ಬೆಂಗಳೂರು: ಭಾರತದಲ್ಲಿ ಚುನಾವಣೆ ಎದುರಿಸುವ ಮಾನಸಿಕತೆ, ವ್ಯವಸ್ಥೆಯನ್ನೇ ಸಂಪೂರ್ಣ ಬದಲಾಯಿಸಿ “ಚುನಾವಣಾ ಚಾಣಕ್ಯ” ಎಂದೇ ಹೆಸರು ಪಡೆದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶುಕ್ರವಾರ ಕರ್ನಾಟಕ ಪ್ರವಾಸಕ್ಕೆ ಆಗಮಿಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷವಿರುವಂತೆಯೇ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅಮಿತ್ ಶಾ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ರಾಜ್ಯ ಬಿಜೆಪಿ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ. ಖಚಿತ ದತ್ತಾಂಶ, ವಾಸ್ತವ ವಿಚಾರಗಳೊಂದಿಗೆ ವ್ಯವಹರಿಸುವ ಅಮಿತ್ ಶಾ ಎದುರು ಸುಖಾಸುಮ್ಮನೆ ಮಾತನಾಡಿದರೆ ಆಗುವುದಿಲ್ಲ ಎಂಬುದನ್ನು ಅರಿತಿರುವ ಕೇಂದ್ರ ನಾಯಕರು, ರಾಜ್ಯ ಬಿಜೆಪಿ ಮುಖಂಡರು ಸಿದ್ಧತೆ ನಡೆಸಲು ಒತ್ತಡ ಹೇರುತ್ತಿದ್ದಾರೆ.
ಕಳೆದ ಬಾರಿಯೂ ಹೀಗೆಯೇ ಆಗಿತ್ತು !
ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿಯಿಂದಲೇ ಸರ್ಕಾರ ವಿಸರ್ಜನೆ ಮಾಡಿ ಅವಧಿಪೂರ್ವ ಚುನಾವಣೆಗೆ ಹೋಗುವ ಸಾಧ್ಯತೆಯನ್ನು ಹೊರತುಪಡಿಸಿ, 2023ರಲ್ಲಿ ಚುನಾವಣೆ ನಡೆಯುವುದು ಖಚಿತ. ಇನ್ನೊಂದು ವರ್ಷ ಇದ್ದರೂ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಬಿಜೆಪಿ ಚುನಾವಣಾ ತಯಾರಿ ಮೋಡ್‌ಗೆ ಹೊರಳಿಲ್ಲ. ಇತ್ತೀಚೆಗಷ್ಟೆ ಮುಕ್ತಾಯವಾದ ಪಂಚರಾಜ್ಯ ಚುನಾವಣೆಯಲ್ಲಿ, ಅದರಲ್ಲೂ ಪ್ರಮುಖವಾದ ಉತ್ತರ ಪ್ರದೇಶ ಚುನಾವಣೆಯತ್ತ ಕೇಂದ್ರ ನಾಯಕರು ಗಮನ ಹರಿಸಿದ್ದರಿಂದ ಕರ್ನಾಟಕದತ್ತ ಆಗಮಿಸಿರಲಿಲ್ಲ. ಇದೀಗ ಐದು ರಾಜ್ಯಗಳ ಚುನಾವಣೆ ಮುಗಿದಿದೆ. ಅದರಲ್ಲೂ ನಾಲ್ಕರಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದು ಹುಮ್ಮಸ್ಸಿನಿಂದ ಬೀಗುತ್ತಿದೆ. ಇಷ್ಟಾದರೂ ಚುನಾವಣೆ ಕುರಿತು ರಾಜ್ಯ ನಾಯಕರ ತಯಾರಿ ಅಷ್ಟಕ್ಕಷ್ಟೇ.
