Site icon Vistara News

ಮಣಿಪಾಲ್ ಮ್ಯಾರಥಾನ್‌ 2024: ದಾಖಲೆಯ 15 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ

6th edition of the prestigious Manipal Marathon on Feb 11, 2024

ಬೆಂಗಳೂರು: ಮಣಿಪಾಲ್‌ ಅಕಾಡೆಮಿ ಹೈಯರ್ ಎಜುಕೇಶನ್‌ [ಮಾಹೆ] ಪ್ರತಿಷ್ಠಿತ ಮಣಿಪಾಲ್‌ ಮ್ಯಾರಥಾನ್‌ (Manipal Marathon) 6ನೇಯ ಆವೃತ್ತಿಗೆ ನೋಂದಣಿಯನ್ನು ಆರಂಭಿಸುತ್ತಿದೆ. ಭಾರತದಲ್ಲಿ ವಿದ್ಯಾರ್ಥಿ- ಆಯೋಜಿತ ಅಥ್ಲೆಟಿಕ್ಸ್‌ನಲ್ಲಿ ಅತ್ಯಂತ ಬೃಹತ್‌ ಎಂಬ ಖ್ಯಾತಿಗೆ ಪಾತ್ರವಾದ ಮಣಿಪಾಲ್‌ ಮ್ಯಾರಥಾನ್‌ ಉಡುಪಿ ಜಿಲ್ಲೆಯ (Udupi District) ಮಣಿಪಾಲವೆಂಬ ಸುಂದರವಾದ ಪಟ್ಟಣದಲ್ಲಿ (Manipal Town) ನಡೆಯತ್ತಿದೆ.

ಈ ವರ್ಷದ ಮ್ಯಾರಥಾನ್‌ ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗಿಲ್ಲ; ಓಟಗಾರರ ಪರಸ್ಪರ ಸೌಹಾರ್ದ ಸಂಬಂಧ ಏರ್ಪಡುವುದಕ್ಕಷ್ಟೇ ಮೀಸಲಾಗಿಲ್ಲ. ಇದು ‘ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಆರೈಕೆಯ ವಿಶ್ರಾಂತಿಗೃಹದ [ಹಾಸ್ಪೈಸ್‌ ಕೇರ್‌] ಕುರಿತ ಅರಿವನ್ನು ಸಮಾಜದಲ್ಲಿ ಮೂಡಿಸುವ ಆಶಯವನ್ನು ಹೊಂದಿದೆ. ಈ ಸಲದ ಘೋಷವಾಕ್ಯವು, “ನಾವು ನಿಮ್ಮೊಂದಿಗೆ ಸದಾ ಇದ್ದೇವೆ” ಎಂಬುದಾಗಿದೆ. ಕಳೆದ ಕೆಲವು ವರ್ಷಗಳಿಂದ ಮಣಿಪಾಲ್‌ ಮ್ಯಾರಥಾನ್‌ ಸುಮಾರು 10 ಸಾವಿರ ಓಟಗಾರರನ್ನು ಒಳಗೊಂಡು ಹೆಸರು ಮಾಡಿತ್ತು. ಈ ಸಲ ಸುಮಾರು 15 ಸಾವಿರ ಓಟಗಾರರನ್ನು ಒಳಗೊಳ್ಳುವ ಗುರಿಯನ್ನು ಹೊಂದಲಾಗಿದ್ದು ಭಾರತದ ಮತ್ತು ಜಗತ್ತಿನ ವಿವಿಧೆಡೆಗಳಿಂದ ಜನರು ಭಾಗಿಗಳಾಗುವ ನಿರೀಕ್ಷೆಯಿದೆ. ಉದಾರ ಆಶಯವುಳ್ಳ ಭಾರತದ ವಿಶಿಷ್ಟ ಮ್ಯಾರಥಾನ್‌ ಆಗಿ ಇದನ್ನು ದಾಖಲಿಸುವ ಮಹತ್ತರ ಉದ್ದೇಶವನ್ನು ಹೊಂದಲಾಗಿದೆ.

ಮ್ಯಾರಥಾನ್‌ನ ವಿವರಗಳು

ದಿನಾಂಕ : 11 ಫೆಬ್ರವರಿ 2024
ಸಮಯ : ಬೆಳಿಗ್ಗೆ 5 ಗಂಟೆಯ ಬಳಿಕ
ಸ್ಥಳ : ಮಣಿಪಾಲ, ಉಡುಪಿ ಜಿಲ್ಲೆ
ನೋಂದಣಿ : ಈಗ ಆರಂಭವಾಗಿದೆ. [https://manipalmarathon.in/]

