ವಿಜಯಪುರ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ (Independence Day) ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಪರೂಪದ ಧ್ವಜಾರೋಹಣವೊಂದು ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿನ ಶಿಕ್ಷಣ ಸಂಸ್ಥೆಯೊಂದರಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವದ ದಿನ 75 ವರ್ಷದ ಹಳೇ ಧ್ವಜದ ಆರೋಹಣ ಮಾಡಲಾಗಿದೆ.
ನಾಲತವಾಡ ಪಟ್ಟಣದಲ್ಲಿನ ವಿಶ್ವಚೇತನ ಶಿಕ್ಷಣ ಸಂಸ್ಥೆಯಲ್ಲಿ ಈ ಧ್ವಜಾರೋಹಣ ನೆರವೇರಿಸಲಾಗಿದೆ. ನಾಲತವಾಡ ಮೂಲದ ಧಾರವಾಡ ನಿವಾಸಿಯಾಗಿರುವ 91 ವರ್ಷದ ಗಂಗಾಧರ ನರಸಿಂಗರಾವ್ ಕುಲಕರ್ಣಿ ಎಂಬುವವರ ಬಳಿ ಈ ಧ್ವಜವಿದೆ. ಇವರು ನಾಲ್ಕನೇ ತರಗತಿ ಓದುತ್ತಿದ್ದಾಗ ಆದಪ್ಪ ಯರಗುಂಟಿ ಎಂಬ ಗುರುಗಳು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮಕ್ಕಾಗಿ ಎಲ್ಲ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪ್ರತೀಕವಾಗಿ ಆಗಸ್ಟ್ 14ರ, 1947ರ ಮಧ್ಯರಾತ್ರಿ ರಾಷ್ಟ್ರಧ್ವಜ ನೀಡಿದ್ದರಂತೆ.
ಆಗ 25 ಪೈಸೆ ಕೊಟ್ಟು ಖರೀದಿಸಿದ್ದ ರಾಷ್ಟ್ರಧ್ವಜವನ್ನು ಗಂಗಾಧರ ಅವರು ತಮ್ಮ ಹೆತ್ತಮ್ಮನವರಿಗೆ ಕಾಣಿಕೆಯಾಗಿ ಕೊಟ್ಟಿದ್ದರಂತೆ. ಸುಮಾರು ಅರವತ್ತು ವರ್ಷಗಳ ಕಾಲ ಅವರ ತಾಯಿ ಈ ಧ್ವಜವನ್ನು ಪ್ರತಿವರ್ಷ ಧ್ವಜಾರೋಹಣದ ಸಂದರ್ಭದಲ್ಲಿ ಹಾರಿಸುತ್ತಿದ್ದರಂತೆ. ಇಂದಿಗೂ ತಮ್ಮ ಧಾರವಾಡದ ಮನೆಯಲ್ಲಿ ಈ ಧ್ವಜವನ್ನ ಹಾರಿಸುತ್ತಿದ್ದರು. ಆದರೆ ಈ ಬಾರಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಲತವಾಡ ಪಟ್ಟಣದ ತಮ್ಮ ನಿವಾಸದಲ್ಲಿ ಬಳಿ ಇರುವ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಬ್ಯಾಂಕ್ ಲಾಕರ್ನಲ್ಲಿರಲಿದೆ ಈ ರಾಷ್ಟ್ರ ಧ್ವಜ!
ಧ್ವಜಕ್ಕೆ ಧಕ್ಕೆಯಾಗಬಾರದು, ಸುರಕ್ಷಿತವಾಗಿ ಇರಬೇಕೆಂಬ ಕಾರಣಕ್ಕೆ ತಾಯಿಯ ಆಸೆಯಂತೆ ಕುಲಕರ್ಣಿಯವರು ಧಾರವಾಡದ ಬ್ಯಾಂಕ್ ಲಾಕರಿನಲ್ಲಿ ಈ ಧ್ವಜವನ್ನು ಇಡುತ್ತಿದ್ದಾರೆ. ಪ್ರತಿವರ್ಷ ಧ್ವಜಾರೋಹಣದ ವೇಳೆ ಇದನ್ನು ಮನೆಗೆ ತರುತ್ತಾರೆ. ಧ್ವಜ ವಂದನೆಯಾದ ನಂತರ ಮತ್ತೆ ಮರುದಿನ ಬ್ಯಾಂಕಿಗೆ ಒಯ್ದು ಈ ಧ್ವಜವನ್ನು ಸುರಕ್ಷಿತವಾಗಿಡುತ್ತಾರೆ.
ಇದನ್ನೂ ಓದಿ | Independence Day | ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ 1000 ಅಡಿ ಉದ್ದದ ತ್ರಿವರ್ಣ ಧ್ವಜ ಯಾತ್ರೆ!