ತಿ ಮಾಲೀಕರಿಂದ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುವುದನ್ನು ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Assault Case: ಮಹಿಳೆ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಸೈಕೋ ಜಿಮ್‌ ಟ್ರೈನರ್‌

ಕೃಷ್ಣಗೌಡ ಮಲ್ಲನಗೌಡ ಪಾಟೀಲ ಹಾಗೂ ಬಸವರಾಜ ಸೋಮಪ್ಪ ಮೇಲ್ಮನಿ ಎಂಬುವವರು ಪ್ರಕರಣದ ಕಿಂಗಪಿನ್ ಆರೋಪಿಗಳಾಗಿದ್ದಾರೆ. ಇವರಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಒಟ್ಟು ಎಂಟು ಜನರಲ್ಲಿ ಆರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಇದ್ದಾರೆ ಎಂದು ಹೇಳಿದ್ದಾರೆ.

ದಾಖಲೆಯಲ್ಲಿ ಜಮೀನಿನ ಮೂಲ‌ ಮಾಲೀಕರ‌ ಹೆಸರು ಮಾತ್ರ ಇರುತ್ತದೆ. ಆದರೆ, ಫೋಟೊ ಬದಲಿಸಿ ನೋಂದಣಿಗೆ ಪ್ರಯತ್ನ ನಡೆಸಲಾಗಿದೆ. ಈ ರೀತಿಯ ಪ್ರಕರಣ ಇದೇ ಮೊದಲೇ‌ನಲ್ಲ. ಗದಗ ಹಾಗೂ ಲಕ್ಕುಂಡಿ ಗ್ರಾಮದಲ್ಲಿ ಇದೇ ರೀತಿಯ ಪ್ರಕರಣ ಪತ್ತೆಯಾಗಿದ್ದವು. ಸದ್ಯ ಈ ಹಿಂದಿನ ಇಂತಹ ಪ್ರಕರಣಗಳನ್ನೂ ಪರಿಗಣಿಸಲಾಗುವುದು. ಆ ಪ್ರಕರಣಗಳಲ್ಲಿ ಆರೋಪಿತರು ಬೇಲ್ ತೆಗೆದುಕೊಂಡಿದ್ದರೆ ಅದನ್ನೂ ರದ್ದುಪಡಿಸಲಾಗುವುದು. ಪ್ರಕರಣವನ್ನು ಗಂಭೀರ‌ವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಭೇದಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Murder Case : ಆಸ್ತಿಗಾಗಿ ಹೆಂಡ್ತಿ ಜತೆಗೂಡಿ ಅಮ್ಮನನ್ನೇ ಕೊಂದು ಬಿಟ್ಟ ನೀಚ!

ಹಿಂದಿನ ಪ್ರಕರಣಗಳಲ್ಲಿ ಆರೋಪಿತರು ಬೇಲ್ ತೆಗೆದುಕೊಂಡು, ಇದೀಗ ಮತ್ತೊಮ್ಮೆ ಅಪರಾಧ ಮಾಡಿದ್ದರೆ ಅಂತಹವರ ಜಾಮೀನು ರದ್ದು ಮಾಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Exit mobile version