ಬೆಂಗಳೂರು: ನಗರದ ಹೃದಯಭಾಗದಲ್ಲಿ ವಾಸಿಸುವ ಹಾಗೂ ಈ ಭಾಗದಲ್ಲಿ ಸಂಚರಿಸುವವರಿಗೆ ಮತ್ತಷ್ಟು ದಿನ ವಾಹನ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಶಿಕ್ಷೆ ಅನಿವಾರ್ಯವಾಗಲಿದೆ. ಈಗಾಗಲೆ ಶೇಷಾದ್ರಿಪುರ, ಮಲ್ಲೇಶ್ವರ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದೀಗ ಶೇಷಾದ್ರಿ ರಸ್ತೆ ಕೂಡ ಬಂದ್ ಆಗಲಿದೆ.
ಕ.ವಿ. ಸುಬ್ಬಣ್ಣ ವೃತ್ತದಿಂದ ಕೆ.ಆರ್. ವೃತ್ತದವರೆಗೆ 1.4 ಕಿ.ಮೀ. ಉದ್ದದ ಶೇಷಾದ್ರಿ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿಗಾಗಿ ಬರೊಬ್ಬರಿ ಮೂರು ತಿಂಗಳು ಬಂದ್ ಮಾಡಲಾಗುತ್ತದೆ. 15 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಒಟ್ಟು ಐದು ಹಂತಗಳಲ್ಲಿಕೈಗೊಂಡು ನಡೆಸಿ ಅದಕ್ಕೆ ಅನುಗುಣವಾಗಿ ಸಮೀಪದ ಅರಮನೆ ರಸ್ತೆ, ಕೆಂಪೇಗೌಡ ರಸ್ತೆ, ಗಾಂಧಿನಗರ ಮುಖ್ಯರಸ್ತೆಗಳ ಮೂಲಕ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ವ್ಯಾಪಾರಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹಬ್ಬ ಮುಗಿದ ಎರಡು ದಿನದ ನಂತರ ಅಂದರೆ ಏಪ್ರಿಲ್ 4 ರಿಂದಲೇ ಕಾಮಗಾರಿ ಆರಂಭವಾಗಲಿದೆ. ಮೂರು ತಿಂಗಳಲ್ಲಿ ನಿರೀಕ್ಷೆಯಂತೆ ಕಾಮಗಾರಿ ಮುಕ್ತಾಯಗೊಂಡರೆ ಸರಿ, ಆದರೆ ಇತರೆ ಯೋಜನೆಗಳಂತೆ ವಿಳಂಬವಾದರೆ ಮತ್ತಷ್ಟು ದಿನ ವಾಹನ ಸಂಚಾರರಿಗೆ ಕಿರಿಕಿರಿ ತಪ್ಪಿದ್ದಲ್ಲ.
ಸಕಾಲಕ್ಕೆ ಮುಗಿಯದ ಕಾಮಗಾರಿಗಳು
ಕಳೆದ ವರ್ಷದ ಅಂತ್ಯದಲ್ಲಿ ನೆಲಮಂಗಲ ಮೇಲುಸೇತುವೆಯ ಎರಡು ಕಂಬಗಳ ಬಳಿ ಸಮಸ್ಯೆಯಾಗಿ ದುರಸ್ತಿಗಾಗಿ ಬಂದ್ ಮಾಡಲಾಗಿತ್ತು. ಆದರೆ ಸಮಸ್ಯೆಯನ್ನು ಸರಿಪಡಿಸಲಾಗದೆ ವಿಳಂಬವಾಯಿತು. ಸದ್ಯಕ್ಕೆ ದುರಸ್ತಿ ಸಾಧ್ಯವಿಲ್ಲವೆಂದು ಲಘು ವಾಹನಗಳಷ್ಟೆ ಸಂಚರಿಸಲು ಅವಕಾಶ ನೀಡಲಾಗಿದೆ. ಭಾರಿ ವಾಹನಗಳ ಸಂಚಾರದಿಂದ ಕೆಳಗಿನ ರಸ್ತೆ ಈಗಾಗಲೆ ಹೆಚ್ಚು ಒತ್ತಡಕ್ಕೆ ಒಳಗಾಗಿದೆ.
ಇನ್ನು ಕಳೆದ ವರ್ಷದಿಂದ ನಡೆಯುತ್ತಿರುವ ಶೇಷಾದ್ರಿಪುರ ಸುತ್ತಮುತ್ತ ವೈಟ್ ಟಾಪಿಂಗ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೆಲ್ಲದರ ಜತೆಗೆ ಶಿವರಾತ್ರಿ ನಂತರದಲ್ಲಿ ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲೂ ವೈಟ್ ಟಾಪಿಂಗ್‌ಗಾಗಿ ಸಂಚಾರ ವ್ಯವಸ್ಥೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಶೇಷಾದ್ರಿ ರಸ್ತೆಯಲ್ಲೂ ಕಾಮಗಾರಿ ಆರಂಭವಾದರೆ ಇಡೀ ಕೇಂದ್ರ ಬೆಂಗಳೂರಿನ ವಾಹನ ಸಂಚಾರ, ವ್ಯಾಪಾ, ಉದ್ಯಮದ ಮೇಲೆ ಪರಿಣಾಮ ಬೀರುವುದು ನಿಶ್ಚಿತವಾಗಿದೆ.