ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 74 ಜನರಲ್ಲಿ ಕೊರೊನಾ ಸೋಂಕು (Corona Virus News) ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ ಒಬ್ಬೊಬ್ಬರು ಬಲಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ.
ಮಂಗಳವಾರ 6403 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, 74 ಮಂದಿಗೆ ಪಾಸಿಟಿವ್ ಬಂದಿದೆ. ಇನ್ನು ಕಳೆದ 24 ಗಂಟೆಯಲ್ಲಿ 44 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 74 ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 57, ಬೆಂಗಳೂರು ಗ್ರಾಮಾಂತರ 4, ಚಾಮರಾಜನಗರ 1, ಚಿಕ್ಕಬಳ್ಳಾಪುರ 3, ಹಾಸನ 4, ಮಂಡ್ಯ 2, ಮೈಸೂರು 2, ವಿಜಯನಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ.
464 ಸಕ್ರಿಯ ಪ್ರಕರಣಗಳಲ್ಲಿ 423 ಮಂದಿ ಹೋಮ್ ಐಸೊಲೇಷನ್‌ನಲ್ಲಿದ್ದು, 41 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 2104 ಕೋವಿಡ್ ಟೆಸ್ಟ್ ಮಾಡಲಾಗಿದ್ದು, 57 ಮಂದಿಗೆ ಪಾಸಿಟಿವ್ ಬಂದಿದೆ. ರಾಜ್ಯದ ಕೋವಿಡ್ ಪಾಸಿಟಿವಿಟಿ ರೇಟ್ ಶೇ. 1.15 ಇದ್ದು, ಮರಣ ಪ್ರಮಾಣ ದರ ಶೇ. 2.70 ಇದೆ.
ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಎರಡನೇ ಬಲಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಎರಡನೇ ಬಲಿಯಾಗಿದೆ. ಕೊರೊನಾ ಸೋಂಕಿತ 51 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಡಿ.22ರಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಇವರು ದಾಖಲಾಗಿದ್ದರು. ಜ್ವರ, ಕಫ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ | Karnataka weather : ಹೊಸ ವರ್ಷಕ್ಕೆ ಮಳೆ ಎಚ್ಚರಿಕೆ; ತಿಂಗಳಾಂತ್ಯದವರೆಗೆ ನಡುಗಿಸುವ ಚಳಿ
ಎಲ್ಲರೂ ಮಾಸ್ಕ್ ಧರಿಸಿ, ಶೀತ ಜ್ವರ ಇದ್ರೆ ಮಕ್ಕಳನ್ನು ಶಾಲೆಗೆ ಕಳಿಸ್ಬೇಡಿ; ಸರ್ಕಾರ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಉಪತಳಿ ಜೆಎನ್.1 (Coronavirus JN.1) ಎಂಟ್ರಿ ಆಗಿದೆ. ಹಾಗಂತ ಭಯಪಡಬೇಕಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.. ಮಂಗಳವಾರ ನಡೆದ ಮಹತ್ವದ ಕೊರೊನಾ ಸಂಬಂಧಿತ ಸಂಪುಟ ಉಪಸಮಿತಿಯ ಸಭೆಯ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu rao) ಮಾಹಿತಿ ನೀಡಿದ ಅವರು, ಜ್ವರ ಶೀತ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎಂದರು. ಇದು ಯಾವುದೇ ಕಡ್ಡಾಯ ಆದೇಶವಲ್ಲ, ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಸಲಹೆ ಎಂದು ಅವರು ಸ್ಪಷ್ಟಪಡಿಸಿದರು.
ದಿನೇಶ್ ಗುಂಡೂರಾವ್ ಹೇಳಿದ್ದೇನು?
