ಮೈಸೂರು: ಮೈಸೂರು ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 64 ಚಿರತೆಗಳನ್ನು ಸೆರೆ (Leopard trapped) ಹಿಡಿಯಲಾಗಿದೆ ಎಂದು ಮೈಸೂರು ಡಿಸಿಎಫ್ ಡಾ ಬಸವರಾಜು ಹೇಳಿಕೆ ನೀಡಿದ್ದಾರೆ. ಜನವರಿ ತಿಂಗಳಲ್ಲೇ 4 ಚಿರತೆಗಳು ಬೋನಿಗೆ ಬಿದ್ದಿವೆ. ಹಾಗಿದ್ದರೆ ಈ ಭಾಗದಲ್ಲಿ ಜನರಿಗೆ ಸಮಸ್ಯೆ ತಂದೊಡ್ಡುವ ಇನ್ನೆಷ್ಟು ಚಿರತೆಗಳು ಇರಬಹುದು ಎನ್ನುವ ಪ್ರಶ್ನೆ ಎದುರಾಗಿದೆ.
ಮಾನವ ಮತ್ತು ವನ್ಯಜೀವಿ ಸಂಘರ್ಷದ ಕುರಿತು ಮಾತನಾಡಿದ ಬಸವರಾಜು ಅವರು, ಇತ್ತೀಚೆಗೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ವನ್ಯಜೀವಿ ದಾಳಿಗೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಮೂವರನ್ನು ಕೊಂದು ಹಾಕಿದ್ದರೆ, ಒಬ್ಬ ಬಾಲಕನ ರುಂಡವನ್ನು ತಿಂದಿದೆ. ಚಿರತೆಗಳು ಸಾಮಾನ್ಯವಾಗಿ ರುಂಡವನ್ನು ತಿನ್ನುವುದಿಲ್ಲ. ಹಾಗಾಗಿ ಇದು ಅಪರೂಪದ ಪ್ರಕರಣವಾಗಿದೆ. ನಾಲ್ವರ ಸಾವಿಗೆ ಸಂಬಂಧಿಸಿದ ವರದಿ ಸದ್ಯದಲ್ಲೇ ಬರಲಿದೆ. ಆಗ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.
ಹಿಡಿದ ಚಿರತೆಗಳನ್ನು ಏನ್ಮಾಡ್ತಾರೆ?
ಸೆರೆ ಹಿಡಿದ ಚಿರತೆಗಳ ಕಿವಿಯನ್ನು ವಿ ಆಕಾರದಲ್ಲಿ ಕತ್ತರಿಸಿ, ಮೈಕ್ರೋ ಚಿಪ್ ಅಳವಡಿಸಿ ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತಿದೆ ಎಂದು ಬಸವರಾಜು ತಿಳಿಸಿದರು. ಚಿರತೆ ದಾಳಿಯ ಬಗ್ಗೆ ತಿ.ನರಸೀಪುರ ತಾಲೂಕಿನ ಬನ್ನೂರು ಮತ್ತು ಸೋಸಲೆ ಹೋಬಳಿ ಭಾಗದಲ್ಲಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ʻʻಸದ್ಯಕ್ಕೆ ನಮ್ಮಲ್ಲಿ 20 ಬೋನುಗಳು ಇದ್ದು, ಸದ್ಯದಲ್ಲೇ 30 ಬೋನುಗಳನ್ನು ತರಿಸಲಾಗುತ್ತದೆ. ಚಿರತೆ ಕಾರ್ಯಪಡೆಗೆ ಗುತ್ತಿಗೆ ಆಧಾರದಡಿ ನೌಕರರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಚಿರತೆ ಕಾರ್ಯಪಡೆ ಕಾರ್ಯಾಚರಣೆ ಆರಂಭಿಸಲಿದೆʼʼ ಎಂದು ಡಿಸಿಎಫ್ ಡಾ. ಬಸವರಾಜು ಹೇಳಿದರು.
ಇದನ್ನು ಓದಿ : Protection of leopard : ಮಂಡ್ಯದಲ್ಲಿ ಬಂಡೆಯಡಿ ಸಿಲುಕಿದ್ದ 2 ಚಿರತೆ ಮರಿಗಳ ರಕ್ಷಣೆ, 6 ಮರಿಗಳು ನಾಪತ್ತೆ