2018ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ದಭದಲ್ಲೂ ಇದೇ ಸ್ಥಿತಿ ಇತ್ತು. 2017ರಲ್ಲಿ ಉತ್ತರ ಪ್ರದೇಶ ಹಾಗೂ ಗೋವಾ ಚುನಾವಣೆಯಲ್ಲಿ ಕೇಂದ್ರ ನಾಯಕರು ಮಗ್ನರಾಗಿದ್ದಾಗ ಇತ್ತ ರಾಜ್ಯದಲ್ಲಿ ಇನ್ನೂ ಗುಂಪುಗಾರಿಕೆ ಮಾಡಿಕೊಂಡು ಚುನಾವಣೆ ತಯಾರಿಯತ್ತ ಹೆಚ್ಚಿನ ಗಮನ ಹರಿಸಿರಲಿಲ್ಲ. ಉತ್ತರ ಪ್ರದೇಶ ಮತ್ತು ಗೋವಾ ಚುನಾವಣೆ ಮುಗಿಸಿ ರಾಜ್ಯ ಪ್ರವಾಸಕ್ಕೆ ಆಗಮಿಸಿದ ಮೊದಲ ಸಭೆಯಲ್ಲೇ ರಾಜ್ಯ ಬಿಜೆಪಿ ನಾಯಕರ ಬೆವರಿಳಿಸಿದ್ದರು. ಸಂಘಟನಾತ್ಮಕವಾಗಿ ರಾಜ್ಯ ನಾಯಕರು ನೀಡಿದ ವರದಿಗಳನ್ನು, ತಮ್ಮದೇ ಜಾಲದ ಮೂಲಕ ತರಿಸಿದ್ದ ವರದಿಯೊಂದಿಗೆ ಹೋಲಿಕೆ ಮಾಡಿದ್ದರು. ಪರಿಸ್ಥಿತಿ ಹೀಗೆಯೇ ಹೋದರೆ ಸೋಲು ಖಚಿತ. ನಾವು ಹೇಳಿದಂತೆ ಚುನಾವಣೆ ಎದುರಿಸಲಿದರೆ ಉತ್ತರ ಪ್ರದೇಶದ ರೀತಿ ಅಭೂತಪೂರ್ವ ಗೆಲುವು ಕಾಣುತ್ತೀರಿ. ನಮ್ಮದೇ ದಾರಿ ಎಂದು ನಡೆದರೆ ಗೋವಾ ರೀತಿ ಅತಂತ್ರ ವಿಧಾನಸಭೆಗೆ ಸಾಗುತ್ತೀರಿ ಎಂದು 2017ರಲ್ಲಿ ಅಮಿತ್ ಶಾ ಎಚ್ಚರಿಕೆ ನೀಡಿದ್ದರು.
ಆ ಸಭೆ ಇನ್ನೂ ನೆನಪಿದೆ
ರಾಜ್ಯದ ಬಹುತೇಕ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅಮಿತ್ ಶಾ ನೇತೃತ್ವದಲ್ಲಿ ನಡೆದ ಆ ಮೊದಲ ಸಭೆ ಇನ್ನೂ ನೆನಪಿದೆ. ಈ ಬಾರಿಯೂ ಅಗತ್ಯ ಸಿದ್ಧತೆಗಳಿಲ್ಲದೆ ಹೋದರೆ ಕೋರ್ ಕಮಿಟಿಯಲ್ಲಿ ಜಾಡಿಸುತ್ತಾರೆ ಎಂಬುದನ್ನು ಅರಿತಿರುವ ರಾಜ್ಯ ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ವಿಜಯೇಂದ್ರ ನೇತೃತ್ವ !
ಅಧಿಕೃತವಾಗಿ ಅಮಿತ್ ಶಾ ಅವರು ಏಪ್ರಿಲ್ 1 ರಂದು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ರಾಜ್ಯ ಸರ್ಕಾರದ ʼಕ್ಷೀರ ಅಭಿವೃದ್ಧಿ ಬ್ಯಾಂಕ್ʼ ಯೋಜನೆಗೆ ಚಾಲನೆ ಹಾಗೂ ಸಹಕಾರ ಇಲಾಖೆಯಿಂದ “ಯಶಸ್ವಿನಿ” ಆರೋಗ್ಯ ವಿಮೆ ಯೋಜನೆಗೆ ಮರುಚಾಲನೆ ನಡೆಸಲಿದ್ದಾರೆ.