COVID ವಿಚಾರ ಉಪಸಮಿತಿ ಪ್ರಥಮ ಸಭೆ ಇಂದು ನಡೆಸಿದ್ದೇವೆ. ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಮುಂದಿನ ಕ್ರಮಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ, ದೇಶ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ ಮಾಹಿತಿ ಕಲೆ ಹಾಕಿದ್ದೇವೆ. ಕೊರೊನಾ ವೈರಸ್ ಉಪ ತಳಿ ಜೆಎನ್.1 ಹೆಚ್ಚಾಗುವ ಸಾಧ್ಯತೆ ಇದೆ ಈ ಮೊದಲೇ ಹೇಳಿದ್ದೆವು. ಈ ಹೊಸ ವೈರಸ್ ಜೀನೊಮ್ ಸೀಕ್ವೆನ್ಸಿಂಗ್ ಸಹ ಮಾಡಿದ್ದೇವೆ. ನಾವು ಕಳುಹಿಸಿದ ಸ್ಯಾಂಪಲ್‌ಗಳ ಪೈಕಿ 34 ಜೆಎನ್.1 ಕೇಸುಗಳು ಪತ್ತೆಯಾಗಿವೆ ಎಂದು ದಿನೇಶ್ ಗುಂಡೂ ರಾವ್ ಹೇಳಿದರು.
ಜೆಎನ್.1 ಪತ್ತೆಯಾಗಿರುವುದು ಅಚ್ಚರಿಯಲ್ಲ, ಭಯವೂ ಬೇಕಾಗಿಲ್ಲ
ರಾಜ್ಯದಲ್ಲಿ ಜೆಎನ್.1 ಉಪತಳಿ ಕಂಡುಬಂದಿರುವುದು ಅಚ್ಚರಿಯೇನಲ್ಲ. ನಾವು ಇದನ್ನು ನಿರೀಕ್ಷೆ ಮಾಡಿದ್ದೆವು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದೆ. ಅದು ನಮಗೆ ಸಮಾಧಾನಕರ ವಿಷಯ. ಆದರೆ, ನಾವೆಲ್ಲರೂ ಜಾಗೃತ ಆಗಿ ಇರಬೇಕು ಎಂದು ದಿನೇಶ್ ಗುಂಡೂ ರಾವ್ ತಿಳಿಸಿದರು.
ಎಲ್ಲರಿಗೂ ಮಾಸ್ಕ್ ಹಾಕುವಂತೆ ಸಲಹೆ, ನ್ಯೂ ಇಯರ್‌ಗೆ ನಿರ್ಬಂಧ ಇಲ್ಲ
ಯಾರಿಗಾದರೂ ಶೀತ ಜ್ವರ ಮತ್ತಿತರ ಸಮಸ್ಯೆಗಳು ಕಂಡುಬಂದರೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಎಲ್ಲರೂ ಮಾಸ್ಕ್ ಹಾಕುವಂತೆ ಸಲಹೆ ನೀಡುತ್ತೇನೆ. 60 ವರ್ಷ ಮೇಲ್ಪಟ್ಟವರು ದಯವಿಟ್ಟು ಧರಿಸಿ ಎಂದು ಹೇಳಿರುವ ಅವರು, ಶಾಲಾ ಮಕ್ಕಳಿಗೆ ಸೋಂಕಿನ ಲಕ್ಷಣ ಇದ್ದರೆ ಶಾಲೆಗಳಿಗೆ ಕಳುಹಿಸಬೇಡಿ ಎಂದರು.
ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವನ್ನು ತರುವುದಿಲ್ಲ. ಆದರೆ ಮಾಸ್ಕ್ ಉಪಯೋಗಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು ತಿಳಿಸಿದರು.