ಮ್ಯಾರಥಾನ್‌ನ ವಿಶೇಷಗಳು

ಓಟದ ನಿಗದಿತ ಪಥವು ಮಣಿಪಾಲದ ನಿಸರ್ಗ, ಉಡುಪಿ ಕರಾವಳಿಯ ಮೂಲಕ ಸಾಗಲಿದ್ದು ಇದು ಈ ಸಲದ ಆಕರ್ಷಣೆ.
ಜಾಗತಿಕ ಮಟ್ಟದ ಓಟದ ಅನುಭವವನ್ನು ಖಾತರಿ ಪಡಿಸುವ ಐಐಎಎಫ್‌ ಎಐಎಂಎಸ್‌ನಿಂದ ಅಂತರಾಷ್ಟ್ರೀಯ ದೃಢೀಕರಣ
ಓಟದ ಬಳಿಕ ಉತ್ಸವದ ಮೂಲಕ ಸಾಮುದಾಯಿಕ ಚೈತನ್ಯದ ಸಂಭ್ರಮ.
ವಿಭಿನ್ನ ವಿಭಾಗಗಳನ್ನು ಪೂರ್ಣಗೊಳಿಸಿದವರಿಗೆ ಆಕರ್ಷಕ ಮೊತ್ತದ ಬಹುಮಾನ.

ಮ್ಯಾರಥಾನ್‌ನ 6 ನೆಯ ಆವೃತ್ತಿಯು ಉಡುಪಿ ಜಿಲ್ಲೆಯ ಅಥ್ಲೆಟಿಕ್‌ ಅಸೋಸಿಯೇಶನ್‌ ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದು ಒಂದು ಸ್ಪರ್ಧೆ ಎಂಬುದಕ್ಕಿಂತ ಆಂದೋಲನವಾಗಿ ಇದನ್ನು ಬಿಂಬಿಸಲಾಗುತ್ತದೆ. ಇಲ್ಲಿ ಹಾಕುವ ಪ್ರತಿ ಹೆಜ್ಜೆಯೂ ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಆರೈಕೆಯ ವಿಶ್ರಾಂತಿ ಗೃಹದ ಪರವಾದ ನಡೆಯಾಗಿದೆ ಮತ್ತು ಸವಾಲಿನ ಬದುಕು ನಡೆಸುತ್ತಿರುವ ರೋಗಿಗಳಿಗೆ ಸಮಾಧಾನ ಮತ್ತು ಘನತೆ ಒದಗಿಸುವ ಆಶಯವನ್ನು ಹೊಂದಿದೆ.

ಮಣಿಪಾಲ್‌ ಮ್ಯಾರಥಾನ್‌ ಕೇವಲ ನಿಟ್ಟೋಟವಲ್ಲ, ಅದು ಏಕತೆ, ಜಾಗೃತಿ ಮತ್ತು ನಿರಂತರವಾದ ಮಾನವ ಚೈತನ್ಯದ ಸಂದೇಶವಾಗಿದೆ. ಓಟದಲ್ಲಿ ಭಾಗಿಗಳಾಗುವವರು ತಮ್ಮ ಶೂಗಳನ್ನು ಧರಿಸುವ ಕ್ಷಣದಲ್ಲಿಯೇ ಅವರು ಮಾನವೀಯ ಪರವಾದ ಸಂದೇಶವನ್ನು ಸಾರಲು ಅಣಿಯಾಗಲಿದ್ದಾರೆ. ಓಡುವಾಗ ಅವರ ಎದೆಬಡಿತದ ಸದ್ದು ಹಾಸ್ಪೈಸ್‌ ಕೇರ್‌ನ ಸಂದೇಶದ ಪ್ರತಿಧ್ವನಿಯಾಗಲಿದೆ.

ಅನುಭವಿ ಅಥ್ಲೆಟ್‌ಗಳಿಂದ ತೊಡಗಿ ಉತ್ಸಾಹಿ ಆರಂಭಿಕ ಓಟಗಾರರವರೆಗೆ ಎಲ್ಲ ವಿಭಾಗದ ಮಂದಿಗೆ ಇಲ್ಲಿ ಅವಕಾಶವಿದ್ದು ‘ಮಾನವೀಯ’ ಭಾವವು ಎಲ್ಲರನ್ನೂ ಜೊತೆಸೇರಿಸಲಿದೆ.

ಮ್ಯಾರಥಾನ್‌ -2024 ಯನ್ನು ಕ್ರೀಡೆಯಾಗಿ ಮತ್ತು ಸಾಮಾಜಿಕ ಜಾಗೃತಿಯ ಸಂದೇಶವಾಗಿ ಚರಿತ್ರಾರ್ಹ ಘಟನೆಯಾಗಿಸುವುದಕ್ಕೆ ಎಲ್ಲರೂ ಕೆಜೋಡಿಸಿ. ಪರಿವರ್ತನೆಯ ಪಾಲುದಾರರಾಗಿ, ಸವಾಲುಗಳನ್ನು ಎದುರಿಸೋಣ, ಸಮಸ್ತ ಸಮುದಾಯದ ಭಾಗವಾಗೋಣ. ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ.

ಈ ಸುದ್ದಿಯನ್ನೂ ಓದಿ: Ballari News: ಕಾರ್ಗಿಲ್‌ನಲ್ಲಿ 42 ಕಿ.ಮೀ ಮ್ಯಾರಥಾನ್ ಓಟ ನಡೆಸಿ ಜಾಗೃತಿ ಮೂಡಿಸಿದ ಕನ್ನಡಿಗ ಮೋಹನ್ ಕುಮಾರ್ ದಾನಪ್ಪ

Exit mobile version