ಇವುಗಳಲ್ಲಿ ಮುಖ್ಯವಾಗಿ ತುಮಕೂರಿನಲ್ಲಿ ನಡೆಯಲಿರುವ ಡಾ. ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮವನ್ನು ರಾಜಕೀಯ ರ‍್ಯಾಲಿ ರೀತಿಯಲ್ಲಿ ಸಂಘಟಿಸಲಾಗುತ್ತಿದೆ. ಬಿಜೆಪಿಯ ಸಂಪೂರ್ಣ ಸಂಘಟನೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು ಎರಡು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಸಿದ್ಧಗಂಗಾ ಮಠವು ಎಲ್ಲ ಜಾತಿ, ಜನಾಂಗಗಳ ಜನರಿಗೂ ಸೇವೆ ನೀಡುತ್ತಿದೆ, ಎಲ್ಲ ಸಮುದಾಯದವರಿಗೂ ಮಾರ್ಗದರ್ಶನ ನೀಡುತ್ತ ಬಂದಿದೆ. ಆದರೂ ನಿರ್ದಿಷ್ಟವಾಗಿ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ರಾಜಕೀಯ ಸಂಕಷ್ಟದ ಸಂದರ್ಭದಲ್ಲಿ ಮಠವು ಬಿ.ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದೆ. ಇದೀಗ ವಯೋಮಿತಿಯ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ ಇದೀಗ ತುಮಕೂರಿನ ಸಂಪೂರ್ಣ ಕಾರ್ಯಕ್ರಮದ ಹೊಣೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ನೀಡಲಾಗಿದೆ. ಹಾಗಾಗಿ ಈ ಕಾರ್ಯಕ್ರಮವು ವಿಜಯೇಂದ್ರ ನೇತೃತ್ವ ಹಾಗೂ ನಾಯಕತ್ವ ಗುಣವನ್ನು ಒರೆಗೆ ಹಚ್ಚುವ ಕಾರ್ಯಕ್ರಮ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಬೃಹತ್ ಸಭೆ ಇಲ್ಲ
ರಾಜ್ಯ ಬಿಜೆಪಿ ಮೂಲಗಳ ಪ್ರಕಾರ, ಅಮಿತ್ ಶಾ ಪ್ರವಾಸದ ಸಂದರ್ಭದಲ್ಲಿ ಸಂಗಟನಾತ್ಮಕವಾದ ಯಾವುದೇ ಬೃಹತ್ ಸಭೆಯನ್ನು ಆಯೋಜಿಸಿಲ್ಲ. ಆದರೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾ ಭಾಗವಹಿಸಲಿದ್ದಾರೆ. ಅಧಿಕೃತವಾಗಿ ರಾಷ್ಟ್ರೀಯ ಬಿಜೆಪಿಗೆ ಜೆ.ಪಿ. ನಡ್ಡಾ ಅವರೇ ಅಧ್ಯಕ್ಷರಾದರೂ ಅಮಿತ್ ಶಾ ಅವರ ಪ್ರಭಾವ ಇನ್ನೂ ಕಡಿಮೆ ಆಗಿಲ್ಲ. ಯಾವುದೇ ಚುನಾವಣೆ ಜಯಿಸಿದಾಗಲೂ ಅದರಲ್ಲಿ ಶಾ ಅವರ ಮುದ್ರೆ ಕಂಡೇ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಅಮಿತ್ ಶಾ ಅವರ ಪ್ರವಾಸ ನಿಜಕ್ಕೂ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ತಯಾರಿಯನ್ನೂ ಮಾಡಿಕೊಂಡಿದ್ದೇವೆ. ಬಹುಶಃ ಸದ್ಯದಲ್ಲೇ ಮತ್ತೊಮ್ಮೆ ಅಮಿತ್ ಶಾ ಅವರು ಸಂಪೂರ್ಣ ಚುನಾವಣಾ ಪ್ರವಾಸವನ್ನೇ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.