ಸೋಂಕಿಗೆ ಗುರಿಯಾದ ಮಂದಿಗೆ ಒಂದು ವಾರ ಕ್ವಾರಂಟೈನ್ ಇರಬೇಕು. ಹಾಗಂತ ಯಾವುದೇ ರೀತಿ ಆತಂಕ ಪಟ್ಟುಕೊಂಡು ಇರಬೇಕಿಲ್ಲ. ಈ ಸೋಂಕಿನಿಂದ ಹೈ ರಿಸ್ಕ್ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : New year Celebration : ಹೊಸ ವರ್ಷಾಚರಣೆಗೆ ಕೋವಿಡ್ ಮಾರ್ಗಸೂಚಿ ಇಲ್ಲ, ಬಿಗಿ ಭದ್ರತೆ ಮಾತ್ರ
ದಿನವೂ ಐದು ಸಾವಿರ ಟೆಸ್ಟ್ ಟಾರ್ಗೆಟ್
ಹಿಂದಿನ ಕೊರೊನಾ ಅವಧಿಯಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ನಿನ್ನೆ 3 ಸಾವಿರಕ್ಕೂ ಹೆಚ್ಚು ಟೆಸ್ಟಿಂಗ್ ಮಾಡಿದ್ದೇವೆ. ಮುಂದೆ ಖಂಡಿತ 5 ಸಾವಿರ ಟೆಸ್ಟ್ ಮಾಡ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕೊರೊನಾ ಹೊಸ ತಳಿಯ ಪತ್ತೆಗಾಗಿ ಜಿನೊಮ್ ಸೀಕ್ವೆನ್ಸಿಂಗ್ ತುಂಬ ಮುಖ್ಯ ಆಗುತ್ತದೆ. ರಾಜ್ಯದಲ್ಲಿ 436 COVID ಕೇಸ್ ಗಳು ಇವೆ. ನಿಜವೆಂದರೆ, ದೇಶದಲ್ಲಿ ನಮ್ಮಲ್ಲಿ ಮಾತ್ರ ಹೆಚ್ಚು ಟೆಸ್ಟ್ ಮಾಡುತ್ತಿರುವುದು. ಹೀಗಾಗಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಬಿಟ್ಟರೆ ಯಾವುದೇ ಆತಂಕವಿಲ್ಲ ಎಂದರು. ಈಗ 400 ಜನ ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ಅವರ ಮೇಲೆ ನಿಗಾ ಇಡುತ್ತೇವೆ.
ಆರೋಗ್ಯ ಕಾರ್ಯಕರ್ತರಿಗೆ ಫ್ಲೂ ವ್ಯಾಕ್ಸಿನ್
ವೈದ್ಯರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿಗಳಿಗೆ ಫ್ಲೂ ವ್ಯಾಕ್ಸಿನ್ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ ದಿನೇಶ್ ಗುಂಡೂ ರಾವ್ ಅವರು, ವಿಕ್ಟೋರಿಯಾ ಆಸ್ಪತ್ರೆ, ರಾಜೀವ್ ಗಾಂಧಿ ಮತ್ತು ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ತೆರೆಯಲಿದ್ದೇವೆ ಎಂದರು.
ಇದನ್ನೂ ಓದಿ | Coronavirus News: ಜನವರಿಯಿಂದ ಪ್ರತಿದಿನ 10 ಸಾವಿರ ಕೇಸ್! ಜ್ವರ ಇದ್ದವರಿಗೆ ಕಡ್ಡಾಯ ಟೆಸ್ಟ್
ಕೊರೊನಾ ಪರೀಕ್ಷೆಗೆ ಸದ್ಯವೇ ದರ ನಿಗದಿ, ಸಿಟಿ ಸ್ಕ್ಯಾನ್ ಅಗತ್ಯವಿಲ್ಲ
ಮುಂದಿನ ದಿನಗಳಲ್ಲಿ ಕೋವಿಡ್ ಪರೀಕ್ಷೆ ಅನಿವಾರ್ಯವಾಗುತ್ತದೆ. ಆಗ ಕೆಲವರು ಹೆಚ್ಚು ದರ ವಸೂಲಿ ಮಾಡುವುದನ್ನು ತಡೆಯಲು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಸದ್ಯವೇ ದರ ನಿಗದಿ ಮಾಡಲಿದ್ದೇವೆ ಎಂದು ಅವರು ತಿಳಿಸಿದರು. ಇನ್ನೆರೆಡು ದಿನಗಳಲ್ಲಿ ದರ ನಿಗದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. COVID ಇದೆ ಎನ್ನುವುದು ಸಾಬೀತು ಆಗೋವರೆಗೂ ಸಿಟಿ ಸ್ಕ್ಯನ್ ಮಾಡುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